ಹೃದಯ ಕಾಡಿನಲಿಹ ಹುಲಿಯ ನಾಡಿ ಮಿಡಿಸುತಲಿ
ಅಂತರಂಗದ ವೀಣೆ ನುಡಿಸ ಬಾ ಬಸವಣ್ಣ
ಕಾಡು ಈ ದೇಹದಲಿ ನಾಡ ಮೂಡಿಸುತ ತೀಡುತಲಿ
ಬೀಡು ಮಾಡ ಬಾ ಬೇಗ ಓ ನಮ್ಮೆಲ್ಲರಣ್ಣ !
ಹುಲಿತನದ ಛಲವಿದ್ದು ಇಲಿಯಾಗಿ ಇದ್ದಿಹೆವು
ಭಯದಿ ಮರೆತಿಹೆವು ನೈಜ ತೇಜವನ್ನು
ಮಿನುಗು ಮೆರಗಿನ ವರ್ಣ ವೈಚಿತ್ರ್ಯ ಮಾಯಪಾಶವು
ಗುಡುಗಿ ಘರ್ಜಿಸುತಿದೆ; ಬದುಕಲಾರೆವಿನ್ನು
ನಿನ್ನ ಸಾತ್ವಿಕತೆಯ ಓಜಸ್ಸು ಹೊಮ್ಮಿ ತೇಜಸ್ಸು ಮೂಡಿ
ಮುಗಿಲಿನಾಚೆಯ ರವಿಯು ಮುಂದಾದನು
ಹಿಂದೊಮ್ಮೆ ನಿನ್ನ ವಚನ ವೃಷ್ಟಿ ನಮ್ಮೊಡಲ ಕೂಡಿ
ಓಡಿಸಿತು ಕವಿದ ಕಾರ್ಮೋಡಗಳನು
ದಿವ್ಯ ಜ್ಯೋತಿಯ ಹೊಲವು ಶರಣ ಛಲವು
ಸತ್ವ ಸಾತ್ವಿಕತೆಯ ನಾಂದಿ ಬಲದ ಮಂದಿರ ಭೇರಿ
ಮುಗಿಲು ಇಲ್ಲದ ಗಗನ ತಿಂಗಳನ ಇರವು
ಮಾಯೆ ಹೊದ್ದದ ಮನವು ವಿಶ್ವಾತ್ಮಿ ಪರಮಾತ್ಮನಕೇರಿ
ಶರಣ ಚರಣದ ವರ್ಣ ಬಸವಣ್ಣ ಹೇಳಿ
ಭವವೇಶ ಪಾಶವನು ನಾಶಮಾಡೆಮ್ಮ ತಂದನಿಲ್ಲಿ
ಸವಿ ತಿರುಳ ವಿಷ ಒಡಲ ವೈಚಿತ್ರ ಹೇಳಿ
ನೈಜ ಜ್ಯೋತಿಯನಿತ್ತು ಬಾ ಇತ್ತ ಎಂದು ಕರೆದನಲ್ಲಿ
ಕಿರಿ ಹೃದಯ ಕಲ್ಮಿಷ ಘೋರ ಗವಿಯಲಿ
ನುಸುಳಿ ಬಂದೆಮ್ಮ ಕಿವಿಯೊಳುಸುರಿದ ವಚನವ
ಬಲ ಬಂಧನ ವ್ಯೂಹ ಝಾಡ್ಯದಲಿ
ಮೌಢ್ಯತೆಯ ಮುರಿದೊತ್ತಿ ಎತ್ತುವನೆನ್ನ ಬಸವ
ಹಗಲು ಶಖೆಯಾಗಿ ಇರುಳು ಭಯವಾಗಿ
ಮಾಗದಾ ಘಾಯ ಮಾಡಿಹುದು ಕಾಯಕಾಮಾಯ
ಮದ್ದು ಇನ್ನೆಲ್ಲಿ ? ಓ ಕಾಣದಾ ಯೋಗಿ
ಇಹುದು ಬಾರಲ್ಲಿ; ಬಸವ ನುಡಿಯಲ್ಲಿ ನೈಜ ಧೈಯ !
ಚುಕ್ಕೆ ಲತೆಯಾಗಿ, ರವಿಯ ಫಲವಾಗಿ
ಹೂವು ಚಂದಿರನಾಗಿ, ನೆಲನೀರು ಶಾಮ ಮುಗಿಲಾಗಿ
ಮಿನುಗು ಮರುಗು ಜೀವನವು ಮಿಂಚಾಗಿ
ಹೊಂಚಿ ಸಿಡಿಲನು ಹೊಡೆಯುವದದೋ ಮಾಯ ಕೂಗಿ
ರೇಗಿ ಎದ್ದಿಹ ರುಚಿಗೆ ನೀಗಿ ಬಿದ್ದಿದೆ ಶಕ್ತಿ
ಬಲವಾಗು ಬಾ ಮೊದಲು ಹೃದಯ ಹದವಾಗಿ ಮಾಡು
ಜನ್ಮ ಸಾರ್ಥಕತೆಯ ನೈಜ ಮುಕ್ತಿ
ಆ ಮಾರ್ಗ ಬಸವಣ್ಣ ನುಡಿದ ವಚನ ನೋಡು
*****