ದೇಶದ ಆರ್ಥಿಕ ಶಕ್ತಿಯ ಬುನಾದಿಯಲ್ಲಿ ಎದ್ದು ಕಾಣುವ ಸೈಜುಗಲ್ಲು ಧೀರೂಭಾಯಿ ಅಂಬಾನಿ. ‘ಆನಿ ನಡೆದದ್ದೇ ದಾರಿ’ ಎನ್ನುವಂತೆ ಅಂಬಾನಿ ನಡೆದದ್ದೆಲ್ಲ ಯಶಸ್ಸಿನ ಹೆದ್ದಾರಿ.
ಮಹಾತ್ಮರನ್ನು ದೇವತಾ ಮನುಷ್ಯರನ್ನು, ರಾಜಕೀಯ ನಾಯಕರನ್ನು ಅವರ ಜಯಂತಿ-ಪುಣ್ಯತಿಥಿಗಳ ನೆಪದಲ್ಲಿ ಪ್ರತಿವರ್ಷ ನೆನಪಿಸಿಕೊಳ್ಳುತ್ತೇವೆ. ದೇಶವನ್ನು ಕಟ್ಟಿದ, ಸುತ್ತಲ ಪರಿಸರವನ್ನು ಒಪ್ಪಗೊಳಿಸಿದ ಹಿರೀಕರನ್ನು ನೆನಪಿಸಿಕೊಳ್ಳುವುದು ನಾಗರಿಕ ಸಮಾಜದ ಲಕ್ಷಣ ಅನ್ನಿಸುದರಲ್ಲಿ ಎರಡನೇ ಮಾತಿಲ್ಲ ಆದರೆ ದೇಶವನ್ನು ಆರ್ಥಿಕವಾಗಿ ಬಲಪಡಿಸಿದ ಹಾಗೂ ದುಡಿಯುವ ಕೈಗಳಿಗೆ ಕೆಲಸ ಕೊಟ್ಟ ಉದ್ಯಮಿಗಳನ್ನು ನೆನಪಿಸಿಕೊಳ್ಳವ ಪರಿಪಾಠ ಯಾವ ಸಮಾಜದ ಮಟ್ಟಿಗೆ ಅಪರೂಪವೇ. ಯಾವತ್ತೂ, ಧಾರ್ಮಿಕ-ರಾಜಕಾರಣ- ಸಾಂಸ್ಕೃತಿಕ ಪ್ರಭಾವಳಿಗಳ ನಾಯಕರ ಎದುರು ಉಳಿದ ಕ್ಷೇತ್ರಗಳ ಸಾಧಕರು ಮಂಕಾಗಿ ಕಾಣುತ್ತಾರೆ. ಧೀರೂಭಾಯಿ ಅಂಬಾನಿ ಇಂಥ ನಾಯಕರಲ್ಲಿ ಒಬ್ಬರು.
ಧೀರೂಭಾಯಿ ಅವರ ಬದುಕು-ಸಾಧನೆ ಬಗ್ಗೆ ಬರೆದಿರುವ ಕೆಲವು ಲೇಖಕರು ಅವರನ್ನು ಮಹಾತ್ಮ ಗಾಂಧೀಜಿಯೊಂದಿಗೆ ನೆನಪಿಸಿಕೊಳ್ಳುತ್ತಾರೆ. ಗಾಂಧಿ ಹಾಗೂ ಅಂಬಾನಿ ಅವರ ನಂಬಿಕೆಗಳು, ನಡೆದ ದಾರಿ, ಬದುಕಿದ ಪರಿ ಇತ್ಯಾದಿಗೆ ಅಜಗಜ ವ್ಯತ್ಯಾಸ. ಆದರೂ ಅಂಬಾನಿ ಅವರನ್ನು ಗಾಂಧಿಯೊಂದಿಗೆ ನೆನಪಿಸಿಕೊಳ್ಳಲಿಕ್ಕೆ ಕಾರಣವಿದೆ. ಅದು, ಗಾಂಧಿ ಹಾಗೂ ಧೀರೂಭಾಯಿ ಇಬ್ಬರೂ ಗುಜರಾತಿಗೆ, ಅದರಲ್ಲೂ ‘ಬನಿಯಾ’ ಸಮುದಾಯಕ್ಕೆ ಸೇರಿದವರು ಎನ್ನುವುದು. ರಾಜಕಾರಣದ ಹಾದಿಯಲ್ಲಿ ನಡೆದ ಗಾಂಧಿ ಹೊಸ ಇತಿಹಾಸ ಸೃಷ್ಟಿಸಿದರೆ- ಧೀರೂಭಾಯಿ ಭಾರತದ ಅಡಿಗಲ್ಲು ಭದ್ರಪಡಿಸಿದರು. ಚಿಗುರು ಮೀಸೆ ವಯಸ್ಸಿನಲ್ಲಿ ಗಾಂಧಿ ಕಲಿಯಲಿಕ್ಕಾಗಿ ಇಂಗ್ಗೆಂಡ್‍ಗೆ ಹೋದರೆ, ಧೀರೂ ಸಂಪಾದಿಸಲಿಕ್ಕಾಗಿ ಯೆಮೆನ್‍ಗೆ ಹೋದರು. ಅವರವರ ಕ್ಷೇತ್ರದಲ್ಲಿ ಇಬ್ಬರಿಗೂ ಬೆಳಕು ಕಾಣಿಸಿದ್ದು ವಿದೇಶಗಳಲ್ಲೇ. ಗಾಂಧಿ ಹಾಗೂ ಧೀರೂ ಅವರನ್ನು ಒಟ್ಟಿಗೆ ನೆನಪಿಸಿಕೊಳ್ಳಲಿಕ್ಕೆ ಈ ಸಾದೃಶ್ಯಗಳು ನೆಪ ಮಾತ್ರ. ಗಾಂಧಿಯಂತೆಯೇ ಧೀರೂ ಕೂಡ ದೇಶದ ನಾಯಕರ ಪಟ್ಟಿಯಲ್ಲಿ ಮುಖ್ಯರಾಗುತ್ತಾರೆ (ಸ್ಥಾನ ಬದಲಾಗಬಹುದು) ಎನ್ನುವುದನ್ನು ಒತ್ತಿ ಹೇಳುವುದು ಈ ಹೋಲಿಕೆಯ ಮುಖ್ಯ ಉದ್ದೇಶ.
ಧೀರೂಭಾಯಿ ಹೀರ್‌ಚಂದ್ ಅಂಬಾನಿ (ಜನನ: ಡಿ. ೨೮, ೧೯೩೨, ಮರಣ: ಜುಲೈ ೬, ೨೦೦೨) ಚಿನ್ನದ ಚಮಚೆ ಬಾಯಿಗಿಟ್ಟುಕೊಂಡು ಕಣ್ಣುಬಿಟ್ಟವರಲ್ಲ. ಶಾಲಾ ಶಿಕ್ಷಕರ ಮಗನಾಗಿ ಹುಟ್ಟಿದ ಅವರಿಗೆ ಬಂಡವಾಳವಾಗಿ ಜೊತೆಯಲ್ಲಿದ್ದುದು ಕಣ್ಣುಗಳಲ್ಲಿನ ಕನಸು, ಮೈಯಲ್ಲಿನ ದುಡಿಯುವ ಕಸುವು ಹಾಗೂ ಬೆಳೆಯುವ ಬಕಾಸುರ ಹಸಿವು. ಈ ಹಸಿವಿನೊಂದಿಗೆ ೧೬ ವರ್ಷದವನಿದ್ದಾಗ ಯಮೆನ್‍ಗೆ ಹೋಗಿ ಅಲ್ಲಿನ ಪೆಟ್ರೋಲ್ ಬಂಕೊಂದರಲ್ಲಿ ಸಹಾಯಕನಾಗಿ ಸೇರಿಕೊಂಡರು. ನಂತರದಲ್ಲಿ ಅಡೆನ್ನಲ್ಲಿನ ‘ಎ.ಬೆಸ್ಸೆ ಅಂಡ್ಡ್ ಕಂಪನಿ’ (A.Besse & Co.)ಯಲ್ಲಿ ರವಾನೆ ಗುಮಾಸ್ತನ ಕೆಲಸ ದೊರೆಯಿತು. ಎರಡು ವರ್ಷಗಳಲ್ಲಿ ‘ಶೆಲ್’ ಉತ್ತನ್ನಗಳ ವಿತರಕರಾಗಿ ಕಂಪನಿ ರೂಪುಗೊಂಡಾಗ ಕಂಪನಿಯಲ್ಲಿ ಬಂದರಿನಲ್ಲಿ ತೈಲ ತುಂಬುವ ಘಟಕದ ಉಸ್ತುವಾರಿ ಹೆಗಲೇರಿತು. ಧೀರೂನಿಗೆ ತೈಲದ ರುಚಿ ಹತ್ತಿದ್ದೇ ಆಗ.
೧೯೫೦ರಲ್ಲಿ ಯಮೆನ್‌ನ ಆಡಳಿತಕ್ಕೆ ತನ್ನ ಮುಖ್ಯ ಕರೆನ್ಸಿಯಾದ ‘ರೈಯಲ್’ ಕಣ್ಮರೆಯಾಗುತ್ತಿರುವುದು ಗಮನಕ್ಕೆ ಬಂತು. ಪ್ರಕರಣದ ಜಾಡು ಹಿಡಿದ ಸರ್ಕಾರಕ್ಕೆ- ಇಪ್ಪತ್ತರ ಹೊಸಿತಿಲ ಯುವಕನೊಬ್ಬ ‘ರೈಯಲ್’ಗಳನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿದ್ದು ಗಮನಕ್ಕೆ ಬಂತು. ಅಷ್ಟೂ ನಾಣ್ಯಗಳು ಆಡೆನ್ನ ಬಂದರಿನ ಮೂಲಕ ಲಂಡನ್ನ ವಣಿಕ ಪೇಟೆ ತಲುಪಿದ್ದವು. ಹದಿನಾರಾಣೆ ಬೆಳ್ಳಿ ಹೊಂದಿದ್ದ ‘ರೈಯಲ್’ ಗಳಿಗೆ ಅಲ್ಲಿ ಅಪಾರ ಬೇಡಿಕೆಯಿತ್ತು. ಈ ಲೆಕ್ಕಾಚಾರ ಕಂಡುಕೊಂಡವನು ಯುವಕ ಧೀರೂಭಾಯಿ. ಮೂರೇ ತಿಂಗಳಲ್ಲಿ ಆತ ಕೆಲವು ಲಕ್ಷ ರೂಪಾಯಿ ಸಂಪಾದಿಸಿದ್ದ ಅದಾದ ೧೦ ವರ್ಷಗಳಿಗೆ ಭಾರತದಲ್ಲಿ ‘ರಿಲಯನ್ಸ್ ಕಮರ್ಷಿಯಲ್ ಕಾರ್ಪೋರೇಷನ್’ ಮೂಲಕ ಧೀರೂ ತನ್ನ ವಹಿವಾಟಿಗೆ ಮುನ್ನುಡಿ ಬರೆದ; ಕೇವಲ ೧೫ ಸಾವಿರ ರೂಪಾಯಿ ಮೂಲಧನದೊಂದಿಗೆ. ಪಾಲಿಸ್ಟರ್ ನೂಲಿನ ಅಮದು ಹಾಗೂ ಮಸಾಲೆ ಪದಾರ್ಥಗಳ ರಫ್ತು ಕಂಪನಿಯ ಪ್ರಮುಖ ಚಟುವಟಿಕೆಯಾಗಿತ್ತು. ೩೫೦ ಚದರ ಅಡಿ ವಿಸ್ತೀರ್ಣದ ರಿಲಯನ್ಸ್‍ನ ಮೊದಲ ಕಛೇರಿ ಮುಂಬಯಿಯ ಮಸ್ಜೀದ್ ಬಂದರ್‍ನ ನರಸಿನಾಥನ್ ಸ್ಟ್ರೀಟ್ನಲ್ಲಿ ಆರಂಭವಾದಾದ ಅಲ್ಲಿದುದು ಒಂದು ಟೇಬಲ್, ಮೂರು ಕುರ್ಚಿ ಹಾಗೂ ಒಂದು ಫೋನ್ ಮಾತ್ರ. ಈ ವ್ಯವಹಾರದಲ್ಲಿ ಧೀರೂಭಾಯಿಗೆ ಆತನ ಸೋದರ ಸಂಬಂಧಿ ಚಂಬಕ್‌ಲಾಲ್ ಪಾಲುದಾರನಾಗಿದ್ದ. ಆತ ೧೯೬೫ ರಲ್ಲಿ ಪಾಲುದಾರಿಕೆಯನ್ನು ವಾಪಸ್ ಪಡೆದ. ಚಂಬಕ್ ಬುದ್ದಿವಂತ; ಆದರೆ ಜಿಗುಟು ಮನೋಭಾವದವ. ಆತ ಪಾಲುದಾರಿಕೆ ಹಿಂತೆಗದುಕೊಂಡಿದ್ದರಿಂದ ಧೀರೂ ಸಾಹಸೀ ಮನೋಭಾವಕ್ಕೆ ಇದ್ದ ಏಕೈಕ ಅಡೆತಡೆಯೂ ನಿವಾರಣೆಯಾಗಿ ಆತ ದ್ಯೆತ್ಯರೂಪಿಯಾಗಿ ಬೆಳೆಯಲು ಅವಕಾಶ ದೊರೆಯಿತು.
ಅಹಮದಾಬಾದ್ ಸಮೀಪದ ನರೋದದಲ್ಲಿ ಮೊದಲ ಜವಳಿ ಗಿರಣಿ (೧೯೬೬ರಲ್ಲಿ) ತೆರೆಯುವ ಮೂಲಕ ಧೀರೂ ಟೆಕ್ಸ್‌ಟೈಲ್ಸ್ ಕ್ಷೇತ್ರದೊಂದಿಗೆ ನಂಟು ಆರಂಭಿಸಿದರು- ನಂತರದ್ದು ನಾಗಾಲೋಟದ ಅಡೆತಡೆ ರಹಿತ ಹೆದ್ದಾರಿ. ರಿಲಯನ್ಸ್ ಸಮೂಹದ ‘ವಿಮಲ್’ ಬ್ರಾಂಡ್ ಜವಳಿ ಕ್ಷೇತ್ರದ ಪ್ರತಿಷ್ಠೆಯಾಗಿ ಬೆಳೆಯಿತು. ೧೯೭೫ರಲ್ಲಿ ರಿಲಯನ್ಸ್ ಟೆಕ್ಸ್‌ಟೈಲ್ಸ್‌ನ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದ ವಿತ್ವಬ್ಯಾಂಕ್ ತಂತ್ರಜ್ಞರ ತಂಡ- ‘ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಉತ್ತನ್ನಗಳಿಗಿಂತಲೂ ಉತೃಷ್ಟ ಹಾಗೂ ಅಪರೂಪದ ಗುಣಮಟ್ಟವನ್ನು ರಿಲಯನ್ಸ್ ಸಾಧಿಸಿದೆ’ ಎಂದು ಶಹಭಾಸ್‍ಗಿರಿ ನೀಡಿತು.
ಡೆಡ್‍ಲೈನ್‍ಗಳನ್ನು ಸಾಧಿಸುವುದರಲ್ಲಿ ಧೀರೂನಿಗೆ ನಂಬಿಕೆಯಿರಲಿಲ್ಲ. ಡೆಡ್‍ಲೈನ್‍ಗಳನ್ನು ಮೀರುವುದರಲ್ಲಿ ಅವರ ಖುಶಿಯಿತ್ತು. ರಿಲಯನ್ಸ್ ಯಶಸ್ಸಿನ ಹಿಂದೆ ಕೆಲಸ ಮಾಡಿರುವುದು ಇದೇ ಮಂತ್ರ.
ಟೆಕ್ಸ್‌ಟೈಲ್ಸ್ ಕ್ಷೇತ್ರ ಧೀರೂಭಾಯಿ ಏರಿದ ಯಶಸ್ಸಿನ ಸೋಪಾನದ ಒಂದು ಮೆಟ್ಟಿಲು ಮಾತ್ರ. ಅದರ ಮಹತ್ವಾಕಾಂಕ್ಷೆಗೆ ಹತ್ತಾರು ಕವಲು, ಪೆಟ್ರೋಕೆಮಿಕಲ್ಸ್, ಟೆಲಿಕಮ್ಯುನಿಕೇಷನ್ಸ್ ಮಾಹಿತಿ ತಂತ್ರಜ್ಞಾನ, ಇಂಧನ, ವಿದ್ಯುಚ್ಛಕ್ತಿ, ಮೂಲಭೂತ ಸೌಕರ್ಯಗಳು- ಹೀಗೆ ರಿಲಯನ್ಸ್ ಸಾಮ್ರಾಜ್ಯ ವಿಸ್ತರಿಸಿದ ಗರಿಮೆ ಅವರದು. ‘೧೨ ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ನಡೆಸುವ ವಾಣಿಜ್ಯೋದ್ಯಮ ಕ್ಷೇತ್ರದ ಸಾಮ್ರಾಟ’ ಎಂದೊಮ್ಮೆ ‘ಬಿಬಿಸಿ’ಯಿಂದ ಬಣ್ಣನೆಗೊಳಗಾದ ಅಗ್ಗಳಿಕೆ ರಿಲಯನ್ಸ್‍ಗೆ ಸಲ್ಲುತ್ತದೆ- ಇಷ್ಟೇ ಅಲ್ಲ ಮೈದಾನಗಳಲ್ಲಿ ವಾರ್ಷಿಕ ಸರ್ವ ಸಮಿತಿ ಸದಸ್ಯರ ಸಭೆ ಏರ್ಪಡಿಸಿದ ಮೊದಲ ಸಾರ್ವಜನಿಕ ಸಂಸ್ಥೆ ರಿಲಯನ್ಸ್ ೧೯೮೬ ರಲ್ಲಿ ಮುಂಬಯಿಯ ಕ್ರಾಸ್ ಮೈದಾನದಲ್ಲಿ ನಡೆದ ಸಛೆಯಲ್ಲಿ ‘ರಿಲಯನ್ಸ್ ಇಂಡಸ್ಟ್ರೀಸ್’ನ ಮೂವತ್ತು ಸಾವಿರಕ್ಕೂ ಹೆಚ್ಚು ಷೇರುದಾರರು ಭಾಗವಹಿಸಿದ್ದರು.
ನಮ್ಮ ಆಕಾಂಕ್ಷೆಗಳು ದೊಡ್ಡವಾಗಿರಬೇಕು. ಆಳವಿರಬೇಕು. ಪ್ರಯತ್ನ ಬಲವುಳ್ಳದ್ದಾಗಿರಬೇಕು- ಇದು ರಿಲಯನ್ಸ್ ಹಾಗೂ ಭಾರತದ ಬಗ್ಗೆ ಧೀರೂಭಾಯಿ ಕಂಡ ಕನಸು. ‘ನಾವು ಜನರ ಮೇಲೆ ಬೆಟ್ ಕಟ್ಟುತ್ತೇವೆ ಎಂದು ಹೇಳುತ್ತಿದ್ದ ಅವರು ಮುಂಬೈ ಷೇರುಪೇಟೆಯನ್ನು ಹಿಡಿತಕ್ಕೆ ತೆಗೆದುಕೊಂಡದ್ದೊಂದು ದಂತಕಥೆಯಂಥ ಕಥೆ. ಇಷ್ಟಂತೂ ನಿಜ; ರಿಲಯನ್ಸ್ ಮೇಲೆ ಹಣ ಹೂಡಿದ ಯಾರೂ ಪಶ್ಚಾತ್ತಾಪ ಪಟ್ಟಿದ್ದಿಲ್ಲ.
ದೀರೂಗಾಥೆ ಬೆಳೆದಂತೆ ಅವರ ಖಾತೆಯಲ್ಲಿನ ಪ್ರಶಸ್ತಿ-ಗೌರವಗಳ ಸಂಖ್ಯೆಯೂ ಹೆಚ್ಚಿತು. ‘ಶತಮಾನದ ವ್ಯಕ್ತಿ’ ಎಂದು ಚೆಂಟೆಕ್ ಫೌಂಡೇಶನ್ ಅಂಡ್ ಕೆಮಿಕಲ್ ಎಂಜಿನಿಯರಿಂಗ್ ವರ್ಲ್ಡ್ ಗೌರವಿಸಿದರೆ, ಏಷ್ಯಾದ ಬಲಿಷ್ಠ ೫೦ ವ್ಯಕ್ತಿಗಳಲ್ಲೊಬ್ಬರು ಎಂದು ಏಷ್ಯಾವೀಕ್ ನಿಯತಕಾಲಿಕೆ ಪಟ್ಟಿಮಾಡಿತು. ಎಕನಾಮಿಕ್ ಟೈಮ್ಸ್‌ನಿಂದ ಜೀವಮಾನ ಸಾಧನೆ ಗೌರವವೂ ದೊರೆಯಿತು.
ಎಷ್ಟೆಲ್ಲ ಎತ್ತರಕ್ಕೆ ಬೆಳೆದಂತೆ ಧೀರೂಭಾಯಿ ಬಗ್ಗೆ ಟೀಕೆಗಳೂ ಬೆಳೆದವು. ದುಬೈನ ಪೆಟ್ರೋಲ್ ಪಂಪ್‍ನಲ್ಲಿ ಸಾಮಾನ್ಯ ನೌಕರನಾಗಿದ್ದಾಗಲೇ ಧೀರೂ ನಡವಳಿಕೆಯಲ್ಲಿ ಕೆಲವು ಅನೈತಿಕ ಎಳೆಗಳಿದ್ದವು ಎಂದು ಆತನ ಜೀವನ ಚರಿತ್ರೆ ಬರೆದಿರುವ ಲೇಖಕ ಅಭಿಪ್ರಾಯಪಟ್ಟಿದ್ದಾನೆ (ಕೆಲ ವರ್ಷಗಳ ಕಾಲ “Far Eastern Economic Review” ದೆಹಲಿ ಬ್ಯೂರೋದ ಮುಖ್ಯಸ್ಥರಾಗಿದ್ದ ಹಮೀಶ್ ಮೆಕ್‍ಡೋನಾಲ್ಡ್ ೧೯೯೮ ರಲ್ಲಿ ಅಂಬಾನಿಯ ಅನಧಿಕೃತ ಜೀವನಚರಿತ್ರೆ ಪ್ರಕಟಿಸಿದ್ದರು. ಈ ಜೀವನ ಚರಿತ್ರೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅಂಬಾನಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ್ದರು. ಭಾರತದಲ್ಲಿಈ ಕೃತಿಗೆ ನಿಷೇಧ ಹೇರಲಾಗಿತ್ತು). ವಿ.ಪಿ. ಸಿಂಗ್ ಸರ್ಕಾರ ಹಾಗೂ ನಂತರದ ಬಿಜೆಪಿ ಆಡಳಿತದಲ್ಲಿ ಧೀರೂಭಾಯಿಗೆ ಸಂಪರ್ಕಗಳಿದ್ದವು. ತನ್ನ ಅನುಕೂಲಕ್ಕಾಗಿ ಸರ್ಕಾರಿ ನೀತಿಗಳನ್ನು ತಿರುಚುತ್ತಿದ್ದ ಧೀರೂ ಯಶಸ್ಸಿಗಾಗಿ ಅಡ್ಡದಾರಿ ಹಿಡಿದರು; ಚುನಾವಣೆಗಳಲ್ಲಿ ಕಿಂಗ್‍ಮೇಕರ್ ಪಾತ್ರ ವಹಿಸುತ್ತಿದ್ದರು; ಮಾಧ್ಯಮಗಳ ಮೇಲೆ ಕೂಡ ಪ್ರಭಾವ ಬೀರುತ್ತಿದ್ದರು- ಇವು ಧೀರೂ ಅವರೆ ಮೇಲಿನ ಕೆಲವು ಟೀಕೆ-ಟಿಪ್ಪಣಿ.
ಧೀರೂಭಾಯಿ ಹಾಗೂ ಕೋಕಿಲಾಬೆನ್ ದಂಪತಿಗಳಿಗೆ ನಾಲ್ವರು ಮಕ್ಕಳು: ಕೀರ್ತಗಿಬ್ಬರು; ಆರತಿಗಿಬ್ಬರು. ಮುಖೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಕೂಡ ಅಪ್ಪನ ಹಾದಿಯಲ್ಲಿಯೇ ‘ರಿಲಯನ್ಸ್’ ಯಶಸ್ಸಿನ ಹಾದಿ ವಿಸ್ತರಿಸುತ್ತಿದ್ದಾರೆ. ಆದರೆ ಅಣ್ಣತಮ್ಮಂದಿರ ಹಾದಿ ಪ್ರತ್ಯೇಕವಾದುದು. ಇಬ್ಬರೂ ಜೊತೆಯಾಗಿ ನಡೆದಿದ್ದರೆ ರಿಲಯನ್ಸ್ ಕೋಟೆ ‘ಉಕ್ಕಿನ ದೊರೆ’ ಲಕ್ಷ್ಮೀ ಮಿತ್ತಲ್ ಸಾಮ್ರಾಜ್ಯವನ್ನು ಮೀರುತ್ತಿತ್ತು ಎನ್ನುವ ಅಂದಾಜಿದೆ.
೨೦೨೦ ಕ್ಕೆ ಭಾರತವನ್ನು ಅಭಿವೃದ್ಧಿಹೊಂದಿದ ದೇಶವನ್ನಾಗಿ ರೂಪಿಸುವ ತಮ್ಮ ಕನಸನ್ನು ಮಾಜಿ ರಾಷ್ಟಪತಿ ಎಪಿಜೆ ಅಬ್ದುಲ್ ಕಲಾಂ ಹೋದಲ್ಲಿ ಬಂದಲ್ಲಿ ಅನೇಕ ಸಲ ತೋಡಿಕೊಂಡಿದ್ದಾರೆ. ಕಲಾಂ ಕನಸು ಸಾಕಾರಗೊಳ್ಳಬೇಕಾದರೆ ಆ ಹಾದಿಯಲ್ಲಿಕೆಚ್ಚೆದೆಯ ಸಾಧಕರ ಸಂತತಿ ಅಕ್ಷಯವಾಗಬೇಕಿದೆ. ಅಂಥ ಸಾಧನೆಗೆ ಧೀರೂಭಾಯಿ ಅಂಥವರ ನೆನಪು ಕೈಮರಗಳಂತೆ ಕಾಣುತ್ತವೆ.