ಬಸ್ಸಿನ ತುಂಬ ನೂಕು ನುಗ್ಗಲಿತ್ತು
ಅಂಗಡಿ ಬೀದಿಗಳಲ್ಲೂ ಹಾಗೆಯೇ
ಹಗಲಿಗೆ ಹೆಗಲು ತಾಗಿಸಿ ಅಲ್ಲೆಲ್ಲ
ನೀವು ನಿಂತಿದ್ದಿರೆಂಬುದು ಗೊತ್ತು
ಚಹದಂಗಡಿಯಲ್ಲಿ ಮೇಜಿನೆದುರು
ಅಕಸ್ಮಾತ್ ಕೇಳುವಿರಿ ಬೆಂಕಿ
ಮತ್ತದೇ ಮಾತು ಅದೇ ಕತೆ
ಯಾರು ಯಾರನ್ನೋ ಹುಡುಕುವ ನಜರು
ಬರುತ್ತೀರಿ ಕಾತರಗೊಂಡು ಈ ರೀತಿ
ನೆನಪುಗಳನ್ನು ಉಳಿಸಿಕೊಳ್ಳಲು
ಹಳೆಯ ಹೆಜ್ಜೆಗಳ ಮೇಲೆ ಹೆಜ್ಜೆಯಿಡುತ್ತ
ಸಾಗಬೇಕೆಂದರೂ ಸಾಗದ ಗತಿ
ಆದರೆ-ನಡೆಯುವಾಗ ತುಸು ಜೋಪಾನ
ಮಲಗಿದ್ದಾವೆ ಇಲ್ಲಿ ಮಕ್ಕಳು ಮರಿ
ಸಂತೆ ಕಚೇರಿಗಳೆಂದು ನಾವೂ
ಸುಸ್ತಾಗಿದ್ದೇವೆ ಈ ದಿನ, ಪ್ರತಿದಿನ
ಮತ್ತೆ ಆ ಕಿಟಕಿಯಡಿ
ಈಗ ತಾನೆ ಅರಳಿದ ಗುಲಾಬಿ
ನನ್ನ ಮಗಳಿಗೆ ಪ್ರಿಯವಾದ ಹೂವು
ಅದನ್ನು ಹಾಗೆಯೆ ಇರಗೊಡಿ
*****