Home / ಕವನ / ಕವಿತೆ / ಉರುಳಿ ಅರಿವಿನ ಮೋರಿಯಲ್ಲಿ

ಉರುಳಿ ಅರಿವಿನ ಮೋರಿಯಲ್ಲಿ

ಉರುಳಿ ಅರಿವಿನ ಮೋರಿಯಲ್ಲಿ
ನರಳುತ್ತಿರುವೆ
ಇಲ್ಲಿ ನೆಮ್ಮದಿ ಎಲ್ಲಿ ?
ಕೊಳೆತು ನಾರುತ್ತಿರುದ ಹಳೆಯ ಭೂತ ;
ಅದರ ಮೇಲೇ ಮೊಳೆತ ಹೊಸ ಕನಸುಗಳ ತುಡಿತ,
ಎರಡು ಗಡಿಗಳ ನಡುವೆ
ಒಡೆದು ಬಿದ್ದಿದೆ ರೂಪ.
ಹೊಕ್ಕುಳಿನ ಹುರಿ ಕಡಿದು
ಹಳಿ ಬಿಟ್ಟು ಹೊರನಡೆದು
ಪ್ರತ್ಯೇಕತೆಯ ಸುಳ್ಳ ಕೋಟಿ ಕೊರಳುಗಳಲ್ಲಿ
ಕೂಗಿ ದಣಿದಿದೆ ಪಾಪ

ಚಿತ್ತ ಹೊತ್ತ ಮನುಷ್ಯ
ಚಿತ್ತವಿಲ್ಲದ ನೆಲ,
ಬೆಟ್ಟ ಮರ ಗಿಡ ಕಲ್ಲು,
ಹುಲ್ಲು ಪರಿಮಳ ಜಲ ;
ಯಾರು ಉತ್ತಮ, ಯಾರು ಅಧಮ, ಏತಕೆ, ಹೇಗೆ ?
ಯಾರು ಪಡೆಯುತ್ತಾರೆ ಯಾರಿಂದ, ಏತಕ್ಕೆ ?
ಹೇಗೆ ದುಡಿಸುತ್ತಾರೆ, ದುಡಿಸಿ ಗುಡಿಸುತ್ತಾರೆ
ಯಾರು ಯಾರನ್ನೇಕೆ ಜೀತಕ್ಕೆ ?

ಯೋಚಿಸಬರದ ಅಶೋಕ
ಋತು ತಪ್ಪದೆ ಸುರಿವ ಚಿಗುರು,
ಯೋಚಿಸಲಾಗದ ಆಲದ ಅರ್ಧ ಎಕರೆ ನೆರಳು
ಯೋಚಿಸಲಾಗದ ಮಾವು,
ಆಲೋಚಿಸಲಾಗದ ಹೂವು,
ಯೋಚಿಸುವ ಮನುಷ್ಯನನ್ನೇ
ಸಾಕುವ ಪರಿಯನ್ನು
ಆಲೋಚಿಸಬೇಕು ನಾವು

ಚಿತ್ತವೇ ಶತ್ರುವೇ ನಮಗೆ ? ಸೃಷ್ಟಿಯ ಹಡೆದ
ಮೂಲಕ್ಕೆ ಮಿಥ್ಯವೇ ?
ಅದಕ್ಕೂ ಮೀರಿದ ಶಕ್ತಿ ಜಡಕ್ಕೆ ಸಲೀಸು ದಕ್ಕಿ
ಸತ್ಯ ಪ್ರತ್ಯಕ್ಷವೆ ಅದಕ್ಕೆ ?
ಕಡಿಸಿಕೊಳ್ಳುವ ನೋವು ಕಡಿಯುವ ಜೀವಕ್ಕಿರದ
ಸ್ಥಿತಿ ಮರ್ತ್ಯಮಾತ್ರವೆ ?
ಮೂಲಪ್ರಜ್ಞೆಯ ಬಿಂಬ
ಕೋಟಿ ಚೂರುಗಳಾಗಿ
ಹಿರಿಕಡಲು ಹನಿಹನಿಗಳಾಗಿ ಒಡೆದ ವಿಕಾರ
ಗುರುತಿಸಿದರೂ ನಿಜವ ರುಚಿಯಲ್ಲಿ, ಹನಿಗೆಲ್ಲಿ
ಹಡಗುಗಳ ತೇಲಿಸುವ ಅಧಿಕಾರ ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...