ಆರದಿರಲಿ ಆಸೆ ಉರಿಗೆ
ಬೀಳದಿರಲಿ ಕನಸು,
ನೋಯದಿರಲಿ ಭಾರ ಹೊತ್ತ
ಬಡವರ ಹೂಮನಸು.
ಯಾರ ಅನ್ನ ಎಲ್ಲೋ ಬೆಳೆವ
ರೈತನ ಬಲದಾನ
ಯಾರ ಭಾರ ಏಕೋ ಹೊರುವ
ಕೂಲಿಯವನ ಮಾನ
ಬೀದಿ ಗುಡಿಸಿ ಕೊಳೆನೆಲದಲಿ
ಮಲಗುವವನ ನೇಮ
ಕಾಯುತ್ತಿವೆ ನಮ್ಮ, ಅವರೆ
ಈ ನಾಡಿನ ಪ್ರಾಣ
ಗುಡಿಸಲೆಲ್ಲ ಗುಡಿಯೆದುರಲಿ
ಹಚ್ಚಿಟ್ಟಿಹ ಹಣತೆ
ಆರದಂತೆ ಅದನು ಕಾಯ್ದು-
ದೊಂದೆ ನೇರ ನಡತೆ
ಈ ಮಾತೆ ಪ್ರೀತಿ, ಇದೇ
ನೀತಿ, ಇದೇ ರೀತಿ
ಈ ತಿಳಿವಿಗೆ ಎಂದೆಂದೂ
ಬಾರದಿರಲಿ ಭೀತಿ.
*****