ಲಾರಿ ಆಟೋ ಕಾರು ಕೂಗಿ ಹಾಯುತ್ತಿವೆ.
ರಸ್ತೆಬದಿಯ ಚರಂಡಿ ದಂಡೆಯಲ್ಲಾಡುತಿದೆ
ಪುಟ್ಟ ಮಗು; ಕಪ್ಪು, ತೊಟ್ಟಿರುವ ಬಟ್ಟೆಗೆ ಹತ್ತು
ಹರಕು, ಬತ್ತಿದ ಮೈಯಿ, ಎಣ್ಣೆ ಕಾಣದ ತಲೆ.
ಅಲ್ಲೆ ಮಾರಾಚೆಯಲಿ ಮಣ್ಣ ಕೆದರುತ್ತಿದೆ
ಪುಟ್ಟಲಂಗದ ಹುಡುಗಿ. ಅಕ್ಕನೋ ಏನೋ. ಕೈ
ಚಾಚಿ ಕರೆಯುತ್ತಿದೆ ಬಾ ಎಂದು. ತಾನೆ ಮಗು,
ತನಗೇ ಆಡುವ ವಯಸು, ನೋಡಿಕೊಳ್ಳುವ ಹೊಣೆಯ
ತಾಯಿ ಹೊರಿಸಿರಬೇಕು, ಆಕೆ ಯಾರದೋ ಮನೆಗೆ
ಕಲ್ಲು ಮಣ್ಣನ್ನು ಹೊತ್ತು ಸಾಗಿಸುತ್ತಿರಬೇಕು;
ರಾತ್ರಿಕೂಳಿನ ಕಥೆಯ ಸುಖಾಂತ್ಯಕ್ಕೆ ಮುಟ್ಟಿಸಲು
ಕರುಣಾಳು ದೈವ ಕೈಹಿಡಿದು ನಡೆಸಿರಬೇಕು.
ಕರುಳ ರಸ್ತೆಯಲಿಟ್ಟು ಕಲ್ಲ ಬಗಲಲ್ಲಟ್ಟು ದುಡಿಸಲಾರವೆ ಹೊಟ್ಟೆಬಾಯಿ
ಅನ್ನಾವತಾರಕ್ಕೆ ಹೆಚ್ಚೇನೂ ಬೇಕಿಲ್ಲ, ಮಗುವ ಬಿಟ್ಟರೆ ಸಾಕು ತಾಯಿ.
*****