ನಲ್ಮೆಯ ಗೂಡು ನಾದಮಯ
ನಲ್ಲನಾ ನುಡಿಯೂ ಪ್ರೇಮಮಯ
ಸಂಚರೀಪ ವಾಂಛೆಗೆ ಅಳುಕುವುದು
ಮೈ ಮನ, ಎನ್ನೋಲವು ಆ ಒಲವ
ಬೇಡುವುದು ಅನುದಿನ.
ಈ ಹೊತ್ತು ಅವನಿರದೆ ತಿಂಗಳನು
ಬಂದಿರಲು, ಹುಣ್ಣಿಮೆಯು
ಹಗೆಯಾಗಿ ಕೊಲ್ಲುತಿರಲು
ಹೇಗೋ ಏನೋ ಹಾಗೆ
ಹಂಬಲಿಕೆ ಕನವರಿಕೆ ಅವನೊಲವಿನಾ ಬಯಕೆ
ಸೆಲೆಯ ಕಡಲು
ಹಾಸು ಹೊದಿಕೆಯು ಕೂಡ ಉರಿಯ ಬಲೆಯು.
ಕಣ್ಣೂರ ಕೊನೆಯಲ್ಲಿ ಬಿಂಬವಾಗುಳಿದಿಹನು
ಕಂಬನಿಯ ಲವಣದಲೂ ಉನ್ಮತ್ತ ಸವಿಯು
ಸಾಗುತಿದೆ ಬರಿಹಾದಿ ಕೆಮ್ಮಣ್ಣ ಹುಡಿಯೆದ್ದು
ಮಲ್ಲಿಗೆಯ ಮೈಗೆಂಪು ಕರಟಿ ಕಪ್ಪು
ಯಾವಗಾಳಿಯ ಬಲೆಗೆ ಸಿಕ್ಕಿತದು ಎಸಳು
ಜರ್ಜರಿತ ಜಾತ್ರೆಯಲ್ಲಿ ನಿರ್ಜೀವ ಕೊರಳು
ಪ್ರೇಮದಲಿ ಛಲಬರದು, ಮೋಹದಲಿ ಮದವಿರದು
ಮಂಗಳೆಗೆ ಮದನನಾ ದಾಹವಿಹುದು.
*****