ಒಂದು ಧರ್ಮಕೆ ಮೊಳೆತು ಇನ್ನೊಂದರಲಿ ಫಲಿತು
ಸಾರ ಒಂದೇ ಎಂದು ಹಾಡಿದಾತ,
ಹನಿ ಸೇರಿ ಹೊಳೆಯಾಗಿ ಗುರಿ ಸೇರಿ ಕಡಲಾಗಿ
ನಭವೇರಿ ಮುಗಿಲಾಗಿ ಆಡಿದಾತ,
ಹತ್ತು ವನಗಳ ಸುತ್ತಿ, ಹೂ ಹೂವನೂ ಮುತ್ತಿ
ಒಂದೇ ಜೇನಿನ ಹುಟ್ಟು ಕಟ್ಟಿದಾತ,
ಎಲ್ಲಿ ಹೇಳೋ ತಾತ, ಹಿಂದೆ ಯಾ ಅವಧೂತ
ಸಾಧಿಸಿದ ನಿನ್ನಂತೆ ಧರ್ಮವನ್ನು,
ಕಾವ್ಯದಲಿ ಕಡೆದ ಆ ಮರ್ಮವನ್ನು?
ಸೃಷ್ಟಿ ಮರೆಸಿರುವ ಗುಟ್ಟುಗಳನು
ಸಪ್ತಸ್ವರ ಮೀರಿದಾ ಮಟ್ಟುಗಳನು
ನಿನ್ನ ನುಡಿಯಲ್ಲಿಟ್ಟೆ, ಮಾತಿಗರ್ಥವ ಕೊಟ್ಟೆ
ಹಾಡು ಮಾಡಿದೆ ನಿನ್ನ ವ್ಯಥೆಗಳನ್ನು;
ಹೇಳು, ಹೇಳು ಶರೀಫ, ಹಿಂದೆ ಯಾವ ಖಲೀಫ
ಏರಿದ್ದ ಈ ಹೊನ್ನಿನಟ್ಟವನ್ನು
ಮಣಿಸಿದ್ದ ಮಾತುಗಳ ಬೆಟ್ಟವನ್ನು?
ಏನು ಜೀವನ ಧರ್ಮ, ಏನು ಸೃಷ್ಟಿಯ ಮರ್ಮ
ಏನು, ಎಲ್ಲಿ, ಏಕೆ ತಾಕಿದವನು
ಬೆಟ್ಟ ಬೆಟ್ಟವ ಕುಲುಕಿ ಸಪ್ತಸಾಗರ ಕಲಕಿ
ಸೃಷ್ಟಿ ಮೂಲವ ಹುಡುಕಿ ಜೀಕಿದವನು;
ಹೇಳು ಹೇಳು ಶರೀಫ, ಬೇರೊಬ್ಬ ಯಾರವನು
ನಿನ್ನಂತೆ ನಡೆನುಡಿಯ ಕಾಡಿದವನು
ತೀರದಾಚೆಯ ತಾರೆ ಕೂಡಿದವನು?
ಅನ್ನ ನೆಲ ಮಾತು ಮತ ಎಲ್ಲ ಬೇರಾದರೂ
ಪ್ರೀತಿಯಲಿ ಅವನೆಲ್ಲ ಕಲೆಸಿಬಿಟ್ಟೆ,
ಬಣ್ಣ ಏಳಾದರೂ ಒಂದೆ ಕಾಮನಬಿಲ್ಲು
ಚಂದವಾದಂತೆ ನೀ ಬಾಳಿಬಿಟ್ಟೆ,
ಗಡಿಮೀರಿ, ಮಡಿಮೀರಿ, ಬಾನಿನಲಿ ಕುಡಿಯೂರಿ
ಗಾಳಿಯಲಿ ಬಾಳಪಟ ತೇಲಿಬಿಟ್ಟೆ;
ಹೇಳು ಹೇಳು ಶರೀಫ, ಯಾವ ಭಾವಕಲಾಪ
ಇಂಥ ಬಿಡುಗಡೆ ಕೊಟ್ಟ ಸೂತ್ರವಾಯ್ತು, ಹೇಗೆ
ಬರಿ ನೀರು ಪರಿಶುದ್ಧ ತೀರ್ಥವಾಯ್ತು?
*****