ಪ್ರಿಯ ಸಖಿ,
ಈ ಬದುಕಿನಲ್ಲಿ ಎಲ್ಲರೂ ಏನಾದರೊಂದಕ್ಕಾಗಿ ಹುಡುಕಾಡುತ್ತಲೇ ಇರುತ್ತಾರೆ. ಸಂಪತ್ತು, ಪ್ರೀತಿ, ಶಾಂತಿ, ಅಧಿಕಾರ, ಹೆಸರು…. ಇತ್ಯಾದಿಗಾಗಿ ಹುಡುಕುವವರು ಕೆಲವರಾದರೆ, ಇರುವುದೆಲ್ಲವ ಬಿಟ್ಟು ಇಲ್ಲದ್ದನ್ನು ಹುಡುಕುವವರು, ತಾವು ಮತ್ತೆ ಮತ್ತೆ ಕಳೆದುಕೊಳ್ಳುತ್ತಲೇ ಇರುವುದನ್ನೆಲ್ಲಾ ಜೀವನ ಪೂರ್ತಿ ಹುಡುಕುವವರು, ಬದುಕಿನ ಕೊನೆಯವರೆಗೂ ಏನನ್ನು ಹುಡುಕುತ್ತಿದ್ದೇವೆಂದರಿಯದೆಯೂ ಹುಡುಕುತ್ತಲೇ ಇರುವವರು, ಇತರರಲ್ಲಿ ತಮ್ಮನ್ನು ಹುಡುಕುವವರು… ಇಂತಹ ಕೆಲ ಹುಡುಕಾಟದವರನ್ನೂ ಕಾಣುತ್ತೇವೆ. ಆದರೆ ನಾನೀಗ ಹೇಳಲಿರುವ ಹುಡುಕಾಟದ ಕಥೆಯನ್ನು ನೀನು ಕೇಳಿರಲಾರೆ. ಕಥೆ ಕೇಳಿದ ನಂತರ ನಿಜಕ್ಕೂ ಕಥಾನಾಯಕನ ಹುಡುಕಾಟದ ಮೂಲವೇನೆಂದು ನಿನಗರ್ಥವಾದರೆ ನನಗೂ ತಿಳಿಸು.
ಈಗ ಕೆಲ ದಿನಗಳಿಂದ ಅವನನ್ನು ಹೀಗೇ ನೋಡುತ್ತಿದ್ದೇನೆ. ಕೊಳಕು ಜೀನ್ಸ್, ಮಾಸಲು ಟೀ ಶರ್‍ಟ್ ತೊಟ್ಟು ಕೆದರಿದ ತಲೆ ಮುಖದ ತುಂಬಾ ನೂರು ಪ್ರಶ್ನೆಗಳನ್ನು ಹೊತ್ತು ಗೊಂದಲ ಗೊಂಡಿರುವ ಅವನ ಕಣ್ಣಿನ ತುಂಬಾ ಹುಚ್ಚು ಕಳೆ ತುಂಬಿರುತ್ತದೆ. ಎದುರಿಗೆ ಸಿಕ್ಕುವ ಎಲ್ಲರ ಮುಖವನ್ನೂ ಪರೀಕ್ಷಿಸಿ ನೋಡುತ್ತಾ ಏನನ್ನೋ ಹುಡಕುವವನಂತೆ ಕಾಣುತ್ತಾನೆ. ಇವನು ಮುಖಗಳಲ್ಲಿ ಹುಡುಕುತ್ತಿರುವುದಾದರೂ ಏನನ್ನು? ಸೌಂದರ್ಯವನ್ನೇ, ಬುದ್ಧಿವಂತಿಕೆಯನ್ನೇ, ಪೆದ್ದುತನವನ್ನೇ, ಪ್ರೀತಿಯನ್ನೇ ಅಥವಾ…. ಉತ್ತರ ಹೊಳೆಯಲಿಲ್ಲ. ಮತ್ತೂ ಎರಡು ದಿನ ಅವನನ್ನು ಗಮನವಿಟ್ಟು ಪರೀಕ್ಷಿಸಿದೆ. ಅವನ ಹುಡುಕಾಟ ಮುಗಿದಂತೆಯೇ ಕಾಣಲಿಲ್ಲ. ಅವನ ಕಂಗಳಲ್ಲಿ ಅದೇ ಪ್ರಶ್ನಾರ್ಥಕ ಚಿಹ್ನೆ. ಹುಡುಕಾಟ ವ್ಯರ್ಥವೇ ಎಂಬ ನೋವು ಹುಡುಕುತ್ತಿರುವುದು ಸಿಕ್ಕೀತೆ ಎಂಬ ಕಾತರ. ಹುಡುಕಾಡಿ ಸೋತಿದ್ದರ ಸುಸ್ತು. ಎಲ್ಲವೂ ಗೋಚರವಾಗುತ್ತಿತ್ತು. ಕೊನೆಗೊಮ್ಮೆ ಅವನನ್ನು ತಡೆದು ನಿಲ್ಲಿಸಿ ಕೇಳಿಯೇ ಬಿಟ್ಟೆ. ಏನು ಹುಡುಕುತ್ತಿದ್ದೀಯಾ? ಅವನು ನಿರ್ಲಿಪ್ತನಾಗಿ ಉತ್ತರಿಸಿದ. ಒಂದು ಮುಖ. ನನಗೆ ನಗೆ ಉಕ್ಕಿ ಬಂತು. ಇವನು ಹುಚ್ಚನಿರಬಹುದೇ? ಈ ಮುಖಗಳ ಸಂತೆಯಲ್ಲಿ ಒಂದು ಮುಖಕ್ಕಾಗಿ ಹುಡುಕುವುದೆಂದರೇ ?… ಆದರೂ ಕೇಳಿದೆ. ಒಂದು ಮುಖವೆಂದರೇ ? ಇಲ್ಲಿ ಮುಖಗಳಿಗೇನು ಬರವೇ ? ನಿನಗೆಂತಹಾ ಮುಖಬೇಕು ?
ಹೌದು ಇಲ್ಲಿ ಮುಖಕ್ಕೇನೂ ಬರವಿಲ್ಲ. ಆದರೆ ನನಗೆ ಒಂದೇ ಒಂದು ನಿಜಮುಖ ಬೇಕು. ಈಗ ನಾನು ನಗಲಿಲ್ಲ. ನನಗೆ ಅರ್ಥವಾಗಿತ್ತು. ಏಕಾಗಿ? ಕೇಳಿದೆ. ನಾನೊಬ್ಬ ಭಾವ ಚಿತ್ರಗಾರ. ಭಾವಚಿತ್ರಗಳನ್ನು ಬಿಡಿಸುವುದರಲ್ಲಿ ನಿಪುಣ. ಎಲ್ಲ ನನ್ನ ಗುರುಗಳು ಸಿಗುವವರೆಗೂ ಹಾಗೆಂದು ಕೊಂಡಿದ್ದೆ… ಮಾತು ಅರ್ಧಕ್ಕೇ ನಿಲ್ಲಿಸಿ ಅವನು ಭಾವಪರವಶನಾದ. ಮತ್ತೆ ನಾನೇ ಎಚ್ಚರಿಸಿದೆ. ನಾನು ಇದುವರೆಗೆ ನೂರಾರು ಭಾವಚಿತ್ರಗಳನ್ನು ಬಿಡಿಸಿದ್ದೇನೆ. ಅದನ್ನು ಅದ್ಭುತಗಳೆಂದು ವಿಮರ್ಶಕರೂ ಮೆಚ್ಚಿಕೊಂಡಿದ್ದಾರೆ. ಆದರೆ ನನ್ನ ಗುರುಗಳು ಅವುಗಳಾವುದನ್ನೂ ಒಪ್ಪಿಕೊಳ್ಳಲೇ ಇಲ್ಲ. ಎಲ್ಲಾ ಅಪೂರ್ಣವಾಗಿದೆ ಎಂದು ತಿರಸ್ಕರಿಸಿಬಿಟ್ಟರು…. ನೋವಿನಿಂದ ಹೇಳಿದವನು ಮತ್ತೆ, ಗುರುಗಳು ಹೇಳಿದರು, ವ್ಯಕ್ತಿಯೊಬ್ಬನ ಭಾವಚಿತ್ರವೆಂದರೆ ಬರಿಯ ಒಂದು ಬಣ್ಣ ತುಂಬಿದ ಚಿತ್ರವಲ್ಲ. ಅದರಲ್ಲಿ ಅವನ ವ್ಯಕ್ತಿತ್ವವಿಡೀ ಕಾಣುವಂತಿರಬೇಕು. ಆ ಭಾವಚಿತ್ರ ಬಿಡಿಸು. ಅದು ಸಾಧ್ಯವಿಲ್ಲ ಎಂದಾದರೆ ಮುಖವಾಡವಿಲ್ಲದ ಒಂದೇ ಒಂದು ನಿಜ ವ್ಯಕ್ತಿಯ ಭಾವ ಚಿತ್ರವನ್ನು ಬಿಡಿಸು ಎಂದರು. ಒಂದೇ ಚಿತ್ರದಲ್ಲಿ ವ್ಯಕ್ತಿ ಹಲವು ಮುಖಗಳನ್ನೊಳಗೊಂಡ ಒಂದು ಮುಖವನ್ನು ಚಿತ್ರಿಸಲು ಪ್ರಯತ್ನಿಸಿದೆ. ಅದು ಸಾಧ್ಯವೇ ಆಗಲಿಲ್ಲ. ಸೋತು ಹೋದೆ. ಕೊನೆಗೆ ಒಂದಾದರೂ ಮುಖವಾಡವಿಲ್ಲದ ನಿಜಮುಖ ಚಿತ್ರಿಸಬೇಕೆಂದು ಅಂತದೊಂದು ಮುಖಕ್ಕಾಗಿ ಹುಡುಕುತ್ತಿದ್ದೇನೆ. ಯಾಕೋ ಅದರಲ್ಲೂ ಸೋಲುತ್ತೇನೇನೋ ಎನ್ನಿಸುತ್ತಿದೆ ಎಂದ ವಿಷಾದದಿಂದ.
ಇದು ಕಲಾವಿದನೊಬ್ಬನ ಸಹಜ ಸೋಲೇ? ಅವನಿಗೆ ಒಂದೇ ಒಂದು ನಿಜಮುಖವೂ ಸಿಗದಿರುವುದು ಮನುಷ್ಯನ ಗೆಲುವೇ? ಇಷ್ಟಕ್ಕೂ ಇದು ಒಂದು ಮುಖದ ಹುಡುಕಾಟದ ಪ್ರಶ್ನೆ ಮಾತ್ರವೇ? ನಾನೀಗ ಹುಡುಕಾಟದ ಕೂಪಕ್ಕೆ ಬಿದ್ದೆ!
*****