ಈ ಭೂಮಿಯ ಆವರಣದಲಿ
ನನ್ನ ನಿನ್ನ ಪಾದದ ಗುರುತುಗಳು
ದಾಖಲಾಗುವುದಿಲ್ಲ ಯಾವುದೂ
ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ
ಬದುಕು ಚಲಿಸುತ್ತದೆ ಬೇರೆಯವರ
ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ.
ದಾರಿ ಯಾವುದೆಂದು ಯಾರೂ
ತಿಳಿದಿರುವದಿಲ್ಲ ಮತ್ತೆ ಒಂದು ಹಾದಿಯ
ಮೇಲೆ ಕನಸಗುಳ ಮೆರವಣಿಗೆ
ಹೋಗುತ್ತದೆ ಅದರಲ್ಲಿ ಎಲ್ಲರೂ
ಪಾಲುದಾರರಾಗುವುದಿಲ್ಲ ಯಾಕೆಂದರೆ
ಮೌನ ಚಿಗುರು ಭಾಷೆ ಅವರಿವರ ಭಾವಗಳು.
ಕೆಲವೆಂದು ಒಪ್ಪಿಕೊಂಡು ಅವರಿವರು
ಬಿಸಿಲು ಬೆಳದಿಂಗಳಲ್ಲಿ ನಡುಗೆ ಶುರುವಿಟ್ಟಿಕೊಂಡಿದ್ದಾರೆ.
ಹೊಸ ಪ್ರಭೆ ಹೊಸ ರೂಪಗಳ ರೂಹುಗಳ ಹುಡುಕಾಟ
ಒಂದೊಂದು ಸಂತೆಯಲಿ ಒಂದೊಂದು ವ್ಯಾಪಾರ
ಸಂತನಾಗುವ ತವಕ ಸೂರ್ಯೋದಯದಿಂದ
ಹುಟ್ಟಿದ ಆಶೆ ಸೂರ್ಯಾಸ್ತದವರೆಗೆ ವಿಸ್ತರಣೆ.
ಅತ್ತ ಸರಿದ ಇತ್ತ ಮಿಡಿದ ಭಾವಗಳ
ಚಿಮ್ಮಿಸುವ ಲೋಕದ ಡೊಂಕು ಎಲ್ಲ
ತೇಲಿಬಿಟ್ಟ ದೋಣಿಗೆ ದಡಸೇರುವ ಆಶೆ
ಸೂರ್ಯ ಮಾತ್ರ ಸುಡಲಾರ ಭೂಮಿಯ
ಭೂಮಿ ಮಾತ್ರ ಸುತ್ತತ್ತದೆ ಸೂರ್ಯನನ್ನು
ಈ ಸಂಬಂಧದ ಪರಿಗೆ ನಾವು ಅಚ್ಚರಿಗೊಳ್ಳಬೇಕಾಗಿದೆ.
*****