ಕತ್ತಲೆ ಎನುವುದು ಇಲ್ಲವೆ ಇಲ್ಲ
ಇರುವುದು ಬೆಳಕೊಂದೇ,
ಅರಿಯದೆ ಜನರೋ ಕೂಗಿ ಹೇಳುವರು
ಕತ್ತಲೆ ಇದೆಯೆಂದೇ!
ಕತ್ತಲೆ ಎನುವುದು ನಮ್ಮದೆ ಸೃಷ್ಟಿ
ಕೇವಲ ನಮ್ಮದೆ ಕಲ್ಪನೆ,
ಬೆಳಕಿಗೆ ಬೆನ್ನನು ತಿರುಗಿಸಿದಾಗ
ಹುಟ್ಟುವ ಭ್ರಮೆಯನ್ನೇ
ಕತ್ತಲೆ ಕತ್ತಲೆ ಎನ್ನುತ್ತೇವೆ
ವಂಚಿಸಿ ಒಳಗನ್ನೇ!
ನಮ್ಮ ಸುತ್ತಲೂ ನಾವೇ ತಿರುಗಲು
ತಲೆ ತಿರುಗದೆ ಹೇಳಿ?
ಅಹಂಕಾರದ ಅಮಲು ಏರಲು
ಭ್ರಮೆಯದೆ ವೈಹಾಳಿ.
ಸೂರ್ಯನಿಂದ ಮುಖ ತಿರುಗಿಸಿದಷ್ಟಕೆ
ಬೆಳಕು ತೀರಲಿಲ್ಲ,
ಬೆಳಕಿದ್ದೇ ಇದೆ ಭೂಮಿಯ ಬೆನ್ನಲಿ
ನಮಗದರರಿವಿಲ್ಲ.
ಭೂಮಿಯು ಕುಸುವ ಮಾಯೆಯ ಕಳಚಿ
ಬೆಳಕ ಧ್ಯಾನಿಸೋಣ,
ಅಂತರಂಗದ ನಿರಂತರ ಬೆಳಕಿಗೆ
ಕಣ್ಣನು ತೆರೆಯೋಣ!
*****