ಬಾಯ್ದೆರೆದು ಮುತ್ತಿರುವ
ದಳ್ಳುರಿಯ ಮಧ್ಯದೊಳು
ಚಿಚ್ಛಕ್ತಿಯೊಂದೆದ್ದಿತು
ಇದೆ ಸಮಯ ಇದೆ ಸಮಯ
ತಡಮಾಡದಿರು ಏಳು
ರೂಪವನು ಇಳಿಸೆಂದಿತು
ರೂಪವೆಂದರೆ ಏನೊ
ಚಿತ್ರವಾಗಿದೆ ಮಾತು
ಶಿಲ್ಪಿಯೇ ನಾನೆಂದೆನು
ಪರಿಹರಿಪೆ ಸಂಶಯವ
ನೋಡೆನುತ ಬಹುತರದ
ಭಾವಗಳ ತಂದೊಡ್ಡಿತು
ರೂಪಗಳ ಭಟ್ಟಿ ಇದು
ಆನಂದವಿಲ್ಲಿಹುದು
ಬಿತ್ತರಿಸು ಏಳೆಂದಿತು
ಇರಲಿರಲು ಬಹುದೆಂದು
ಗೈಮೆ ಇದು ಸುಖವೆಂದು
ಚಟಪಟಿಸಿ ನಾನೆದ್ದೆನು
ಭಾವನೋದ್ರೇಕದೊಳು
ಉಲ್ಲಾಸವುಕ್ಕೇರಿ
ಬಹುದೂರ ನಾ ಸಾಗಿದೆ
ಆನಂದ ಸಿಗದಾಗೆ
ಅತ್ತಿತ್ತ ಸುಳಿದಾಡಿ
ಕಂಗೆಟ್ಟು ಬೆದಕಾಡಿದೆ
ಓ ರೂಪವೇ ನಿನ್ನ
ಕಾಣಲೋಸುಗವೆಂದು
ಪೊಸರಾಜ್ಯಕೈತಂದೆನು
ಭಾವಶೃಂಗವೆ ನಿನ್ನ
ಬೀಡಿನಿಂದೆನಗೊಸೆದು
ಇಳಿದು ಬಾ ಬಳಿಗೆಂದೆನು
ಕೂಗದಿರು ಕಂಡತ್ತ
ಓಡದಿರು ಬಾ ಇಲ್ಲಿ
ವಾಹಿನಿಯು ಸೆಳೆದೊಯ್ವುದು
ತಾನಾಗಿ ಬಂದುದನು
ಪುಟವಿಟ್ಟು ಬೆಲೆಕಟ್ಟಿ
ರೂಪಕೊಡು ಅದಕೆಂದಿತು
ರೂಪಿಸುವ ಬಗೆ ಏನೊ
ಬಣ್ಣಗಳ ನಾನರಿಯೆ
ಪಾಠವೆನಗಿಲ್ಲೆಂದೆನು
ಭಾವವನು ಕಟ್ಟಿರಿಸಿ
ಅರ್ಥವನು ಬಿಚ್ಚಿಡುವ
ಪದಗಳನು ತಾರೆಂದಿತು
ನಿನ್ನ ಕಲ್ಪನೆಯೊಳಗೆ
ಚಿತ್ರ ತಾನೇಳುವುದು
ನವನೀತವುದಯಿಪಂತೆ
ಭಾವದೊಳು ಕಾಂತಿಯುತ
ಔಪಾಸನೆಯು ಮೂಡೆ
ಸಾವಿಲ್ಲ ಆ ರೂಪಕೆ
ಭಾವಗಳು ಉನ್ನತದ
ವಜ್ರಗಳು ಇದ್ದಂತೆ
ವಾಕ್ಯಗಳು ಚಿನ್ನದಂತೆ
ನಿನ್ನ ನಿಪುಣತೆಯೊಡನೆ
ಕಟ್ಟಡವ ಕಟ್ಟಿರಿಸೆ
ಪೂರ್ಣತೆಯು ಬಹುದೆಂದಿತು
ಕಟ್ಟದಿರು ಕಬ್ಬಿಣದ
ಕಟ್ಟಡದಿ ಪುಷ್ಪವನು
ಮಕರಂದವಿಹುದು ಒಳಗೆ
ಮಕರಂದವಿಲ್ಲದೊಡೆ
ಸಮದೊಳಗೆ ಸುಖವಿಲ್ಲ
ಪೋಗದಿರು ಆ ಗೊಡವೆಗೆ
ಅನುಭವದ ಕ್ಷೇತ್ರವನು
ಹೊಕ್ಕು ನೋಡಿದೊಡಲ್ಲಿ
ನುಡಿಗಳಿಗೆ ಕ್ಷಾಮವಿಲ್ಲ
ಸುಲಭ ಶೈಲಿಯ ಸೊಗದ
ಕಬ್ಬಿನಂತಹ ಸವಿಯ
ವಾಕ್ಯಗಳ ತಾರೆಂದಿತು
ದಿಶೆ ದಿಶೆಯೊಳಲೆದಲೆದು
ವಾಕ್ಯಗಳನಾಯ್ದಾಯ್ದು
ಸಡಗರದಿ ನಾ ತಂದೆನು
ಸುಲಭ ಶೈಲಿಯ ಸೊಗದ
ಕಬ್ಬಿನಂತಹ ಸವಿಯ
ವಾಕ್ಯಗಳೊ ನೋಡೆಂದೆನು
ಸಾಕು ಬಿಡು ಸಾಕು ಬಿಡು
ಏನ ತಂದೆಯೊ ಕಾಣೆ
ಈ ಭಾವಕೀ ಪದಗಳೆ?
ಕಡಿವಾಣವಿಲ್ಲದಿಹ
ಪದಗಳಿವು ‘ಛೀ’ ಯೆಂದು
ಮೂದಲಿಸಿ ಸಿಡುಗುಟ್ಟಿತು
ನಿನ್ನಂತೆ ಕಂಡವರು
ಸಿಡುಗುಟ್ಟುವರೊ ಏನೋ
ರೂಪವೇ ಬೇಡೆಂದೆನು
ಅನ್ಯರಾಡುವುದೇನು
ನಿನ್ನ ಕತೆ ನಿನದಿರಲು
ಅಳುಕುಬಗೆ ಬೇಡೆಂದಿತು
ರೂಪವದು ನಮದಲ್ಲ
ಟೀಕಿಪರ ಸೊತ್ತಲ್ಲ
ಗಣಿಯೊಡೆಯ ವಿಶ್ವನಾಥ
ಆಳಕ್ಕೆ ತಕ್ಕಂತೆ
ಏಳುವುದು ಆನಂದ
ಜನಕಜೇ, ಕೇಳೆಂದಿತು
*****