ಈ ಚೌಕಾಂಬದಲಿ ನಿಂತು ಕೇಳುವೆನು ನಾನು
ಭಾಗ್ಯ ನಗರವೇ ನಿನ್ನೆ ಭಾಗ್ಯದ ಬಾಗಿಲೆಲ್ಲಿ?
ಇಷ್ಟೆತ್ತರದಿಂದ ಕಾಣಿಸುವುದೇನು-ಜನರು
ಇರುವೆಗಳಂತೆ, ಟ್ರಕ್ಕುಗಳು, ಬಸ್ಸುಗಳು
ಎತ್ತಿನಗಾಡಿಗಳು, ತಲೆಹೊರೆಯ ಮೂಟೆಗಳು
ಯಾರೋ ಆಡುತ್ತಿರುವ ಆಟಿಕೆಗಳಂತೆ
ಮನುಷ್ಯರ ಮಾತುಗಳು ಗೊಂದಲದಂತೆ
ಗಾರೆಯಲಿ ಬರೆದ ಈ ಹೆಸರುಗಳು
ಯಾರವೆಂದು ಹೇಳುವುದು ಹೇಗೆ ?
ಚರಿತ್ರೆಯಲ್ಲಿ ಬರೆದಂತೆ ಬರೆದಿದ್ದಾರೆ ಇಲ್ಲಿ
ಹೆಣ್ಣುಗಂಡುಗಳು ಪ್ರವಾಸಿಗಳು ಪ್ರಣಯಿಗಳು
ಈ ಸುತ್ತು ಮೆಟ್ಟಲುಗಳನೊಂದೊಂದೆ
ಏರಿ ಬಂದವರು ಕಿಂಡಿಗಳ ಬಳಿ ನಿಂತು
ಮೂಸಿ-ಗೊಲ್ಕೊಂಡ-ಫಲಕ್‌ನುಮಾದ
ಮೇಲಿಂದ ಬೀಸಿ ಬರುವ ಗಾಳಿಗೆ ತೆರೆದು
ಮಾಯಾ ಪಕ್ಷಿಗಳಂತೆ ಮಾಯವಾದವರು
ಏನ ಬಿಟ್ಟರು ಏನ ಕೊಂಡೊಯ್ದರು
ಮಾರ್ಗಗಳು ಹೊರಟು ಊರುಗಳ ಸೇರಿದುವು
ಮಿನಾರಗಳ ನೆರಳು ಬಿದ್ದು ಬೆಳೆದುವು
ಅವು ಕೋಟೆಕೊತ್ತಲಗಳ ರೂಪು ತಳೆದುವು
ಅದೊ ಬುರುಜು! ಅದೊ ಸೇನೆ! ಅದೊ
ತೋಫಖಾನೆ! ಅದೋ ಅಂತಃಪುರದಿ೦ದ
ಹೊರಟ ಮೇನೆ! ಜಾಗಟೆಯ ಧ್ವನಿಯೊ
ನಮಾಜಿನ ಕರೆಯೊ ಕಾಳಗದ ಕಹಳೆಯೊ
ಕಂಡರೂ ಕಾಣಿಸದು ಕೇಳಿದರೂ ಕೇಳಿಸದು
ಸಂಜೆಯ ಮಬ್ಬಿನಲಿ ನನ್ನ ಜತೆ ಯಾರಿಲ್ಲ
ನನ್ನ ಹೊರತು ಯಾರೂ ಇರದಲ್ಲಿ? ಆಹ್!
ಯಾರ ಭಾಗದ ಭಾಗ್ಯ! ಭಾಗ್ಯಮತಿಯೇ
ಇನ್ನೂ ಇಲ್ಲೇಕೆ ಕುಳಿತಿರುವೆ ನೀನು?
ನಾಟ್ಯ ಮುಗಿಯಿತು, ದರಬಾರು ಮುಗಿಯಿತು
ಸುಲ್ತಾನನೂ ಹೊರಟು ಹೋದನು ಅರಮನೆಗೆ
ನಗರದ ದೀಪಗಳು ಒಂದೊಂದೆ ಆರಿಹೋಗಿವೆ
ಕತ್ತಲು ಬಂದು ಮಿನಾರಗಳನ್ನು ಮುತ್ತಿವೆ
ತಿಂಗಳಿನ್ನೂ ಮೂಡಿರದ ಹೊತ್ತು ಹೊಳೆಯುವುದು
ಮಾತ್ರ ನನ್ನ ಮೂಗಿನ ನತ್ತು ಬೆಳ್ಳಿ ನಕ್ಷತ್ರ –
ದಂತೆ ನರ್ತಿಸಿ ಆಯಾಸಗೊಂಡವಳೆ ನನ್ನ
ಕಲ್ಪನೆಯಲ್ಲಿ ಬಂದು ಇಡಿಯಾಗಿ ನಿಲ್ಲು
ನಿನ್ನ ಪ್ರೀತಿಯ ಬೆಳಕ ಚೆಲ್ಲು
ನಿನ್ನ ಹೆಸರನೆ ಹೊತ್ತ ನಗರದ ಮೇಲೆ
*****