ಸ್ವಲ್ಪ ತಡಿ, ನೋಡ ಹೋಗಲಿ, ಚಂದ್ರ ಮತ್ತೆ ಬರುತ್ತಾನೆ.
ಅಲ್ಲಿ ಕಾಣುವ ಗೋಡೆಯ ಮೇಲೆ ಬಾಗಿಲ ಸಂದಿನಿಂದ ಬಿದ್ದಿರುವ
ಬೆಳಕನ್ನು ಹಿಡಿಯುವುದಕ್ಕೆ ಆಗುವುದಿಲ್ಲ.
ನೀನು ಹೇಗೆ ಇರಬೇಕು ಅಂದುಕೊಳ್ಳುತ್ತೀಯೋ
ಹಾಗೆ ಇರುವುದಕ್ಕೆ ಆಗುವುದಿಲ್ಲ.
ಚಳಿಗಾಲದಲ್ಲಿ ಗೋಪುರದ ದೊಡ್ಡ ಗಂಟೆಯ ಸದ್ದಿನ ಹಾಗೆ
ಮನಸ್ಸು ಕಲಕುವ ರಾಗದ ಹಾಗೆ
ನಿನ್ನ ಮನಸ್ಸು ಭಾರವಾಗಿದೆ.
ವಿಷ ತಿಂದ ನೋಣ ಸಾಯುವ ಮೊದಲು
ತಲೆ ತಿರುಗಿ ಹಾರಿ ಹಾರಿ ಕೆಳಗೆ ಬಿದ್ದು ಒದ್ದಾಡುವ ಹಾಗೆ
ನಿನ್ನ ಮನಸ್ಸು ಅಲ್ಲಲ್ಲಿ ರೆಕ್ಕೆ ಬಡಿಯುತ್ತೆ, ಒದ್ದಾಡುತ್ತೆ,
ನಿನ್ನೆ ಆಗಿದ್ದು ಜ್ಞಾಪಿಸಿಕೊಂಡು ನೋಯುತ್ತೆ.
ಮಾತು ಚುಚ್ಚುತ್ತೆ, ಮಾತು ನೋಯಿಸುತ್ತೆ
ಯಾವುದೋ ಮಾತು ಗೊತ್ತಿಲ್ಲದ ಯಾವುದೋ ಮುಖವನ್ನು ತೋರಿಸುತ್ತೆ-
ನಮ್ಮ ಮುಖ, ಜನದ ಮುಖ.
ಸಗಣಿ ನೀರಿನಂಥ ಡಾಂಬರಿನಂಥ, ಕಲ್ಲಿದ್ದಲಿನಂಥ ಮಾತು
ಮಾತು ಗಾಳಿಯಾಗುವುದಕ್ಕಿಂತ ಬೇಗ
ಜನದ ಮುಖ ಬದಲಾಯಿಸುತ್ತೆ.
ನಗು ಸೇಡಿನ ಸೂಜಿಯಾಗಿ ರೊಚ್ಚಿನ ಹೊಲಿಗೆ ಹಾಕುತ್ತೆ
ಮರೆತು ಹೋಗುತ್ತೆ, ದ್ವೇಷ ಆತ್ಮೀಯತೆ ಆಗುತ್ತೆ.
ಅದೂ ಮರೆತು ಹೋಗುತ್ತೆ.
ಭಿಕ್ಷುಕರು,- ಯಾರು ಕಾಸು ಕೊಟ್ಟರು
ಯಾರು ತಿಂಡಿ ಕೊಟ್ಟರು, ಯಾರು ಮುಖಕ್ಕೆ ಉಗಿದು ಬಯ್ದರು
ಎನ್ನುವುದೆಲ್ಲಾ ಮರೆತು ಹೋಗುತ್ತಾರೆ.
ಕಂಡಿದ್ದು ಕಾಣುವಷ್ಟು ಹೊತ್ತು ನಿಜ.
ಆದರೆ ನೊಂದವರಿಗೆ ಮಾತ್ರ ನೆನಪು.
ಸಾಕು ನಿಲ್ಲಿಸು. ಸುಮ್ಮನೆ ಹೆಣ್ಣು ಕೋಗಿಲೆಯ ಹಾಗೆ
ವಟವಟಾ ರಾಗ ಹಾಡಬೇಡ. Sorry.
ಹೀಗೆ ಒಳ್ಳೆ ತಿದೀ ಹಾಗೆ ನಿಟ್ಟುಸಿರು ಬಿಡಬೇಡ.
ನೆಲದ ಮೇಲೆ ಬಿದ್ದು ಒದ್ದಾಡಿ ಹೊರಳಾಡಬೇಡ
ಹಾವಿನ ಪೊರೆ ಕಳಚುವಾಗ,
ಹಳೆಯ ಎಲೆ ಉದುರಿ ಹೊಸ ಚಿಗುರು ಬರುವಾಗ,
ಬೆಳೆಯುವಾಗ, ಇನ್ನೂ ಹೆಚ್ಚು ಹಿಂಸೆಯಾಗುತ್ತೆ, ಗೊತ್ತ.
ದುಃಖದ ಸಮುದ್ರವನ್ನು ನಿನ್ನ ರೆಪ್ಪೆಯ ಹಿಂದೆ,
ತೆಳ್ಳನೆ ತುಟಿಗಳ ಹಿಂದೆ ಬಚ್ಚಿಡಬೇಡ.
ಮಳೆಗೆ ಮುಂಚೆ ಇರುವ ಧಗೆಯ ಹಾಗೆ ಬೇಯುತ್ತ ಇರಬೇಡ.
ಅಳುವುದಿದ್ದರೆ ನನ್ನ ತೋಳಿನೊಳಗೆ ನನ್ನ ಎದೆಗೆ ಒರಗಿಕೊಂಡು ಅತ್ತುಬಿಡು.
ನಿಜವಾದ ದುಃಖ ಅಮೂಲ್ಯ.
ನಿನ್ನ ದುಃಖಕ್ಕೆ ಒಂದು ಆಕಾರ ಕೊಡು.
ದೇವರೆ, ಇವಳೇಕೆ ಹೀಗೆ ನನ್ನ ತಪ್ಪು ತಿಳಿಯುತ್ತಾಳೆ-
ನನ್ನ ಮೈ ಬಿಸಿಯನ್ನು ಅವಳ ಬಿಸಿಯೊಡನೆ ಕರಗಿಸಿ
ಎರಕ ಹೊಯ್ಯುವ ಆಸೆ ಭುಗಿಲೆದ್ದಿದೆ ಎಂದೇಕೆ ಅರ್ಥಮಾಡಿಕೊಳ್ಳುತ್ತಾಳೆ?
ಅವಳ ಹಿಂಸೆಯಿಂದ ನನಗೂ ಹಿಂಸೆಯಾಗುತ್ತಿದೆ,
ಸಮಾಧಾನ ಮಾಡಲಾಗದ ಹಿಂಸೆ,
ನಾನು ಅವಳಿಗೆ ಅರ್ಥವಾಗದ ಹಿಂಸೆ,
ಅವಳ ದುಃಖದ ಬಿಸಿ ಕಡಿಮೆಯಾಗುತ್ತಿದ್ದ ಹಾಗೆ
ನನ್ನ ಮನಸ್ಸಿನ ಮುಂದೆ ಕಂಡು ಕರೆಯ ತೊಡಗುವ,
ಅವಳ ದುಃಖದ ಬೆಲೆ ಇಳಿಸುವ
ಬೇರೆ ಮುಖಗಳ, ಮಾತುಗಳ ಹಿಂಸೆ.
ಕಾಲದ ನೀರಿನಲ್ಲಿ ಎಲ್ಲ ಕರಗಿ ಹೋಗುತ್ತೆ.
ನೀನು ನಾನು ದಿನ ನಿತ್ಯದ ಸಾವಿರ ವಿವರಗಳಲ್ಲಿ ಹಂಚಿಹೋಗುತ್ತ
ನಿನ್ನೆಯ ಘಟನೆ ಮರೆಯುತ್ತಾ ಹೋಗುತ್ತೆ.
ಮುಂದೆ ಯಾವತ್ತಾದರೂ ಜ್ಞಾಪಕ ಆದರೆ
ಮರೆತು ಹೋದ ಹಾಡಿನ ಪಲ್ಲವಿ ಮಾತ್ರ ಜ್ಞಾಪಕ ಬಂದ ಹಾಗಿರುತ್ತೆ.
ಆಮೇಲೆ, ಇನ್ನೂ ಕೆಲವು ಕಾಲ ಆದಮೇಲೆ, ಅದು
ಮನಸ್ಸು ಸ್ವಲ್ಪ ಹೊತ್ತು ಬಿಕೋ ಅನ್ನಿಸುವ ಹಾಗೆ
ಮಾಡುವ ಭಾವನೆ ಆಗುತ್ತೆ.
ಇನ್ನೂ ಆಮೇಲೆ, ಎಷ್ಟು ಜ್ಞಾಪಿಸಿಕೊಂಡರೂ
ಜ್ಞಾಪಕ ಬರದ ರಾತ್ರಿಯ ಕನಸಿನ ಹಾಗಾಗುತ್ತೆ.
ಆಗ ನಾವು ಸತ್ತು ಹೋಗುತ್ತೇವೆ.
*****