ಹೊತ್ತು ಮೀರಿತ್ತು
ಮನಸ್ಸು ದಣಿದಿತ್ತು
ತನಗೆ ತಾನೇ ವಿರೋಧಿಸುತಿತ್ತು
ಆಗ ಟಣ್ಣನೆ ಸಿಡಿದೆ ನೀನು
ನಕ್ಷತ್ರಪಥದಿಂದ ಬಿದ್ದ ಶಾಖೆ
ರೂಪಿಸುವಂತೆ ತನ್ನ ದಾರಿಯ ರೇಖೆ
ತಡೆಯಲೆಳಸಿದ್ದೆ
ಕೈಚಾಚಬಯಸಿದ್ದೆ
ಕಾದು ಕೆಂಪಾದ ಕಬ್ಬಿಣದ ತುಂಡು
ಬಡಿವ ಕಮ್ಮಾರನದರ ಕಿಡಿ ಕಂಡು
ಮರೆವಂತೆ ಮೈ ಮರೆತಿದ್ದೆ
ಅದು ಅಂಥ ಘಳಿಗೆ
ಆಹ! ಅದು ಹಾಗಿದ್ದರೆಷ್ಟು ಚೆನ್ನಾಗಿತ್ತು!
ಹಾಗಾಗಲಿಲ್ಲ ನೋಡು
ಮೂಡಿದೆವು ಜತೆಜತೆಯಾಗಿ
ಅಥವ ತುಸು ಹಿಂದುಮುಂದಾಗಿ
ಒಂದು ಎರಡಾಗಿ
ಕ್ರಿಸ್ತ ಪೂರ್ವದ ಯಾವುದೋ ಸಂವತ್ಸರದಲ್ಲಿ
ಯಾರ ದುಗುಡದಲ್ಲಿ
ಬೆಬಿಲೋನಿನಲ್ಲಿ ಯಾವುದೊ ಒಂದು ಗಲ್ಲಿ
ಅಥವ ಮೆಸಪೊಟೇಮಿಯಾದಲ್ಲಿ
ಮೆಕ್ಸಿಕೋದಲ್ಲಿ
ಬೈಜಾಂಟಿಯಮಿನಲ್ಲಿ
ಶಕುನ ನುಡಿದ ಹಲ್ಲಿ
ನನ್ನ ಕನಸಿನಲ್ಲಿ ನೀನು
ನಿನ್ನ ಮನಸ್ಸಿನಲ್ಲಿ ನಾನು
ಪ್ರಳಯವೆನ್ನುವುದು ಕಲ್ಪನೆಯ ಕೊನೆಯೆ
ಎಲ್ಲ ಚಿಂತಿಸಿ ಇನ್ನು ಚಿಂತಿಸಲಾರದ ಭಾವನೆಯೆ
ಕತ್ತಲೆಯೆ, ಬೆಳಕೆ, ಬೆಂಕಿಯ ಮಳೆಯೆ
ಬಿಡಿಸಿಕೊಳ್ಳಲಾಗದ ಕಗ್ಗಂಟಿನ ರಕ್ಕಸ ಬಲೆಯೆ
ಕೊನೆಮೊದಲಿಲ್ಲಿದ ಮೌನದ ಹೊಳೆಯೆ
ಅಖಂಡ ಶಿಲೆಯೇ, ಮರುಭೂಮಿಯೆ
ಇನ್ನೂ ತೆರೆಯದ ಅಜ್ಞಾನದ ನಿಧಿಯೆ
ಸಾವು ಬಿಡುಗಡೆಯೆ
ಒಬ್ಬನ ವಿಧಿಯಲ್ಲಿ ಇನ್ನೊಬ್ಬನದೂ ಇದೆಯೆ
ಯಾಕೆ ಏನೆಂದು ತಿಳಿಯದೆಯೆ
ಕಾಯುತಿರುವೆವೆ ಹೀಗೆ
ಕಲ್ಪನೆಯ ಮರೆಗೆ?
*****