ಅಂದು ಇಂದು ಎಂದಿಗೂ
ಲೋಕದ ಥರ ಒಂದೇ
ಅವತಾರಗಳಳಿದರೂ
ಕ್ರಿಸ್ತ ಬುದ್ಧ ಎಳೆದರೂ
ಒಂದೆ ಒಂದು ಇಂಚೂ ರಥ
ಸರಿಯಲಿಲ್ಲ ಮುಂದೆ.
ಅಂಥ ಇಂಥ ರಥವೆ ? ಕೊಂಚ
ಕೊರಕಲತ್ತ ಜಾರಿ
ತಪ್ಪಿತಷ್ಟೆ ದಾರಿ,
ಪಥಕೆಳೆಯಲು ಬಂದ ಧರ್ಮ ಅಲ್ಲಲ್ಲೇ ಗೋರಿ!
ಒಳಗೆ ಕುಳಿತ ದೈವದೆಲ್ಲ
ಮಹಿಮೆಯ ಅಳೆದವರೆ ಇಲ್ಲ
ರಾಮಾಯಣ ಭಾರತ ಸಹ
ನಿವಾಳಿಸಿದ ಕಾಯಿ,
ಕೃತ ತ್ರೇತರ ತಾತ, ಕಲಿಯ
ನುಡಿತಕೆ ಇದು ಬಾಯಿ
ಹಣೆಯ ಮೇಲೆ ಸಿಕಂದರರ
ಹೆಸರುಗಳನು ಬರೆಸಿದೆ,
ಬಡವರನ್ನು ಅಡಿಗೆ ಹಾಕಿ
ಕಷ್ಟದ ಕಥೆ ಹರಿಸಿದೆ,
ಮೈಯ ಸುತ್ತ ಧ್ವಜದ ಬದಲು
ಈಟಿಗಳನೆ ಸಿಗಿಸಿದೆ,
ಗುಡುಗಿನೆದೆಯೆ ನಡುಗುವಂತೆ
ಢರ್ರೆನ್ನುತ ತೇಗಿದೆ.
ಲೋಭವೆನುವ ದೇವರ
ಮೆರೆಸುತ್ತಿದೆ ಬಯಕೆಯೆಂಬ
ದೀಪ ಹಚ್ಚಿ ಸಾವಿರ,
ಪ್ರಜ್ವಲಿಸಿದೆ ಬೆಳಗಿ ಮುಖ
ಉಜ್ವಲಿಸಿದೆ ಭಕ್ತಿ
ಉಗ್ಘಡಿಸಿದೆ ಭಕ್ತಗಣ
ಉಕ್ಕುತ್ತಿದೆ ಶಕ್ತಿ
ಬೆಳಗುತ್ತಿದೆ ಬೆಂಕಿ ಹತ್ತಿ
ಗುಡಿಸಲುರಿಯ ದೀಪ
ಕಾರ್ಖಾನೆಯ ಚಿಮಣಿ ತೂರಿ
ಚೀರಿ ಬರುವ ಧೂಪ
ನೈವೇದ್ಯಕೆ ಬಡಬಗ್ಗರ
ಮಕ್ಕಳ ತಲೆಕಾಯಿ
ಬೊಬ್ಬಿರಿದಿವೆ ಭೇರಿ ನುಡಿಸಿ
ಧನಿಕರ ಮನೆ ನಾಯಿ
ದೈವಮಹಿಮೆ ಕಂಡುಕೊಂಡ
ಧನಿಕವೃಂದ
ಶಾಸನಗಳ ಬರೆಸಿಕೊಟ್ಟ
ದತ್ತಿಗಳಿವೆ ಸಾಕ್ಷಿಗೆ
ಅಂಗಭೋಗ ರಂಗಭೋಗ
ದೇವದಾಸಿ ಪೂಜೆಗೆ
ಬಿಟ್ಟ ಬಿಟ್ಟ ಹೊಲಗಳಿವೆ
ಅದ ಕಾಯುವ ಕುಲಗಳಿವೆ
ಖಾಸಾ ಭೇಟಿ ಕೊಡುವುದಿದೆ
ಪೀಠಪತಿಗಳು
ಮಹಾಮಂತ್ರಿ, ಬರೀ ಮಂತ್ರಿ
ಬೆನ್ನ ಹಿಂದೆ ಇರುವ ತಂತ್ರಿ
ಕರಿಲಕ್ಷ್ಮೀವರಪಾತ್ರ ಕರೋಡು ಪತಿಗಳು.
ಯಾಜ್ಞವಲ್ಕ್ಯ ಪೈಗಂಬರ
ಯಾರು ಯಾರೋ ಬಂದರು
ವೇದ ಖುರಾನ್ ಸನ್ನೆಗೋಲು
ಅಡಿಗೆ ಕೊಟ್ಟು ಎಳೆದರು
ಜಗ್ಗಲಿಲ್ಲ, ಕಡೆಗೆ ಬಂದ
ಹಿಗ್ಗು ನಗೆಯ ಗಾಂಧಿ
(ಮಂಗಳಗಳ ನಾಂದಿ)
ಎಳೆದ ನೋಡಿ ಒಂದೇ ಸಲ
ಉಘೇ ಉಘೇ ಮಹಾಬಲ
ಸರಿದ ಭರಕೆ ಜರುಗಿ ಚಕ್ರ
ಹೂತೆ ಹೋಯ್ತು ಪೂರ್ತಿ
ಓಂ ಶಾಂತಿಃ: ಶಾಂತಿಃ ಶಾಂತಿಃ
*****