ಅಮ್ಮ ನಿನ್ನ ಕರುಣೆಯ ನಾ
ಸದಾ ಮನದಿ ನೆನೆವೆ
ನೂರು ರೂಪಗಳಲಿ ನಮ್ಮ
ಭಾಗ್ಯವ ನೀ ಬೆಳೆವೆ
ಮಲೆನಾಡಿನ ಕಾಡುಗಳಲಿ
ಮೈಪಡೆದ ಬಲವೆ,
ಅಡಿಕೆ ತೆಂಗು ಸಾಲು ಸಾಲು
ಸೇನೆ ನಿಂತ ನಿಲವೆ,
ಶಾಲಿವನದ ತೆನೆಗಳಲ್ಲಿ
ತೂಗುವನ್ನಪೂರ್ಣೆಯೇ,
ಚೆಲುವಿನಷ್ಟೊ ಹೊನಲು ಸೇರಿ
ಆದ ಮಹಾರ್ಣವವೇ.
ಐಹೊಳೆ ಬಾದಾಮಿಯಲಿ
ಶಿಲೆ ಹಾಡುವ ಗೀತವೇ,
ಪುರಂದರಶ್ರುತಿ ಚಿಮ್ಮುವ
ಕರ್ನಾಟಕ ಸಂಗೀತವೇ,
ನೃಪತುಂಗನಿಗೂ ಮುಂಚಿನ
ಕಾವ್ಯರಾಜ ಮಾರ್ಗವೇ,
ಸಹಸ್ರಾರು ಸಂವತ್ಸರ
ಶಾಸನ ಸೌಭಾಗ್ಯವೇ!
*****