ಕುಲವು ಕುಲವು ಕುಲವು ಎಂದು ಹಾರುತಿರುವೆಯಾ?
ಸುಳ್ಳೆ ಸುಳ್ಳೆ ವೇಷಗಳನು ತೋರುತಿರುವೆಯಾ?
ಎಲ್ಲಿ ಬಂತು ಕುಲವು ತನ್ನ ರೂಪವಾವುದು?
ಓಳ್ಳೆ ಮನಸು ಇಲ್ಲದಿರಲು ಕುಲವು ಕಾಯದು
ಮಡಿಯನುಟ್ಟು ವ್ರತವ ಮಾಡಿ ಪೂಜೆಗೈದೊಡೆ
ಬಿಡುವುದೇನು ದುರಿತ ಧರ್ಮನಿಯಮವಿರದೊಡೆ?
ಸ್ಮರಿಸು ನಿನ್ನ ಹುಟ್ಟನೊಮ್ಮೆ ಶೀಲವಂತನೆ
ನೆನೆಯೊ ನವ ದ್ವಾರಳನು ನೇಮವಂತನೆ
ಸಗ್ಗ ನರಕವೆರಡು ನಿನ್ನ ಒಳಗೆ ಕಾದಿರೆ
ಹಿಗ್ಗಿ ಪಯಣ ಬೆಳಸುವೆಯಾ ಭಳಿರೆ ಭಾಪ್ಪುರೆ!
ಶಿವನ ಕುಲವು ಒಂದೇ ಇರಲು ಬೇರೆ ಕುಲಗಳೇ
ಅವನಿಯೊಳಗೆ ಬಂದ ನಾವು ಶಿವನ ಮಕ್ಕಳೇ
ಒಂದೆ ಬುವಿಯು ಒಂದೆ ಬಾನು ಒಂದೆ ಗಂಗೆಯು
ಒಂದೆ ಸೂರ್ಯ ಒಂದೆ ಚಂದ್ರ ಒಂದೆ ಆತ್ಮವು
ಒಂದೆ ಸೃಷ್ಟಿ ಒಂದೆ ಧರ್ಮ ಒಂದೆ ಮತವಿದು
ಒಂದೆ ಬ್ರಹ್ಮ ಒಂದೆ ಜ್ಞಾನ ಒಂದೆ ಬೆಳಸಿದು
ತೆರೆದು ನೋಡು ನಿನ್ನ ಕಣ್ಣ, ದ್ವೈತವೆಲ್ಲಿದೆ?
ಬರಿಯ ಮಾತು ಅಲ್ಲ, ಮನುಜ, ಸತ್ಯವಿಲ್ಲಿದೆ!
ಮನವ ಬಿಚ್ಚಿ ಮರ್ಮವರಿತು ನಕ್ಕುನಲಿದರೆ
ಜನಕಜೆಗೆ ಹಿತವು, ಅಣ್ಣ, ತನ್ನ ತಿಳಿದರೆ
*****