ಎಲ್ಲಿ ಅರಿವಿಗೆ ಇರದೊ ಬೇಲಿ
ಎಲ್ಲಿ ಇರದೋ ಭಯದ ದಾಳಿ
ಅಂಥ ನೆಲ ಇದೆಯೇನು ಹೇಳಿ?
ಸ್ವರ್ಗವನು ಅದರೆದುರು ಹೂಳಿ
ಹಸಿದಂಥ ಕೂಸಿರದ ನಾಡು
ಉಸಿರೆಲ್ಲ ಪರಿಮಳದ ಹಾಡು
ಬೀಸುವುದೋ ನೆಮ್ಮದಿಯ ಗಾಳಿ-ಎಲ್ಲಿ
ಸ್ವಾತಂತ್ರ್ಯ ನಗುತಲಿದೆ ಅಲ್ಲಿ
ಕಣ್ಣೋ ಹಿಗ್ಗಿನಾ ಗೂಡು
ಮಣ್ಣೋ ಸುಗ್ಗಿಯಾ ಬೀಡು
ದುಡಿವುವೋ ಎಲ್ಲ ಕೈ ಎಲ್ಲಿ
ಬಿಡುಗಡೆಯು ಹಾಡುತಿದೆ ಅಲ್ಲಿ
ಪ್ರೀತಿ ನೀತಿಯ ಸೂತ್ರವಾಗಿ
ನೀತಿ ಮಾತಿನ ಪಾತ್ರವಾಗಿ
ಅರಳೀತು ಎಲ್ಲಿ ಎದೆಹೂವು
ಅಂಥ ನೆಲವಾಗಲೀ ನಾಡು
*****