ಪ್ರೀತಿಸುವ ಮರಗಳನ್ನು
ಅವು ಒಂಟಿಯಾಗಿರುತ್ತವೆ
ಬೀಸುವ ಗಾಳಿಯ ಜತೆಯಷ್ಟೆ
ಮಾತನಾಡುತ್ತವೆ
ಪ್ರೀತಿಸುವ ಬೆಟ್ಟಗಳನ್ನು
ಅವು ಮೌನವಾಗಿರುತ್ತವೆ
ಚಳಿಗಾಲದ ಮಂಜಿಗೆ ಹೊದ್ದು
ಮಲಕೊಂಡಿರುತ್ತವೆ
ಪ್ರೀತಿಸುವ ನದಿಗಳನ್ನು
ಅವು ತು೦ಬಿಕೊಂಡಿರುತ್ತವೆ
ಕಬ್ಬಿನ ತೋಟಗಳನ್ನು
ತಬ್ಬಿಕೊಂಡಿರುತ್ತವೆ
ಪ್ರೀತಿಸುವ ಸಮುದ್ರಗಳನ್ನು
ಅವು ಆಳವಾಗಿರುತ್ತವೆ
ಎಂಥ ಪ್ರಕ್ಷುಬ್ಧತೆಯನ್ನೂ
ತಾಳಿಕೊಂಡಿರುತ್ತವೆ
ಪ್ರೀತಿಸುವ ಮೋಡಗಳನ್ನು
ಅವು ದಟ್ಟವಾಗಿರುತ್ತವೆ
ಅಂಗಳದಲ್ಲಿ ತುಂಬಾ ನೀರಗುಳ್ಳೆ
ಎಬ್ಬಿಸಿ ಹೋಗುತ್ತವೆ
ಪ್ರೀತಿಸುವ ಬಂಡೆಗಳನ್ನು
ಆವು ಅಚಲವಾಗಿರುತ್ತವೆ
ಯಾರೂ ಕೆತ್ತಿರದ ಪ್ರತಿಮೆಗಳನ್ನು
ಹಿಡಿದುಕೊಂಡಿರುತ್ತವೆ
ಪ್ರೀತಿಸುವ ಹೂವುಗಳನ್ನು
ಅವು ಕ್ಷಣಿಕವಾಗಿರುತ್ತವೆ
ನೋಡಬೇಕೆನ್ನುವಷ್ಟರಲ್ಲೇ
ಬಾಡಿಹೋಗಿರುತ್ತವೆ
ಪ್ರೀತಿಸುವ ಮಕ್ಕಳನ್ನು
ಅವು ಚಿಕ್ಕವಾಗಿರುತ್ತವೆ
ಪ್ರೀತಿಸಬೇಕೆನ್ನುವಷ್ಟರಲ್ಲೇ ಪ್ರೀತಿ
ಕಳೆದುಕೊಂಡಿರುತ್ತವೆ
*****