ಹರನ ನಾಮವ ಹಿಡಿದು ದಿನಬೆಳಗು ಹಾಡುವಿ
ಆ ಹರನು ಇನ್ನಾರು ತಿಳಿಯಲಾರಿ
ಹೃದಯ ಗಂಗೆಯ ಹೊಳೆಯಲ್ಲಿ ತೇಲಿಬಿಟ್ಟಿರುವಿ
ನಿಜಭಕ್ತಿ ತೊರೆದೀಶನನು ಕಾಣಲಾರಿ
ಹರನೆಲ್ಲಿ; ನೀನೆಲ್ಲಿ; ಅವನ ಹುಡುಕುವಿಯೆಲ್ಲಿ ?
ಅಹಂಕಾರದೊಳು ನೀ ಮರೆದು ಪೂಜಿಸಲು
ನಿನ್ನ ಪತ್ರಿ-ಪುಷ್ಪ-ಗಂಧವಾರ ಮುಡಿಯಲ್ಲಿ ?
ನಿರ್ಮಲ ಚಿತ್ತಬೇಕು ಪ್ರಭುವನರಿಯಲು
ಪೂಜೆಯಾಡಂಬರದಲಿ ಅಡಗದೇ ಆ ದೇವನು-
ಮೂಡಿ ಬೆಳಗುತಿಹನು ನಿನ್ನಂತರಂಗದಲ್ಲಿ
ಕರೆದಿಹನು ನೂರೆಂಟುಬಾರಿ ನಿನ್ನನವನು
ಓ ಗೊಡು ನೀ ಮೊದಲು ನಿನ್ನಾತ್ಮದಲ್ಲಿ !
ಸತ್ಯ-ಶಾಂತಿಯ ಹೊನಲು, ಪ್ರೇಮ-ತ್ಯಾಗದ ಕಡಲು
ಅಹಿಂಸೆಯ ಪಾವಿತ್ರವಾಗಲಿ ನಿನ್ನ ಚಾರಿತ್ರ್ಯ
ವಿಷಯ ವಾಸನೆಯು ಬಿಗಿದ ಮನದ ಬಾಗಿಲು-
ತೆರೆದು ಹೃದಯವರ್ಪಿಸಲದೇ ಮುಕ್ತಿ ಸ್ವಾತಂತ್ರ್ಯ
ಈ ಎಲ್ಲ ಸಾತ್ವಿಕತೆಯ ಮಹಾ ತತ್ವದಲಿ ತೇಲು
ಅಲ್ಲಿ ಕಾಣುವಿ ಸುಖವ, ಪರಮ ಸಂಪದವ
ಗುಡಿಯೊಳುದ್ಭವಿಸಿದ ದೇವ ಹೃದಯದೊಳುಂಟೆನಲು
ಅಂಟದೇ ಬರಿಹೆಮ್ಮೆಗೆ ಹುಡುಕು ದೇವ ಪಥವ
*****