ಗಂಗ ತುಂಗ ಯಮುನಾ ಗೋದಾವರಿ
ನದಿಗಳೆಲ್ಲವನ್ನು ನಾನು ಪ್ರೀತಿಸುತ್ತೇನೆ
ಬಿಯಾಸ್ ನದಿಯೆ
ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ

ನಾನು ಹಡೆದ ಧರ್‍ಮಗಳನ್ನೂ
ಸಾಕಿ ಸಲಹಿದ ದೇವರುಗಳನ್ನೂ
ಗೌರವಿಸಿದ್ದೇನೆ.
ಸಿಖ್ ಧರ್‍ಮವೇ ಗುರುಗ್ರಂಥ ಸಾಹೇಬನೇ
ನಿನಗೂ ತಲೆಬಾಗುತ್ತೇನೆ.

ಒಮ್ಮೆ ನಿನ್ನ ಕೈಯಲ್ಲಿ ಬಂದೂಕಿತ್ತು
ಎಂಬುದನ್ನು ಮರೆತುಬಿಡುತ್ತೇನೆ.
ನೀನು ಮೂಡಿಸಿದ ರಕ್ತದ ಕಲೆಗಳನ್ನು
ಯಾವತ್ತಿಗೂ ಅಳಿಸಿಹಾಕುತ್ತೇನೆ.

ಗಾಯಗೊಂಡ ಮರಿಹಕ್ಕಿಯೇ
ನನ್ನ ಬೆಚ್ಚನೆಯ ಗೂಡಿಗೆ
ನಿನ್ನನ್ನು ಮರಳಿ ಒಯ್ಯುತ್ತೇನೆ.

ಬಿಸಾಡಿ ಹೋದ ಮರಿಮೀನೇ
ತಣ್ಣನೆಯ ನದಿಗಳ ನಾಡಿಗೆ
ನಿನ್ನನ್ನು ಮರಳಿ ಒಯ್ಯುತ್ತೇನೆ.

ಸಿಡಿಲು-ಗುಡುಗಿನ ಆಕಾಶರಾಯನೆ
ಕೇಳು-
ಈ ತಾಯಿ ನಿನ್ನಲ್ಲಿ
ಮೊರೆಯಿಡುತ್ತಿದ್ದಾಳೆ….

ಹೇಳು-
ಮತ್ತೆ ಮಳೆ ಬರುವುದೇ?
ಸುಡುವ ಈ ನೆಲದೊಳಗೆ
ಹೊಳೆ ಹರಿವುದೆ?
*****