ತಂದಿಹೆಯ ತಕ್ಕಡಿಯ ತೂಗುವುದಕೆ?
ಭೂಮಿ ಆಕಾಶಗಳು ಸಾಲವಿದಕೆ.
ಚಾಚಿಹೆಯ ನಾಲಿಗೆಯ ಸವಿಯುವುದಕೆ?
ಒಂದಲ್ಲ, ಎರಡಲ್ಲ ನುಂಗುವುದಕೆ.
ಮಾಡಿಹೆಯ ಲೆಕ್ಕವನು ತಿಳಿಯುವುದಕೆ?
ದಾಟಿಹುದು ಸಂಖ್ಯೆಗಳ ಲೆಕ್ಕವೇಕೆ?
ನೀಡಿಹೆಯ ಕರಗಳನು ಹಿಡಿಯುವುದಕೆ?
ಗೋಳವಿದು ತುದಿಮೊದಲು ತೋರದಿದಕೆ.
ಕಂಗಳನು ತೆರೆದಿಹೆಯ ಕಾಣುವುದಕೆ?
ಮಂಜು ಕವಿದಿಹ ಪರೆಗಳುಂಟು ಇದಕೆ.
ಸಿದ್ಧವೇ ನೀನೊಮ್ಮೆ ನಗ್ಗುವುದಕೆ?
ಹದ್ದು ಮೀರಿದೆ, ಕೊನೆಯೆ ಇಲ್ಲವಿದಕೆ.
ಸೋಂಕಿಹೆಯ ತಂತಿಗಳ ಮೀಟುವುದಕೆ?
ನಾದವಿದ್ದೇ ಇಹುದು ನುಡಿಸಲೇಕೆ?
ಮತ್ತೇನು? ನಿನಗಿನ್ನು ತವಕವೇಕೆ?
ಅಮರತ್ವಪದವನ್ನು ಪಡೆಯುವುದಕೆ.
ಪಯಣವೇ ನಿನಗೀಗ ಅಮರತ್ವಕೆ?
ತೆಪ್ಪಗಳು ಬಂದಿಹುವು ದಿಗ್ವಿಜಯಕೆ.
ಯಕ್ಷಿಣಿಯದೊ ಕಾದಿಹುದು ನೋಡು, ಜೋಕೆ?
ಹೇಡಿಯೇ ಜನಕಜೆಯು ಹೆದರುವುದಕೆ?
*****