ಕಾಲವಾಹಿನಿಯಲ್ಲಿ ಸಿಕ್ಕಿ ನಾವೆಲ್ಲಿಗೋ
ತೆರಳುತಿಹ ಭೀತಿಯಿಹುದು ;
ಮೇಲ್ಮೇಲೆ ವಿಷವೀಚಿ ಮಾಲೆಗಳು ನುಗ್ಗುತ್ತ
ಬರುತಿಹವು ಕೊಚ್ಚುತಿಹವು.
ಕುರುಡಾದ ನಿಯಮವೊ ಕುಂಟಾದ ವಿಧಿಗಳೋ
ಈವರೆಗೆ ಪೊರೆದುವಯ್ಯ;
ಹರಿದು ಹೋಗಿಹವೀಗ ರಕ್ಷಣೆಯ ಬಂಧಗಳು
ಕಾವುದನು ಕಾಣೆನಯ್ಯ.
ಬಂಡೆಗಳು ಏನಿಹವೊ ನೀರಸುಳಿಯೇನಿಹುದೊ
ಕತ್ತಲೆಯು ಮುತ್ತುತಿಹುದು;
ಕಂಡ ದಾರಿಯುಮಲ್ಲ ಹೇಳುವರು ಮೊದಲಿಲ್ಲ
ಎತ್ತಲುಂ ಜ್ಯೋತಿಯಿಲ್ಲ.
ಸುತ್ತಲುಂ ಉರಿದಾಹ ಜೀವನಕೆ ಬಡಿದಾಟ
ತಿಮಿತಿಮಿಂಗಿಲದ ನೋಟ
ಸಾತ್ವಿಕದ ರಾಜಸದ ಬುಗ್ಗೆಗಳು ತೋರಿಲ್ಲ
ಸಮತೆ ಸೈರಣೆಗಳಿಲ್ಲ.
ಹಿರಿಯರಲಿ ಗೌರವವು ದೈವದಲಿ ನಂಬಿಕೆಯು
ಹೆಸರಿಲ್ಲದಾಗುತಿಹವು ;
ದೊರೆಯೆಂಬ ಗುರುವೆಂಬ ಪೂಜ್ಯಭಾವಗಳೆಲ್ಲ
ಉಸಿರಿಡದೆ ಮೆತ್ತಗಿಹವು.
ಕಿರಿಯರಿಗೆ ಹಿರಿಯರಿಗೆ ನಾಡಲ್ಲಿ ಆರಿಗುಂ
ನಿಯಮಗಳ ಸಹನೆಯಿಲ್ಲ;
ಸರಪಳಿಯ ಕಿತ್ತೆಸೆದ ಮದ್ದಾನೆಗಳ ಗುಂಪು
ನಯನೀತಿ ಗಣನೆಯಿಲ್ಲ.
ಎಲ್ಲರುಂ ಅರಿವಿಲ್ಲದೆಳಮಕ್ಕಳಂದದಲಿ
ಉರಿಯೊಡನೆ ಕುಣಿಯುತಿಹರು ;
ಎಲ್ಲಿಯುರಿ ಹತ್ತುವುದೊ ಹಡಗೆಲ್ಲಿ ಮಗುಚುವುದೊ
ಪರಿಹರಿಸಿ ಕಾವರಾರು ?
ಹುಚ್ಚು ಹೊಳೆಯನು ನೋಡಿ
ವಿಷವಾಹಿನಿಯ ನೋಡಿ
ಬೆರಗುವಟ್ಟಿರುವೆವಯ್ಯ ;
ಎಚ್ಚರಿಕೆ ಕೊಡಲಿಂದು ಆವ ಬೆಳಕದು ಬಂದು
ಪೊರೆಯುವುದೊ ಕಾಣೆನಯ್ಯ.
*****