ಇನಿತೊಂದು ವಾಸನೆಯ ನಿನಗಾರು ಇತ್ತರು ?
ನಿನ್ನ ಕಂಡವರೆಲ್ಲರ ಕೆಳೆಬೆಳೆಸಿ ಸೆಳೆಯಲು
ನಿನ್ನಯಾ ಮುಡಿಬಯಸುತಿರಲಿನಿಯರು
ಉನ್ನತದಲಿಹ ಮೃಡ ಬಿಡದೆ ಕೊಂಡೊಯ್ವನು
ನಿನ್ನಯಾ ಗಮಗಮಿಸುವಾ ಸೊಗಸನೀವ-
ಸುತ್ತು ತುಂಬುತಿಹ ಪರಿಮಳವು
ಅನಿಲನಾ ಒಡನೆ ಸುಳಿಸುಳಿದು ಬರುವಾಗ
ಎನ್ನನ್ನು ಮರೆಸಿತ್ತು; ನಲವಿನಲಿ ನಿಲಿಸಿತ್ತು
ನಿನ್ನ ಯಾಡಂಬರಕೆ ಮರುಳಾಯಿತೋ ಮನವು
ನಾನೇನು ನರನಹುದು! ನಿನಗಿದೇನು ?
ಆ ನೀಲಧರನೇ ನಿನಗಾಗಿ ಕರೆವಾಗ
ನಿನ್ನ ಬಲು ಜಂಭ ಹರನ ತಲೆಯೊಳಾಯ್ತು
ನಾನೇಕೆ; ಹರನೇಕೆ; ಅನ್ಯರಿನ್ನೇಕೆ ?
ಕಾನನದ ಸರ್ಪಗಳೂ ನಿನಗೆರಗಬೇಕೆ ?
ನಿನ್ನನ್ನು ಅರಸರಸಿ ಓಡಿಬರಬೇಕೆ ?
ನಿನ್ನಲ್ಲಿಯೇ ಸರ್ಪ ಬೀಡು ಬಿಡಬೇಕೆ ?
ಸತ್ವರೂ ಅಲ್ಲದೇ ರಜ ತಮಸರು
ತತ್ವಬಲ್ಲಾ ತಾತ್ವಿಕರು, ಯತಿವರರು
ತತ್ತರಿಪ ಕಾಮಿಗಳು, ನರಹರರು
ಮುತ್ತಿಹರು; ತಮ್ಮನ್ನು ಮರೆತಿಹರು
ಪಾರಿಜಾತವೆಂದು ತಾ ನಿನ್ನ ಹೆಸರೇ ?
ಪರಿಪರಿಯ ಪರಿಮಳ ನಿನ್ನ ಉಸಿರೇ ?
ಸುರನರಪಾಮರರು ನಿನ್ನ ಬಲೆಯಲಿಹರೇ?
ಪರಿಮಳದ ಆಗರವು ನೀ ಪಾರಿಜಾತೇ ?
*****