ಬಂಧನವರಿಯದೆ
ಸುಖವನು ಬಯಸದೆ
ಬೆಳೆಯುತ ಬರುತಿಹಳೀ ಸೀತೆ
ನಿರುತವು ಶ್ರಾವ್ಯದ
ಗಾನವನೊರೆವಳು
ಕಿರುನಗೆ ಮೊಗದೊಳು ಸುಪ್ರೀತೆ
ಗಾಯಕಿ ನಿನ್ನಯ
ಗಾನವ ಕೇಳಲು
ಕಾತರರಾಗಿಹೆವೆಂದೊಡನೆ
ಕಂಗಳ ಮುಚ್ಚುತ
ತಾಳವ ತಟ್ಟುತ
ಝೇಂಕೃತನಾದವ ಗೆಯ್ಯುವಳು
ಗಾನದ ಸಾಗರ-
ದಲೆಗಳ ಸೆಳೆತದಿ
ತೂಗಿಸಿ ತೇಲಿಸಿ ನಲಿಸುವಳೂ
ವಾಣಿಯ ವೀಚಿಯ
ಮಾಲೆಯ ಪೋಣಿಸಿ
ಕ್ಷಣದೊಳು ಮೆಯ್ಯನು ಮರೆಸುವಳು
ನಿಸ್ಪೃಹ ಮನಸಿನ
ನಮ್ಮೀ ಸೀತೆಗೆ
ಓದುವುದೆಂದರೆ ಹಿರಿಯಾಸೆ
ಹೇಳಲು ಬಾರದ
ಸುಖವನು ನೀಡುವ
ಕಲೆಗಳ ಕಂಡರೆ ಬಹುಪ್ರೀತಿ
ಚಿಗುರಿದ ಲತೆಯೊಳು
ಅರಳುತ ಬರುತಿಹ
ಕುಸುಮವ ಹೋಲುವ ಓ ಸೀತೇ
ವಿಶ್ವದ ರಂಗದಿ
ನಾನಾ ಬಗೆಗಳ
ಯಂತ್ರಗಳಿರುವುವು ಎಚ್ಚರಿಕೆ
ಕಣ್ಣಿಗೆ ಕಾಣದ
ಸ್ಥಳದೊಳು ಕೆಲವೆಡೆ
ಮಣ್ಣೊಳು ಹುದುಗಿವೆ ವಜ್ರಗಳು
ಹೊನ್ನಿನ ರಾಸಿಯ
ಮಧ್ಯದಿ ಕೆಲವೆಡೆ
ಸರ್ಪಗಳಿರುವುವು ಎಚ್ಚರಿಕೆ
ಭಾವದಿ ತುಂಬಿದೆ
ದೇವನ ಸೃಷ್ಟಿಯು
ಎಂಬುದನೆಂದಿಗು ಮರೆಯದಿರು
ಮೇಘವ ಚುಂಬಿಸಿ
ಗಗನದಿ ಸುಳಿಯುತ
ಹಾರುವ ಹಕ್ಕಿಯ ತೆರದೊಳಿರು
ಕಲ್ಮಷವಿಲ್ಲದ
ನಿನ್ನೀ ಹೃದಯದಿ
ಮುಳ್ಳಿನ ಕಂಪೆಯ ಹರಡದಿರು
ಕಷ್ಟದಿ ನರಳುವ
ಜನರಿಗೆ ಮರುಗುತ
ಸಾಯವ ಮಾಳ್ಪುದ ಮರೆಯದಿರು
ಹೇಳಲು ಬಾರದ
ಸುಖವನು ನೀಡುವ
ಕಲೆಗಳ ಬಯಸುವ ಓ ಸೀತೇ
ಸುಖ ಸ್ವಾತಂತ್ರ್‍ಯದ
ಗೈಮೆಯ ಫಲವನು
ಸೃಷ್ಟಿಯ ಕರ್ತನೆ ಉಣುತಿರಲಿ
ಬಂಧನ ರಹಿತದ
ನಿನ್ನೀ ಬಾಳ್ವೆಗೆ
ಸೃಷ್ಟಿಯ ಕರ್ತನ ಒಲವಿರಲಿ
ಎಂದಳು ಕಿವಿಯೊಳು
ಪ್ರೀತಿಯ ತಂಗಿಗೆ
ಸೀತೆಯ ಸೋದರಿ ಜನಕಜೆಯು
*****