ಯಾರೋ ಬೇಡುವ ಯಾರೋ ಹಾಡುವ
ಬೆರೆಯದ ವಾಣಿಗಳು,
ಯಾರೋ ಮುಗಿಲಲಿ ಯಾರೊ ಕಣಿವೆಯಲಿ
ಹೊಂದದ ಚಿತ್ರಗಳು!
ತಿನ್ನಲಾರದೆ ಅನ್ನವ ಮೋರಿಗೆ
ತೂರುವ ಹಸ್ತಗಳು,
ಮಣ್ಣಿನ ಜೊತೆ ಬೆರತನ್ನವೆ ಎಷ್ಟೋ
ಒಡಲಿಗೆ ವಸ್ತುಗಳು,
ಚಿನ್ನದ ಭಾರಕೆ ತಾರಾಡುವ ಮೈ
ಸರಿಯುವ ಠೀವಿಗಳು,
ಹೊದಿಯಲು ಹಚ್ಚಡ ಇಲ್ಲದೆ ಚಳಿಯಲಿ
ನಡುಗುವ ದೇಹಗಳು.
ಉಣ್ಣುವ ಬಾಯಿಗೆ ದುಡಿಯುವ ಕೈಗಳು
ಅವರವರದೆ ಇರಲಿ,
ಅನುಭವಿಸುವ ಸುಖವೆಲ್ಲಕೆ ತಮ್ಮದೆ
ಬೆವರಿನ ಬೆಲೆ ತೆರಲಿ,
ಜೀವ ಜೀವಗಳ ನಡುವೆ ಎದ್ದ
ಗೋಡೆಗಳ ಪಾಯ ಬಿರಿದು,
ಉರುಳಿ ನೆಲಕೆ ತಡೆ, ತೊಲಗಲಿ ಅಂತರ
ತರತಮ ನೀತಿಗಳು.
*****