ಗರ ಬಡಿದಿದೆ ಕವಿಗೆ…
ಹೇಗಿದ್ದವಾ ಹೇಗಾದನಲ್ಲ?!
ಅಯ್ಯೋ ನೋಡ ಬನ್ನಿ!
ಕೊರಳಿಗೆ ತಾಯಿತ ಕಟ್ಟಿ,
ಹಣೆಗೆ ನಾಮವ ಇಟ್ಟು,
ಕಿವಿಗಳಿಗೆ ಹೂವನಿಟ್ಟು,
ಗಂಧ ತೀಡಿಕೊಂಡು,
ಅಂಡೆಲೆವಾ ಪರಿಯ ಕಂಡು-
ಗರ ಬಡಿದಿದೆ ಕವಿಗೆ…
ಅಯ್ಯೋ ನೋಡ ಬನ್ನಿ…
೨
ದಿನ ಬೆಳಗಾದರೆ ಬಾರಲ್ಲಿ,
ಬೀರು, ಬ್ರಾಂದಿಯಾ ಬೆವರಲ್ಲಿ
ಏನೆಲ್ಲ ಕಾರು ಬಾರು?
ಪೆಗ್ಗು ಹಾಕದ,
ಎಗ್ಗು ತಿನ್ನದ,
ಲೆಗ್ಗು ಎತ್ತದ
ಇ(ಯು)ವ ಕವಿ ಹೇಗಾದ?!
ಗರಬಡಿದಿದೆ ಕವಿಗೆ…
ಅಯ್ಯೋ ನೋಡ ಬನ್ನಿ!
೩
ಧೀಮಾಕಿನ ಕವಿಗೆ
ಪದಗಳ ಜೋಡಣೆ
ಸಿಗಾರಿನ ಬೋಣಿಗೆ!
ನಿತ್ಯ ಪ್ರೀತಿ, ಪ್ರೇಮದ, ತೇರಿಗೆ!
ಹೇಗಿದ್ದವಾ ಹೇಗಾದನಲ್ಲ?!
ಗರ ಬಡಿದಿದೆ ಕವಿಗೆ…
ಅಯ್ಯೋ ನೋಡ ಬನ್ನಿ!
೪
ಮುಚ್ಚಿದ ಕದ ಮುಚ್ಚಿದಂತೆ…
ಒಳಗೆ ಲೊಚಗುಟ್ಟುವ ಹಲ್ಲಿಯಂತೆ…
ಮುತ್ತಿಗೆ ದಾಸಾಗಿ,
ತುತ್ತಿಗೆ ಕೂಸಾಗಿ,
ಮೆತ್ತನೆ ಹಾಸಿಗಿ,
ಮೇಲೆ ಹೇಸಿಗಿ-
ಹೇಗಿದ್ದವಾ ಹೇಗಾದನಲ್ಲ?!
ಗರ ಬಡಿದಿದೆ ಕವಿಗೆ…
ಅಯ್ಯೋ ನೋಡ ಬನ್ನಿ!
ಕವಿ ಹೇಗಾದ ಕಾಣ ಬನ್ನಿ!!
ನೀವು ಆಗ ಬನ್ನಿ,
ಬೇಗ ಬನ್ನಿ.
*****