೧. ಒಣಧೂಳಿನ ಕವಲುದಾರಿಯಲ್ಲಿ
ನಿಂತಿದ್ದೆ ತಿಳಿಯದೇ ಸುತ್ತಿ ಎದ್ದು ಬಿದ್ದು
ಸಂಕಟದ ಸುಳಿಯಲಿ ತಬ್ಬಿಬ್ಬು ಅವನು
ಎಂದು ಬಂದನೋ ಬಾರನೋ ಒಂದೂ ತಿಳಿಯದೆ.
೨. ಒಂದು ದಾರಿಯಲಿ ನಡೆದ ಅಕ್ಕನಂತೆ
ಮನ್ನಿಸು ಪ್ರಭುವೇ ಕಾಲುದಾರಿ ಕಾಡುದಾರಿ ಆಗಿ
ಗುಡ್ಡ ಬೆಟ್ಟ ಕಣಿವೆ ಝರಿ ಇಲ್ಲದೇ ಕಳೆದು
ಹೋಗಿವೆ ಕನಸುಗಳೆಲ್ಲವೂ ಎಂದೂ ಸಿಗದಂತೆ.
೩. ಅಲ್ಲಿ ಇಲ್ಲಿ ಎಲ್ಲೆಲ್ಲೂ ಹುಡುಕಿ ಹಳವಂಡ
ರುಚಇಲ್ಲ ಸಿಹಿಇಲ್ಲ ಬರೀ ಚಪ್ಪೇ ಸೀಬೆ
ಹಸಿರು ಕೋಗಿಲೆ ಗಿಳಿ ಇಲ್ಲದ ಬಯಲುದಾರಿ
ಹರಡಿದೆ ಉರಿಬಿಸಿಲು ಬೆಳದಿಂಗಳೆಂದೂ ಕಾಣದಂತೆ.
೪. ಮಳೆ ಚಳಿ ಹನಿ ಇಬ್ಬನಿ ಇಲ್ಲದೇ ಗದ್ದೇ
ಹೊಲದ ಹುಡಿ ಮಣ್ಣಿನ ಕಡುವಾಸನೆಗೆ
ಎದೆತೆರೆದು ಅಲೆಯುತ್ತಿದ್ದೇನೆ ಜೋಗತಿಯಾಗಿ
ಮಾತುಗಳು ಗದ್ದಲ ಎಬ್ಬಿಸಿವೆ ಮೌನ ಧ್ಯಾನದಲಿ ಕಂತಿದೆ.
೫. ದುಃಖ ಮಾನ ಸಾವು ನೋವುಗಳ
ಹೆರಿಗೆ ಮನೆ ಹಾಲು ವಾಸನೆಗೆ ಒಡೆದಮನ
ಕೊನೆಗೂ ಅರ್ಥವಾಗಲಿಲ್ಲ ಪಟ್ಟು ಬಿಡದ ಬದುಕು
ಚಿಗುರು, ಕಾಳು ಮೊಳಕೆಯ ಮೂಕ ಮರ್ಮರವ.
೬. ರೋಗದಲಿ ಮಾಗಿದ ದೇಹ ತುಂಡು ಬಟ್ಟೆ
ಬಯಲು ದಾರಿಯ ಹಾಲು ಬೆಳಕು ಕಡಲು
ಎದೆಯ ಹಾಡು ಇಳಿದಿಳಿದು ಜೀವಜಲ
ನದಿ ಹರಿದು ಬಯಲು ಪೊರೆದ ಹರವಿನ ದಾಂಪತ್ಯ.
*****