ಮೇಲೇರಬೇಕು ಮುಟ್ಟಬೇಕಿದೆ
ಗುರಿಯ
ಮತ್ತೆ ನಿಲುಕಂತಿದೆ ಎತ್ತರದಿ
ಏರಲೇಬೇಕು ಏಣಿ
ಏಣಿಗೆ ಹತ್ತಿರಕೆ ಬಂದವರ
ಎತ್ತರಕೆ ಏರಿಸುವುದೆಂದರೆ
ಏನೋ ಉಮೇದು
ಧೂಳಿನ ರಾಡಿ ಗಲೀಜುಗಳ
ಸಹಿಸಿಕೊಳ್ಳುತ್ತದೆ ಕ್ರೋಧಗೊಳ್ಳದೆ
ಮುಗ್ಧತೆಯ ಕಣ್ಣುಗಳ
ಅರ್ಥೈಸಿಕೊಂಡು
ಗದರದೇ ಮಜಲುಗಳ ಏರಲು
ಹಂತಹಂತವಾಗಿ ಮೆಟ್ಟಿಲುಗಳ
ಅಂತರವ ತೋರಿಸಿಕೊಡುತ್ತದೆ
ಹೆಜ್ಜೆಗಳಿಗೆ ಜತನದಿ
ಮತ್ತೆ ಏರುವ ಕಾಲುಗಳಲ್ಲಿ
ಎಷ್ಟೊಂದು ವೈವಿಧ್ಯ
ಕೆಲವಕ್ಕೆ ಹುಮ್ಮಸ್ಸು,
ಕೆಲವಕ್ಕೆ ಧಾವಂತ
ಕೆಲವಕ್ಕೆ ಅನಿವಾರ್ಯ
ಏರಿದವರ ದಿಟ್ಟ ಹೆಜ್ಜೆ ಗುರುತುಗಳು
ಮೂಡಿ ಬಂದರೆ
ಏಣಿಯ ಆನಂದ ಪರಮ ಪಾವನ
ದಿಗಿಲುಗೊಳ್ಳದೆ
ಏರಿದವನಿಗಷ್ಟೇ ಗೊತ್ತು
ಏಣಿಯ ತ್ಯಾಗ ಮತ್ತು
ಏರುವ ಕಸರತ್ತು
ಯಾಮಾರಿದರೆ
ಏಣಿಯ ತ್ಯಾಗ ಏರುಗನ ಕಸರತ್ತು
ನೆಲಪಾಲು, ಅದಕ್ಕೆ ಅಡಿಗಡಿಗೆ
ಸೋಪಾನ ಜೋಪಾನ
ಏಣಿಯಾಗಲೇ ಬೇಕು
ಒಬ್ಬರು ಇನ್ನೊಬ್ಬರಿಗೆ
ಏಣಿಯೇರಲೇಬೇಕು
ಗುರಿ ಹೊಂದಲು
ಗುರಿ ಏರಿದ ಕಾಲುಗಳ
ಉನ್ನತಿಯ ಕಂಡು ದೂರದಿ ನಿಂತು
ಮನ ಪೂರ್ತಿ ಹರಸುವವರು
ಮಾನ್ಯತೆಯ ಪಡೆದು
ಮಾನ್ಯ ಆಗುವರು.
*****