ಮುಗಿಲು ತುಂಬಿತು ನಿನ್ನ
ಅದ್ಭುತದ ಗಾಯನದ
ಸೊಂಪಿನಿಂಪಿನ ಮೇಳವು
ಮನವು ಪರವಶವಾಗಿ
ಸ್ವಾಮಿ ಸನ್ನಿಧಿಗೈದಿ
ಉಕ್ಕಿ ಬಂದಿತು ಧ್ಯಾನವು
ಕುಸುಮ ಮಾಲೆಗಳಂತೆ
ತೂಗಿ ಬಂದುವು ರಾಗ
ದಲೆಯ ತೆರದೊಳು ಗಮಕಗಳ್
ರಸವ ಚಿಮ್ಮುತ ಒಡೆದು
ಮೂಡಿದುವು ಶಬ್ದದೊಳು
ಮಿಂಚಿನಂದದಿ ಮೂರ್ಛೆಗಳ್
ಗಗ್ಘರಿಪ ತಾಳದನಿ
ಝೇಂಕರಿಪ ಮೇಳದನಿ
ಅಚ್ಯುತಾನಂತದೊಳಗೆ
ಸುಯ್ಯೆಂದು ಸುಳಿದಾಡಿ
ನೃತ್ಯವಂ ಗೈದಿಹುದು
ಎನ್ನೆದೆಯ ಆಳದೊಳಗೆ
ಆನಂದ ಸುಮವರಳಿ
ಮನದ ಭೃಂಗವು ಕೆರಳಿ
ಸೂರೆಗೊಂಡಿತು ಮಧುವನು
ತ್ಯಾಗರಾಜರ ಭಕ್ತ
ಭಂಡಾರದಗ್ಗಳದ
ಶ್ರಾವ್ಯಗೀತೆಯ ಸುಧೆಯನು
ಸಂಗೀತ ಕಲೆಯೊಳಗೆ
ಸಾಹಿತ್ಯವಡಗಿಹುದು
ದೇಹಿಯೊಳಗಾತ್ಮನಂತೆ
ತಾಪಸಿಯ ತಪದಂತೆ
ಸಸ್ಯಗಳ ಫಲದಂತೆ
ಪ್ರಣಯಿಗಳ ಪ್ರೇಮದಂತೆ
ಮಾತೃ ಗುರು ಸ್ಥಾನಗಳ-
ನಾಕ್ರಮಿಸಿಕೊಂಡಿಹುವು
ಸಂಗೀತ ಸಾಹಿತ್ಯಗಳ್
ಲೋಕೇಶನುನ್ನತಿಯ
ಸತ್ಯ ಸೌಂದರ್ಯಗಳ್
ಜೀವನಿಗೆ ಆದರ್ಶಗಳ್
ಈ ಕಲೆಗೆ ಸಮವಿಲ್ಲ
ಈ ಕಲೆಗೆ ಸೋಲಿಲ್ಲ
ಅಮರತ್ವವಿದು ವೈಣಿಕ
ಗಾನವಿದ್ದೆಡೆಯಿಂದ
ತಾನಾಗಿ ಮೂಡುವುದು
ಆನಂದಮಯದ ನಾಕ
ಯಾರಾದರೇನಣ್ಣ
ಗುಣಕೆ ಮತ್ಸರವುಂಟೆ?
ಗಾಯನದಿ ನಿಪುಣ ನೀನು
ದೊರೆವನಿತು ರಸವನ್ನು
ಸವಿಯಲೋಸುಗವೆಂದು
ಬಂದ ಜನಕಜೆಯು ನಾನು
*****