ಹೈದರ್‌ಗುಡದಲ್ಲೊಬ್ಬ
ಹೈದನಿದ್ದನು ನೋಡು
ಹಲವು ವರ್ಷಗಳ ಕಾಲ
ಮಾತಿಲ್ಲ ಕತೆಯಿಲ್ಲ
ಯಾರೇನ ಕೇಳಿದರು
ಮೌನವೇ ಉತ್ತರವು
ಕೊನೆಗೊಬ್ಬ ಬೈರಾಗಿ
ಆ ದಾರಿ ಬಂದವನು
ಕೊಟ್ಟನು ಹಿಡಿ ರಾಗಿ
ಏನಾಶ್ಚರ್ಯ!
ಬಾಲಕನು ಒಮ್ಮೆಲೇ
ಮಾತಾಡತೊಡಗಿದನು
ಏನು ವ್ಯಾಕರಣ ಶುದ್ಧಿ
ಒಂದು ದಿನದೊಳಗೆ
ಎಂಥ ಭಾಷಾ ಸಿದ್ಧಿ!
ಜನರೆಂದರು-ಅಲ್ಲಾನ ದಯೆ
ಅದು ಬೈರಾಗಿಯಾಗುವುದು
ರಾಗಿಯೂ ಆಗುವುದು
ಕ್ರಮೇಣ ಎಲ್ಲರೂ
ಬೈರಾಗಿಯನು ಮರೆತರು
ರಾಗಿಯನೂ ಮರೆತರು
ಹೈದರ್‌ಗುಡದೊಳಗೆ ಈಗ
ಹೈದನೂ ಕಾಣಿಸನು
ಅವನ ಮಾತೂ ಕೇಳಿಸದು
ಎಲ್ಲಿ ಹೋದನು ಅವನು
ವಾಕ್ಯಗಳ ಮಾಡುತಿದ್ದವನು
ಸಿಕಂದರಾಬಾದಿನಲಿ
ಮೂಟೆಗಳ ಹೊರುವನು
ಪ್ರತಿಯೊಂದು ಗಾಡಿಯನು
ಕಾಯುತ್ತ ಇರುವನು
*****