ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ನಿವಾಸಿ ಬಶೀರ ಅಹ್ಮದ ಮುಜಾವರ ಅನಿವಾರ್‍ಯ ಕಾರಣಗಳಿಂದ ಶಿಕ್ಷಣ ಮುಂದುವರೆಸಲಾಗಲಿಲ್ಲ. ಇದೇ ಸಮಯದಲ್ಲಿ ಮಂತ್ರ, ತಂತ್ರಗಳ ಕಡೆಗೆ ಒಲವು ಬೆಳೆಯಿತು. ಮೊದಲಿಗೆ ಹಸ್ತ ಸಾಮುದ್ರಿಕದ ಅಭ್ಯಾಸ. ೧೯೭೦ರಲ್ಲಿ ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಶ್ರೀ ನಿತ್ಯಾನಂದ ಸ್ವಾಮಿಗಳ ಪರಿಚಯ, ಅಲ್ಲಿ ರಮಲಶಾಸ್ತ್ರದ ಅಭ್ಯಾಸ, ಜೊತೆಗೆ ಮಂತ್ರಸಾಧನೆ. ಆರು ವರ್ಷಗಳ ಸಾಧನೆಯಲ್ಲಿ ಭೂತೋಚ್ಚಾಟನಂಥ ಪ್ರಕಾರ ಮೊದಲುಗೊಂಡು, ಎಲ್ಲಾ ವಿಭಾಗದಲ್ಲಿ ಪರಿಣತಿ. ಆದರೆ ಇದರಲ್ಲಿ ಏನೋ ಕೊರತೆಯಿದೆಯೆಂಬ ಭಾವನೆ. ಸಾಧಕರು ಜನರ ಮೂಢನಂಬಿಕೆ ಅಜ್ಞಾನದೊಂದಿಗೆ ಸರಸವಾಡುತ್ತಿದ್ದಾರೆಂಬ ಸತ್ಯದ ಅರಿವು ೧೯೭೬ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಎರಡನೆ ದರ್ಜೆಯ ಗುಮಾಸ್ತರ ಭರ್ತಿಗಾಗಿ ನಡೆದ ಪರೀಕ್ಷೆಗೆ ಹಾಜರ. ಪರೀಕ್ಷೆಯನ್ನು ತೃಪ್ತಿಕರವಾಗಿ ಮಾಡಿದ್ದೇವೆಂಬ ಭರವಸೆ. ೧೯೭೭ರಲ್ಲಿ ಆಗಸ್ಟ್‌ನಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸು. ಅದೇ ತಿಂಗಳಲ್ಲಿ ಖ್ಯಾತ ಜಾದೂಗಾರ ಪ್ರೊ. ಶಂಕರ ಅವರ ಶಿಷ್ಯನಾಗುವ ಅವಕಾಶ ಲಭ್ಯವಾಗಿದ್ದರೂ, ಯೋಗ ಕೂಡಿಬರಲಿಲ್ಲ. ೧೯೭೮ ಜೂನ್ ತಿಂಗಳಲ್ಲಿ ಕೆಪಿಎಸ್‌ಸಿಯವರಿಂದ ಜಿಲ್ಲಾ ಖಜಾನೆ ವಿಜಾಪೂರದಲ್ಲಿ ಸರಕಾರಿ ನೌಕರಿ ಪ್ರಾರಂಭ. ೧೯೮೩ರಲ್ಲಿ ಜಗತ್ತಿನ ಎಲ್ಲ ಪವಾಡ ಪುರುಷರೆಂದು ಕರೆಸಿಕೊಳ್ಳುತ್ತಿರುವ ನಕಲಿ ಪವಾಡಪುರುಷರ, ಡೋಂಗಿ ಬಾಬಾಗಳ ಹಾಗೂ ಸಮಾಜವನ್ನು ಶೋಷಿಸುತ್ತಿರುವ, ಮೂಢನಂಬಿಕೆಗಳನ್ನು ಪೋಷಿಸುತ್ತಿರುವವರಿಗೆ ಸಿಂಹಸ್ವಪ್ನವಾಗಿದ್ದ, ಡಾ. ಕೋವೂರ್ ಇವರ ಲೇಖನಗಳ ಅಧ್ಯಯನ. ಇದರ ಫಲವಾಗಿ ಜಾದೂವನ್ನು ಅಭ್ಯಾಸ ಮಾಡಲೇಬೇಕಾದ ಅನಿವಾರ್ಯತೆ. ಆದರೆ ಕಲಿಸಲು ಯಾರೂ ಸಿದ್ಧರಿಲ್ಲದ ಸ್ಥಿತಿ. ೧೯೮೫ರಲ್ಲಿ ವಿಜಾಪೂರದಲ್ಲಿ ಕ್ಯಾಂಪ್ ಮಾಡಿದ್ದ ಶ್ರೀ ವಿಜಯ್ ಜಾದೂಗಾರ ಇವರ ಪರಿಚಯ ಮತ್ತು ಸ್ನೇಹ. ಇವರ ಉದ್ದೇಶವನ್ನು ಮೆಚ್ಚಿ ಅವರಿಂದ ಜಾದೂ ಜಗತ್ತಿನ ಎಲ್ಲ ರಹಸ್ಯಗಳ ಪಾಠ ಪ್ರಾರಂಭ. ಜಾದೂ ಜಗತ್ತಿನ ಎಲ್ಲ ರಹಸ್ಯಗಳನ್ನು ಅರಿತರೂ ಸಮಾಜದ ಮೌಢ್ಯವನ್ನು ತೊರೆಯಲು ಇಷ್ಟೇ ಸಾಲದು ಎಂಬ ಕೊರತೆ. ಅಲ್ಲಿ ಇಲ್ಲಿ ಪೇಪರಿನಲ್ಲಿ ಮೇಲಿಂದ ಮೇಲೆ ಓದುತ್ತಿರುವ ‘ಭಾನಾಮತಿ’ಗೆ ಇಷ್ಟು ಜನರ ಬಲಿ, ಭಾನಾಮತಿಯಿಂದ ಹಾಗಾಯಿತು, ಹೀಗಾಯಿತು ಮುಂತಾದ ಭಾನಾಮತಿಯ ಕಾಟದ ರಹಸ್ಯವನ್ನು ಬಿಡಿಸಲು ಸಮೋಹನಶಾಸ್ತ್ರದ (Hipnotism) ಕಲಿಕೆ ಪ್ರಾರಂಭ, ಜದೂ ಜಗತ್ತಿನ ಎಲ್ಲ ಅತಿರಥ ಮಹಾರಥರನ್ನು ತಯಾರು ಮಾಡಿದ ಪ್ರೊ. ರಾಮದಾಸ್ ನಾಯಕರಿಂದ (ಊರು ಹೆಬ್ರಿ, ಚಿಕ್ಕಮಗಳೂರು ಜಿಲ್ಲೆ) ನಂತರ, ಸಮ್ಮೋಹನ ಜಗತ್ತಿನ ‘ಧೂಮಕೇತು’ ಎಂದೇ ಖ್ಯಾತರಾದ ಪ್ರೊ. ಪಿ.ಎಂ. ಆಚಾರ್ಯ ಇವರಿಂದ ಸಮ್ಮೋಹನದಲ್ಲಿ ವಿಶೇಷ ಪರಿಣತಿ ೧೯೮೮ರಲ್ಲಿ.
ಅವರ ಮೊದಲ ಸಾರ್ವಜನಿಕ ಜಾದೂ ಪ್ರದರ್ಶನ ೧೯೮೭ರಲ್ಲಿ, ಬೆಂಗಳೂರಿನಲ್ಲಿ ಜರುಗಿದ ಖಜಾನೆ ಇಲಾಖೆಯ ನೌಕರರ ರಾಜ್ಯಮಟ್ಟದ ಮೂರನೆಯ ಸಮ್ಮೇಳನದಲ್ಲಿ (ಸ್ಥಳ: ಗುರುನಾನಾಕ ಭವನ, ಬೆಂಗಳೂರು), ನಂತರ ೧೯೮೮ ಜನವರಿ ೨೬ರಂದು ಅಥಣಿಯಲ್ಲಿ ಆಗಿನ ತಹಸೀಲ್ದಾರ್ ಮಲ್ಲಾಪುರ ಇವರಿಂದ ಪ್ರಶಸ್ತಿ ಪತ್ರದ ಕೊಡುಗೆ. ೮೮ರ ಗಣೇಶ ಚತುರ್ಥಿಯಲ್ಲಿ ಅಥಣಿ ಪಿಡಬ್ಲ್ಯೂಡಿ ಗಣಪತಿಯವರಿಂದ ಜಾದೂ ಪ್ರದರ್ಶನ, ಮರುದಿನವೇ ತಮ್ಮ ಊರಾದ ಕೊಕಟನೂರಿನಲ್ಲಿ ಸುಮಾರು ೫ ಸಾವಿಗೆ ಜನರೆದುರು ಭವ್ಯ ಪ್ರದರ್ಶನ. ಮುಂದೆ ಅಲ್ಲಿ ಇಲ್ಲಿ ಮಿತ್ರರ, ಮನೆಯಲ್ಲಿ ಹಿತೈಷಿಗಳ ಮುಂದೆ ಪ್ರದರ್ಶನ, ದಿ. ೧೬.೧೧.೯೧ರಂದು ಜಿಲ್ಲಾ ಖಜಾನೆ ಬೆಳಗಾವಿಯಲ್ಲಿ ಪ್ರದರ್ಶನ.
ಜಾದೂ ಪ್ರದರ್ಶನದ ಉದ್ದೇಶ, ಶೂನ್ಯದಿಂದ ವಿಭೂತಿಯನ್ನೊ ಅಥವಾ ಇನ್ನೇನನ್ನೋ ಸೃಷ್ಟಿಸುತ್ತೇವೆಂದು ಲಕ್ಷಾಂತರ ಜನರನ್ನು ಮೋಸಪಡಿಸುತ್ತಿರುವ ಢೋಂಗಿ ಪವಾಡ ಪುರುಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಲು ಸಾರ್ವಜನಿಕರಿಗೆ ತಿಳುವಳಿಕೆ ಕೊಡುವುದು. ಸಂಮೋಹನದ ಉದ್ದೇಶ, ‘ಭಾನಾಮತಿ’ಯ ಬಾಧೆಗೆ ಒಳಪಟ್ಟಿರುವ ‘ಮಾನಸಿಕ ರೋಗಿಗಳನ್ನು’ ನಕಲಿ ಮಂತ್ರವಾದಿಗಳ ಕೈಗೆ ಒಪ್ಪಿಸದೇ, ಸಂಮೋಹನ ಚಿಕಿತ್ಸೆಯಿಂದ ವೈಜ್ಞಾನಿಕವಾಗಿ ಗುಣಪಡಿಸುವುದು ಪ್ರಾರಂಭಿಸಿದರು.
ಈ ರೀತಿಯಾಗಿ ಮುಂದುವರೆಯಲು ಈಗಿನ ದಿನಗಳಲ್ಲಿ ಸಮೂಹ ಮಾಧ್ಯಮಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾದ್ದರಿಂದ, ಸತ್ಯವನ್ನು ಗುರುತಿಸುವ, ಒಳ್ಳೆಯದನ್ನು ಪ್ರಚಾರ ಪಡಿಸುವ ಉದ್ದೇಶದ ಹಾಗೂ ಸಮಾನ ಮನಸ್ಕ ವ್ಯಕ್ತಿಗಳ ಸ್ನೇಹ ಬೆಳೆಸುವದು ಅವರ ಗುರಿ.
*****