ಅದು ನನ್ನದಲ್ಲದ ಅಂಗಿ
ಅದರೆ ಇಂಚಿಂಚೂ ಮೆಚ್ಚುಗೆ ಆದದ್ದು ಸುಳ್ಳಲ್ಲ.
ಬಯಸಿದ್ದು ಕನವರಿಸಿದ್ದು ಅದಕ್ಕಾಗೇ
ಇಲ್ಲ, ಬಿಟ್ಟುಬಿಡು, ನಿನ್ನ ಮೈಬಣ್ಣಕ್ಕೆ ಒಪ್ಪಿಗೆಯಾಗದು
ಅಮ್ಮನ ತಕರಾರು.
ಮುನಿಸಿಕೊಂಡೆ, ಮಾತು ಬಿಟ್ಟೆ, ಮತ್ತೆ ಮತ್ತೆ ನೋಡಿಬಂದೆ.
ಕಿವಿಗಿಳಿದರೂ ಕಾದ ಸೀಸ.
ಬಣ್ಣದ ಅಂಗಿಯ ಮೋಹ ಬೇಡ
ಎನ್ನುತ್ತ ಲಗುಬಗೆಯಿಂದ ಅಪ್ಪ ನನಗೆಂದೇ
ಒಂದಂಗಿ ಕೊಡಿಸಿಬಿಟ್ಟರು.
ಬಾಳಿಕೆಗೆ ಬರವಿಲ್ಲ
ಕಾಲಕ್ಕೂ ಕಷ್ಟಕ್ಕೂ ಜೊತೆಯಾಗಿ
ನನ್ನ ಮೈಗಂಟಿಕೊಂಡೆ ಕಾಯುತ್ತದೆ ಎಂದೆನ್ನುತ.
ಬರಬರುತ್ತ ಅಂಗಿ ಮೇಲೆ ಆಸೆ ತಾನೆ ತಾನೆ ನನಗೂ
ಒಮ್ಮೆ ತೊಟ್ಟರೂ ಮತ್ತೆ ಮತ್ತೆ ತೊಡುವಾಸೆ
ಆ ಅಂಗಿ ಬಿಟ್ಟರೆ ಬೇರೆ ಗತಿಯಿಲ್ಲ
ನನ್ನ ತೊಗಲಿಗೆ ಅಂಟಿಕೊಂಡಂತೆ ಅಂಗಿ.
ಅಂಗಿಗೂ ನಾನೆಂದರೆ ಅಷ್ಟಕಷ್ಟೆ ಮೊದಮೊದಲು
ದಿಕ್ಕೆಟ್ಟ ದರ್ಪದ ಧಿಮಾಕು
ಕಳಚಿ ಇಟ್ಟಾಗಲೆಲ್ಲ ಸ್ವಚ್ಛಂದ ಹಾರಾಟ.
ಈಗೀಗ ಅದಕ್ಕೂ ಏನೋ ಅನುಬಂಧ
ನನ್ನ ಮೈಗಂಟಿಕೊಂಡೆ ಇರುತ್ತದೆ
ಒಳಗೊಳಗೆ ಕಚಗುಳಿ ಇಡುತ್ತ, ನನ್ನನ್ನೆ ಮೆಚ್ಚುತ್ತ
ಅಂಗಿಗೆ ನನ್ನೆಲ್ಲವನ್ನೂ ಒಳಗೊಳ್ಳುವ ತಾಕತ್ತಿದೆ.
ಒಳಹರವು ಚೆನ್ನಾಗಿದೆ. ಸಣ್ಣಪುಟ್ಟ ಮಳೆಗೆ ಧೃತಿಗೆಡದು.
ಬಿಸಿಲಿಗೆ ಬಣ್ಣಗೆಡದು.
ಕಾಯ್ದುಕೋ ಕಾಳಜಿಯಿಂದ
ಅಸಡ್ಡೆ ಮಾಡಿದರೆ, ಬೇಕೆಂದರಲ್ಲಿ ಕಳಚಿ ಇಟ್ಟರೆ
ಹಾರಿಹೋದೀತು ಎಚ್ಚರಿಸಿದ್ದಳು ಅಮ್ಮ
ಈಗ ನಾನೂ ಅಷ್ಟೇ
ಬೆಲೆಬಾಳುವ ಬಣ್ಣದ ಅಂಗಿಗಳಿಗಿಂತ
ದೀರ್ಘಬಾಳಿಕೆಯ ಇಂತಹ ಅಂಗಿಯ
ಹುಡುಕಾಟದಲ್ಲಿದ್ದೇನೆ ನನ್ನ ಮಗಳಿಗೂ.
*****