೧
ದಕ್ಷಿಣಾಫ್ರಿಕೆಯಲ್ಲಿದ್ದನೆಂದು ? ಸಾಬರ್‌ಮತಿಯ
ಕರ್ಮಯೋಗಿ ದಂಡಿಯ ತೀರಕ್ಕೆ ಯಾತ್ರೆ
ಕೈಗೊಂಡನೆಂದು? ನೋಖಾಲಿಯಲ್ಲಿ ಉಪವಾಸ
ಮಲಗಿದನೆಂದು ? ಇಡಿಯ ದೇಶದ ಜೀವವನ್ನು
ತನ್ನ ಸಾವಿನಲ್ಲಿ ಪಡೆದವನು ಭಾರತದ
ಉದ್ದಗಲ ಸಂಚರಿಸುತ್ತ ಒಮ್ಮೆ ನದಿ ತೀರ
ಅಲೆಗಳ ಮೇಲೆ ಯಾರಿಗೆಂದೋ ಹರಿಯಬಿಟ್ಟಿದ್ದ
ಬಟ್ಟೆ ಸೇರಿತ್ತೆ ಅದು ಸೇರಬೇಕಾದ ಕಡೆ
ತೇಲಿಕೊಂಡು ಹೋಗಿ? ನಡೆಗೆ ನಡೆ
ಮಾತಿಗೆ ಮಾತು ಮೌನಕ್ಕೆ ಮೌನ; ಪಾತ್ರಾಭಿನಯ
ಕೂಡ ತಿಳಿಯುವ ವಿಧಾನವೆಂದೇ ಕಿಂಗ್‌ಸ್ಲಿ
ಹುಡುಕ ಹೊರಟದ್ದು ಗಾಂಧಿಯನ್ನು
೨
ಬೆನ್ನ ಹಿಂದಿದ್ದ ಪಕ್ಕದಲ್ಲೇ ಇದ್ದ ಅವನು
ಸಿಕ್ಕಿಯೂ ಸಿಕ್ಕದಂತಿದ್ದ ಎಲ್ಲಿ ಅನ್ವೇಷಣೆಯೂ
ಸ್ವಂತದಿಂದಲೆ ಹೊರಟು ಸ್ವಾಂತವಾಗುವ ರೀತಿ
ಒಂದಿಗಿದ್ದೇ ಪ್ರಕಟಗೊಳ್ಳಬೇಕಿತ್ತು. ಸುಲಭ
ದೈವತ್ವಕ್ಕೆ ಜಾರದೆಯೆ ಕೇವಲ ಮನುಷ್ಯ
ಸಹಜ ಭಂಗಿಗಳಲ್ಲಿ ಸಾಧಾರಣ
ಮಾತುಕತೆ ಕ್ರಿಯೆಗಳಲ್ಲಿ ಕಾರಣ
ಅಮೂರ್ತತೆಗೆ ಯಾವ ರೂಪು ಯಾವ ಚಹರೆ
ಯಾವ ವಿಧಾನ? ಮನುಷ್ಯತ್ವ ಕೂಡ
ಮಾಗುವುದು ಮರಣದಲ್ಲಿ-ಇದರ
ಆಭಿನಯವೂ ಒಂದು ಹುಡುಕು, ಬೆಳಕಿನ
ತೀಕ್ಷ್ಣ ಕಲ್ಪನೆಗೆ ಕತ್ತಲು ಕೂಡ ಬೇಕು.
*****