ವ್ಯಾಸರ ಪರಂಪರಾಗತ ಕಾಮುಕನಲ್ಲ
ಈ ಕೈಲಾಸಂ ವಿರಚಿತ ಕೀಚಕ
ನಾಟ್ಯ ಕೋವಿದನೀತ ಪ್ರೇಮವೆಂಬ ವಿದ್ಯು-
ದ್ದೀಪದಲಿ ಹೊಳೆವನು ಚಕಚಕ
ಯಾವ ಸ್ತ್ರೀ ರತ್ನವನು ಪ್ರೀತಿಸಿದನೋ
ಅವಳಿಂದಲೇ ಆಗಲವಮಾನ
ತನ್ನ ಸಾವನು ತಾನೇ ಬಯಸಿದವನು
ಹಳಿವನೇನು ಬಲಭೀಮನ?
ತೊಡಲು ಬೇಕಾದಷ್ಟು ಸಮಯ ಬೇಡ
ಕಳಚಿಕೊಳ್ಳುವುದಕ್ಕೆ ವೇಷ
ಕಳಚಿದರೆ ಕೀಚಕನಿಲ್ಲ ವಿರಾಟನಗರಿಯಿಲ್ಲ
ಎಲ್ಲವೂ ನಾಮಾವಶೇಷ
ಎಲ್ಲಿ ಸೈರಂಧ್ರಿ? ಎಲ್ಲಿ ಎಲ್ಲರಿಗೂ
ಹುಚ್ಚೆಬ್ಬಿಸಿ ಕುಣಿದ ಉತ್ತರೆ?
ಒಬ್ಬಳು ತುರುಬು ಕಟ್ಟಿದ್ದಾಳೆ ಇನ್ನೊಬ್ಬಳು
ಬದಲಾಯಿಸಿರುವಳು ಸೀರೆ
ನಿಜವೇಷದಲಿ ನಮ್ಮ ನಾಯಕ ನಟ
ದಪ್ಪ ನಡುವಿನ ಮಧ್ಯವಯಸ್ಕ
ಭೀಮಸೇನನೂ ಹಾಕಿರುವನು
ಎಷ್ಟೋ ಮಂದಿಗೆ ಮಸ್ಕ
ಯೋಗವಿದ್ದರೆ ಸಂಧಿಸುವೆವು ನಾವು
ಇನ್ನೊಂದು ಕಡೆ ಇನ್ನೊಂದು ದಿವಸ
ಅಲ್ಲಿಯತನಕ ಎಲ್ಲರಿಗೂ ಇದ್ದದ್ದೆ
ಅವರವರ ಅಜ್ಞಾತವಾಸ
*****