ಯಕ್ಷಗಾನದ ನೃತ್ಯ ಮತ್ತು ಮಾತು

5.1 ಯಕ್ಷಗಾನದ ತಾಳಗಳು ಮತ್ತು ಹೆಜ್ಜೆಗಳು

ದೃಶ್ಯ ಕಾವ್ಯವಾದ ಯಕ್ಷಗಾನದಲ್ಲಿ ಆಂಗಿಕ ಮತ್ತು ವಾಚಿಕ ಎರಡೂ ಮುಖ್ಯ ವಾಗುತ್ತವೆ. ಆಂಗಿಕವೆಂದರೆ ಅಂಗಗಳಿಂದ ರಸಾಭಿವ್ಯಕ್ತಿ ಎಂದರ್ಥ. ಅದರಲ್ಲಿ ನೃತ್ಯ ಮತ್ತು ಅಭಿನಯ ಎರಡೂ ಸೇರಿರುತ್ತದೆ. ವಾಚಿಕವೆಂದರೆ ಹಾಡು ಮತ್ತು ಮಾತು. ಯಕ್ಷಗಾನವು ಆಂಗಿಕ ಮತ್ತು ವಾಚಿಕಗಳ ಸಮನ್ವಯದ ಒಂದು ದೃಶ್ಯ ಕಾವ್ಯವಾಗಿದೆ.

ನೃತ್ಯಕ್ಕೆ ತಾಳ ಮತ್ತು ಹೆಜ್ಜೆಗಳು ಆಧಾರವಾಗಿರುವುದರಿಂದ ಯಕ್ಷಗಾನ ಕಲಾವಿದ ನಾಗುವವನು ಮೊದಲು ತಾಳ ಮತ್ತು ಹೆಜ್ಜೆಗಳನ್ನು ಕಲಿಯಬೇಕು.

ನೃತ್ಯಗತಿಗೆ ತಾಳ ಆಧಾರವಾಗಿರುತ್ತದೆ. ತಾಳ ಎಂದರೆ ‘ಹಾಡುವಿಕೆಯ ಕಾಲವನ್ನು ವಿಶಿಷ್ಟವಾದ ಅವಧಿ, ಅಳತೆ ಮತ್ತು ಅದರ ಒಳ ವಿಭಜನೆಯೊಂದಿಗೆ ಮಾತ್ರ ಕಾಲದ ನೆಲೆಯಲ್ಲಿ ಅಳೆಯುವ ಕ್ರಿಯಾಮಾನ’ [ಪ್ರಭಾಕರ ಜೋಷಿತ ಯಕ್ಷಗಾನ ಪದಕೋಶ, 1994 ಪುಟ 82]

ತ ಕಾರಃ ಶಂಕರಃ ಪ್ರೋಕ್ತೋ| ಲ ಕಾರಃ ಪಾರ್ವತೀ ಸ್ಮೃತಾ|

ಶಿವಶಕ್ತಿ ಸಮಾಯೋಗಾ| ತ್ತಾಲ ಇತ್ಯಭಿಧೀಯತೇ

ಎಂದು ಶಿವತತ್ತ್ವ ರತ್ನಾಕರದಲ್ಲಿ ಹೇಳಲಾಗಿದೆ. ತಾಳದ ‘ತ’ಕಾರವು ಈಶ್ವರನನ್ನೂ ‘ಲ’ಕಾರವು ಪಾರ್ವತಿಯನ್ನೂ ಪ್ರತಿನಿಧಿಸುತ್ತವೆ. ಶಿವನು ನೃತ್ಯವನ್ನು ಪಾರ್ವತಿ ಲಾಸ್ಯವನ್ನು ಪ್ರತಿನಿಧಿಸು ವುದರಿಂದ ತಾಳವೆಂದರೆ ನೃತ್ಯ ಮತ್ತು ಲಾಸ್ಯಗಳ ಸಮಾಗಮವೆಂದು ತಿಳಿದುಕೊಳ್ಳಬಹುದು.

ಸಭಾಲಕ್ಷಣದಲ್ಲಿ ತಾಳಕ್ಕೆ ದೈವಿಕತೆಯನ್ನು ಆರೋಪಿಸಲಾಗಿದೆ.

‘ತಾಳಮೂಲೇ ಸ್ಥತೋ ಬ್ರಹ್ಮ| ತಾಳಮಧ್ಯೇ ಜನಾರ್ದನಃ||

ತಾಳಾ ಗ್ರೇ ಚ ಮಹಾರುದ್ರಃ | ಸದಾ ಮೂರ್ತಿ ತ್ರಯೋಷಿತಂ||

[ಗೋಪಾಲಕೃಷ್ಣ ಕುರುಪ್‌ಪೂರ್ವರಂಗ 1989 ಪುಟ 18]

ತಾಳದ ಮಹತ್ತ್ವವನ್ನು ಶಿವತತ್ತ್ವ ರತ್ನಾಕರ ಹೀಗೆ ಹೇಳುತ್ತದೆ .

ಗೀತಂ ವಾದ್ಯಂಚ ನೃತ್ತಂಚ| ಸರ್ವಂ ತಾಲೇ ಪ್ರತಿಷ್ಠಿತಂ||

ನ ತಾಲೇನ ವಿನಾ ಕಿಂಚಿತ್‌| ತಸ್ಮಾತ್‌ ತ್ತಾಲಸ್ಯ ಮುಖ್ಯತಾ||

ಗಾಯನ, ವಾದನ, ನರ್ತನ ಎಲ್ಲವೂ ತಾಳದಲ್ಲಿ ಪ್ರತಿಷ್ಠಾಪಿತವಾಗಿವೆ. ತಾಳವಿಲ್ಲದೆ ಯಾವುದೂ ಇಲ್ಲ.

ತಾಳಲಯ ಮತ್ತು ಛಂದಸ್ಸು ಒಂದನ್ನೊಂದು ಕೂಡಿಕೊಂಡೇ ಇರುತ್ತವೆ. ಅವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ‘ಛಂದಸ್ಸು ಮುಖ್ಯವಾಗಿ ಪದಕ್ಕೆ ಸಂಬಂಧಿಸಿದ ಮಾತ್ರಾಚ್ಛಂದಸ್ಸೇ ಆಗಿರುತ್ತದೆ. ಅದು ಮಾತ್ರಾ ಗಣಗಳಿಂದ ಕೂಡಿರುತ್ತದೆ. ತಾಳವೂ ಮಾತ್ರೆಗಳಿಂದ ಕೂಡಿದುದು. ಆದುದರಿಂದ ಇವೆರಡು ಪರಸ್ಪರ ಪೋಷಕಗಳು. ‘ತಾಲಃ ಕಾಲಕ್ರಿಯಾಮಾನಂ ಲಯಃ ಸಾಮ್ಯಂ’ ಎಂದು ಅಮರಕೋಶದ ನಾಟ್ಯವರ್ಗದಲ್ಲಿ ಹೇಳಿದೆ. ಪದವನ್ನು ಹಾಡುವಾಗ ಅದರ ಕಾಲಕ್ರಿಯೆಯನ್ನು ಅಳೆಯುವಂತಹದು ತಾಳ. ತಾಳಕ್ರಿಯೆಯ ಅಳತೆಗೆ ಒಳಪಡುವ ಗೀತವಾದ್ಯನೃತ್ಯಗಳ ಕಾಲ ಖಂಡದ ಅನ್ಯೋನ್ಯ ಸಮತೆಯೇ ಲಯ. ಆದುದರಿಂದ ತಾಳವನ್ನು ಬಿಟ್ಟು ಲಯವಿಲ್ಲ[ ಕೇಶವ ಭಟ್ಟ: ಯಕ್ಷಗಾನ ಕಲಾದರ್ಶನ. 2002 ಪುಟ 49]

ಸೇಡಿಯಾಪು ಕೃಷ್ಣಭಟ್ಟರ ಪ್ರಕಾರ ‘ಯಾವುದೊಂದು ರಚನೆಯ ಅವಯವಗಳೊಳಗೆ ಅನ್ಯೋನ್ಯ ಕಾಲಸಮತ್ವವಿಲ್ಲದಿದ್ದರೆ, ಅರ್ಥಾತ್‌ ಲಯವಿಲ್ಲದಿದ್ದರೆ, ಅಲ್ಲಿ ತಾಳವಿಲ್ಲ. ಸಮತಾಳಕ್ಕೆ ಒಳಪಡದಿರುವ ರಚನೆಗಳಲ್ಲಿ ಲಯವಿಲ್ಲ. ಆದುದರಿಂದ ಲಯಾನ್ವಿತವಾದ ಛಂದೋರಚನೆ ಎಂದರೂ ಅರ್ಥ ಬೇರಾಗುವಂತಿಲ್ಲ. [ ಛಂದೋಗತಿ, 1985, ಪುಟ 31]

ಸಭಾಲಕ್ಷಣದಲ್ಲಿ ನೀಡಲಾಗಿರುವ ಸಪ್ತ ತಾಳಗಳ ಹೆಸರು ಇಂತಿವೆ:

ಧ್ರುವೋ ಮಠ್ಯಂ ರೂಪಕಂ ಚ| ಝುಂಪಾ ತ್ರಿಪುಟ ಏವಚ||

ಆಟ ತಾಳೈಕ ತಾಳೇಚ| ಸಪ್ತತಾಳಾಃ ಪ್ರಕೀರ್ತಿ ತಾಃ ||

[ಪೂರ್ವರಂಗ.1989 ಪುಟ 18]

‘ಈ ಏಳುತಾಳಗಳಲ್ಲಿ ಧ್ರುವತಾಳದ ಬಳಕೆ ಯಕ್ಷಗಾನದಲ್ಲಿ ಕಂಡು ಬರುವುದಿಲ್ಲ. ಇವುಗಳಲ್ಲಿ ಮಠ್ಯವನ್ನು ಮಟ್ಟೆತಾಳ ಎನ್ನುತ್ತಾರೆ. ಆದಿತಾಳವನ್ನು ಆಟತಾಳ ಮತ್ತು ತ್ರಿವುಡೆಯನ್ನು ತ್ರಿಪುಟ ಎನ್ನುವುದು ರೂಢಿ.'[ ಯಕ್ಷಗಾನ ಕಲಾದರ್ಶನ, 2002 ಪುಟ 53]

ಯಕ್ಷಗಾನದಲ್ಲಿ ಬಳಕೆಯಾಗುವ ತಾಳಗಳು ಆದಿತಾಳ, ಚೌತಾಳ, ಉಡಾಫೆ ಮತ್ತು ತಿತ್ತಿತ್ತೈ ಕೋರೆ ತಾಳದ್ಢಿ ಝುಂಪೆ ಮತ್ತು ತ್ವರಿತ ಝುಂಪೆ, ಅಷ್ಟತಾಳ ಭೈರವಿ ಅಷ್ಟದ್ಭಿ ಏಕತಾಳ ಮಾರವಿ ಮತ್ತು ಭೈರವಿ ಏಕದಭಿ ತ್ರಿವುಡೆ ಮತ್ತು ತ್ವರಿತ ತ್ರಿವುಡೆ, ರೂಪಕ ಮತ್ತು ಮಟ್ಟೆ ತಾಳಗಳು. ಈ ತಾಳಗಳನ್ನು ಸ್ಥೂಲವಾಗಿ ವೀರಸದ ಮತ್ತು ಶಾಂತರಸದ ತಾಳಗಳೆಂದು ವಿಂಗಡಿಸಬಹುದು.

ಆದಿ ಮತ್ತು ಚೌತಾಳಗಳು ಯಕ್ಷಗಾನದ ವಿಶಿಷ್ಟ ತಾಳಗಳು. ಅವು ಪೂರ್ವರಂಗದಲ್ಲಿ ಬಳಕೆಯಾಗುತ್ತವೆ. ‘ಕಾಮಿನಿ ಕರೆದು ತಾರೆ’ಇದು ಆದಿತಾಳದಲ್ಲಿ ಮತ್ತು ‘ನೋಡಿ ನಾ ಸುಖಿಯಾದೆನು’ ಇದು ಚೌತಾಳದಲ್ಲಿ ಹಾಡಲಾಗುವ ಪೂರ್ವರಂಗದ ಪದಗಳು. ಇವುಗಳ ನಡೆ ಬಹಳ ಕಷ್ಟ. ಇವುಗಳಿಗೆ ಏಕತಾಳದಲ್ಲೇ ಬಿಡ್ತಿಗೆಮುಕ್ತಾಯಗಳಿವೆ. ಗುರು ಗೋಪಾಲಕೃಷ್ಣ ಕುರುಪರು ಆದಿತಾಳಚೌತಾಳಗಳಿಗೆ ಬಿಡ್ತಿಗೆ ಮತ್ತು ಮುಕ್ತಾಯಗಳನ್ನು ರಚಿಸಿ ಹೊಸದೊಂದು ಆವಿಷ್ಕಾರಕ್ಕೆ ಕಾರಣರಾಗಿದ್ದಾರೆ. [ಯಕ್ಷಗಾನ ತೆಂಕುತಿಟ್ಟಿನ ಮದ್ದಲೆ ವಾದನ ಕ್ರಮ, 1995] ಪ್ರಸಂಗ ಸಾಹಿತ್ಯದಲ್ಲಿ ಆದಿತಾಳಚೌತಾಳಗಳ ಬಳಕೆಯಿಲ್ಲದಿದ್ದರೂ ಪಾರ್ತಿ ಸುಬ್ಬನ ಪಂಚವಟಿ ಪ್ರಸಂಗದಲ್ಲಿರಾಘವ ನರಪತೆ ಶೃಣು ಮಮ ವಚನಂ ಎಂಬ ಪದ್ಯ ಆದಿತಾಳದಲ್ಲಿದೆ. ಇದರ ಎರಡು ಚರಣಗಳನ್ನು ಆದಿತಾಳದಲ್ಲಿ ಹಾಡಿ ಆ ಬಳಿಕ ಏಕತಾಳಕ್ಕೆ ಪರಿವರ್ತಿಸುವುದು ಸುಲಭಶೀಲತೆಯ ರೂಢಿಯಾಗಿದೆ.

ಯಕ್ಷಗಾನದ ತಾಳದ ವಿವರಗಳನ್ನು ಕೋಷ್ಟಕ 5.1 ತೋರಿಸುತ್ತದೆ.

ಕೋಷ್ಟಕ 5.1. ಯಕ್ಷಗಾನಳದ ತಾಳದ ವಿವರಗಳು

ತಾಳದ ಹೆಸರು ತಾಳದ ಪೆಟ್ಟುಗಳು ಬಾಯಿತಾಳ

ಆದಿತಾಳ       7ಒ3ಒ3    ತತ್ತತತ್ತತತ್ತತ್ತಾಂ, ತತ್ತತ್ತಾಂ, ತತ್ತತಾಂ

ಚೌತಾಳ         5ಒ3ಒ5    ತತ್ತ ತತ್ತತ್ತಾಂ, ತತ್ತತ್ತಾಂ, ತತ್ತಾತತ್ತತಾಂ

ಏಕತಾಳ        3        ತತ್ತತ್ತಾಂ,ಧಿಮಿತಕ ತರಿಕಿಟ, ಕಿಟತಕ ತರಿಕಿಟ

ಉಡಾಪೆ         3        ತತ್ತತ್ತಾಂ

ತಿತ್ತಿತೈ           3        ತೈತಿತ್ತಿ

ಅಷ್ಟತಾಳ       1ಒ1       ತಕಿಟ ತಕಧಿಮಿ

ರೂಪಕತಾಳ     5        ತತ್ತ ತತ್ತತ್ತಾಂ,ಧೀನಧೀನಧೀ ದೋತತ್ತಾಂ

ಮಟ್ಟೆತಾಳ       1ಒ3      ದಿತ್ತಧಿನಾಂ ತತ್ತಧಿನಾಂ

ಝುಂಪೆತಾಳ     3ಒ5      ತತ್ತತ್ತಾಂ ತತ್ತ ತತ್ತತಾಂ

ತ್ವರಿತ ಝುಂಪೆ  1ಒ2      ಧಿನ್ನಾ ಧಿದ್ಧಿನ್ನಾ

ತ್ರಿವುಡೆತಾಳ 5ಒ3ಒ3 ತತ್ತತತ್ತತ್ತಾಂ, ತತ್ತತ್ತಾಂ, ತತ್ತತ್ತಾಂ

ತ್ವರಿತ ತ್ರಿವುಡೆ 1ಒ3 ಧೋಂಕತಾಂ ದಿಧಿ ಧೋಕಂತಾಂ

[ಆಧಾರ : ಯಕ್ಷಗಾನ ಕಲಾದರ್ಶನ, 2002, ಪುಟ 15]

ಹೆಜ್ಜೆಗಳೆಂದರೇನು ?

ಹೆಜ್ಜೆ ಎಂದರೆ ಪಾದ ಚಲನೆಯ ಲಯ ಅಥವಾ ಗತಿ. ಯಕ್ಷಗಾನದಲ್ಲಿ ಬಳಕೆ ಯಾಗುವ ಪ್ರಮುಖ ಹೆಜ್ಜೆಗಳು ನಾಲ್ಕು. ಇವನ್ನು ಒಂದನೇ ಹೆಜ್ಜೆ, ಎರಡನೇ ಹೆಜ್ಜೆ, ಮೂರನೇ ಹೆಜ್ಜೆ ಮತ್ತು ನಾಲ್ಕನೆಯ ಹೆಜ್ಜೆ ಎಂದು ಕರೆಯಲಾಗುತ್ತದೆ.

1. ಒಂದನೆಯ ಹೆಜ್ಜೆ : ಇದು ಏಕತಾಳದ ಒಂದು ಹೆಜ್ಜೆ. ಇದನ್ನು ಬೇರೆ ತಾಳಗಳಿಗೂ ಅನ್ವಯಿಸಬಹುದು. ತಕಧಿಮಿ, ತಕಝುಣು ಇದು ಒಂದನೆ ಹೆಜ್ಜೆಯ ಬಾಯಿತಾಳ. ತಕಧಿಮಿಗೆ ಪಾದದ ಮುಂಭಾಗಗಳು ಬಳಕೆಯಾದರೆ, ತಕಝುಣುವಿಗೆ ಪಾದದ ಹಿಂಭಾಗ ‘ಹಿಮ್ಮಡಿ’ಬಳಕೆಯಾಗುತ್ತವೆ. ಪಾದದ ಚಲನೆಗೆ ತಕ್ಕಂತೆ ಹಸ್ತಾಭಿನಯವಿರುತ್ತದೆ. ಇದು ನೃತ್ಯದ ಸೌಂದರ್ಯವನ್ನು ಹೆಚ್ಚಿಸುವ ಹೆಜ್ಜೆಯಾಗಿದೆ.

2. ಎರಡನೆ ಹೆಜ್ಜೆ : ಇದು ಯಕ್ಷಗಾನದ ಅತ್ಯಂತ ಪ್ರಧಾನವಾದ ಹೆಜ್ಜೆ. ನೃತ್ಯಕ್ಕೆ ಇದರಷ್ಟು ಉಪಯೋಗಕಾರಿಯಾದ ಹೆಜ್ಜೆ ಇನ್ನೊಂದಿಲ್ಲ. ಎರಡನೇ ಹೆಜ್ಜೆ ಗೊತ್ತಿಲ್ಲದವರ ನಾಟ್ಯ ಅಸಹ್ಯವಾಗಿಬಿಡುತ್ತದೆ. ಎರಡನೇ ಹೆಜ್ಜೆ ಏಕತಾಳದಲ್ಲಿದೆ. ಇದರ ಬಾಯಿತಾಳ ಧಿಮಿತಕ ತರಿಕಿಟ, ಕಿಟತಕ ತರಿಕಿಟ. ಒಂದು, ಎರಡು, ಮೂರು, ನಾಲ್ಕು ಎಂದು ಹೇಳಿ ಕೊಂಡು ಅಥವಾ ತಾದಿದ್ಧ ನಾದಿಧೋಖತ್ತಾಂ ಎಂಬ ನಡೆಯಲ್ಲಿ ಅಥವಾ ಪಾಲಿಸು ಗಜವದನಾ ಸುಗುಣ ವಿಶಾಲ ದಯಾಸದನ ಎಂಬ ಹಾಡಿನಲ್ಲಿ ಎರಡನೆ ಹೆಜ್ಜೆಯನ್ನು ಅಭ್ಯಾಸ ಮಾಡುವುದು ಒಂದು ಆಹ್ಲಾದಕರವಾದ ಅನುಭವವಾಗಿರುತ್ತದೆ.

3. ಮೂರನೆ ಹೆಜ್ಜೆ : ಇದು ರೂಪಕತಾಳದಲ್ಲಿರುವ ಹೆಜ್ಜೆ. ಇದರಲ್ಲಿ ಆರು ಪದಚಲನೆಗಳಿವೆ. ಒಂದು, ಎರಡು, ಮೂರು, ನಾಲ್ಕು, ಐದು, ಆರು ಎಂದು ಹೇಳಿಕೊಂಡು ಅಭ್ಯಾಸ ಮಾಡುವುದು ಸುಲಭ. ತತ್ತ ತತ್ತ ತ್ತಾಂ ಅಥವಾ ಧೀನ ಧೀನಧೀನಧಿ ಧೋತತ್ತಾಂ ಎಂದು ಬಾಯಿತಾಳ ಹೇಳಿಕೊಂಡು ಅಭ್ಯಾಸ ಮಾಡಬಹುದು.

4. ನಾಲ್ಕನೆ ಹೆಜ್ಜೆ : ಇದಕ್ಕೆ ಸಲಾಮು ಹೆಜ್ಜೆ, ನಮಸ್ಕಾರ ಹೆಜ್ಜೆ ಎಂಬಿತ್ಯಾದಿ ಹೆಸರುಗಳಿವೆ. ಇದು ಕೂಡಾ ಏಕತಾಳದಲ್ಲಿದೆ. ತತ್ತೋಂಗ ಧಿಗುತಕ ಥೈ ಎಂದು ಅಥವಾ ಒಂದು ಎರಡು ಮೂರು ನಾಲ್ಕು ಐದು ಆರು ಏಳು ಎಂಟು ಎಂದು ಹೇಳಿಕೊಂಡು ಅಭ್ಯಾಸ ಮಾಡಬಹುದು. ಅಷ್ಟತಾಳದ ಪದದ ಮುಕ್ತಾಯಕ್ಕೆ ಮುನ್ನ ಭಾಗವತರು ಏಕತಾಳದಲ್ಲಿ ನಮಸ್ಕಾರ ಹೆಜ್ಜೆಗೆ ಅವಕಾಶ ಮಾಡಿಕೊಡುತ್ತಾರೆ. ಬಡಗು ತಿಟ್ಟಿನ ಪ್ರಭಾವದಿಂದ ತೆಂಕು ತಿಟ್ಟಿನಲ್ಲಿ ನಾಲ್ಕನೆ ಹೆಜ್ಜೆ ವಿಸ್ತಾರವಾಗಿ ತತ್ತೋಂಗ ಧಿಗುತಕ ಥೈಕು ಥೈಕು ತರಿಕಿಟ ತತ್ತೋಂಗ ಧಿಗುತಾ ಧೇಎಂದಾಗಿ ಬಿಟ್ಟಿದೆ.

ತಾಳ ಮತ್ತು ಹೆಜ್ಜೆಗಳು ನವರಸಗಳ ಅಭಿವ್ಯಕ್ತಿಗೆ ನೆರವಾಗುತ್ತವೆ. ಶೃಂಗಾರ, ವೀರ, ಕರುಣ, ಅದ್ಭುತ, ಶಾಂತ, ಹಾಸ್ಯ, ಭಯಾನಕ, ಭೀಭತ್ಸ ಮತ್ತು ರೌದ್ರ ನವರಸಗಳು. ರಂಗದಲ್ಲಿ ಇವುಗಳನ್ನು ಯಾವ ರಾಗ, ತಾಳ ಮತ್ತು ಹೆಜ್ಜೆಗಳಲ್ಲಿ ಅಭಿವ್ಯಕ್ತಿಸಬೇಕೆಂಬ ಸಿದ್ದ ಸೂತ್ರಗಳಿವೆ.

ನಾಟ್ಯ ಶಾಸ್ತ್ರದಲ್ಲಿ ‘ತ್ರಯೋಲಯಸ್ತು ವಿಜ್ಞೇಯಾಃ ಧ್ರುತ, ಮಧ್ಯ, ವಿಲಂಬಿತಾಃ ‘ಎಂದು ಹೇಳಲಾಗಿದೆ. ‘ ಧ್ರುತ, ಮಧ್ಯಮ, ವಿಲಂಬಿತ ಎಂದು ಲಯವು ಮೂರು ವಿಧ. ತಾಳಗತಿ ಹಿಡಿದು ಮೂರನೆಯ ಕಾಲದ ತ್ವರಿತಗತಿಯಲ್ಲಿ ಹಾಡುವುದು ಮತ್ತು ವಾದನ ಮಾಡುವುದು ದ್ರುತಲಯ ವೆನಿಸುವುದು. ಸಹಜವಾದ ಅಭಿವ್ಯಕ್ತಿಯುಳ್ಳುದು ಮಧ್ಯಮ ಲಯ. ತುಂಬಾ ನಿಧಾನವಾಗಿ ಪದದ ಹ್ರಸ್ವಾಕರಗಳಿಗೆ ಧೀರ್ಘ ಹಾಗೂ ಅತಿದೀರ್ಘ ಮೌಲ್ಯವಿರುವಂತೆ ಹಾಡುವುದು ವಿಲಂಬಿತವೆನಿಸುವುದು. ‘[ ಯಕ್ಷಗಾನ ಕಲಾದರ್ಶನ, ಪುಟ 50-51]

ಯಕ್ಷಗಾನ ನಾಟ್ಯವನ್ನು ಗತಿಗನುಗುಣವಾಗಿ ಒಂದನೆ, ಎರಡನೆ, ಮೂರನೆ ಮತ್ತು ನಾಲ್ಕನೆಯ ಕಾಲವೆಂದು ವಿಭಜಿಸುವುದುಂಟು. ರಾತ್ರಿ ಹತ್ತರಿಂದ ಹನ್ನೆರಡು ಒಂದನೆ ಕಾಲ, ಹನ್ನೆರಡರಿಂದ ಎರಡು ಎರಡನೆ ಕಾಲ, ಎರಡರಿಂದ ನಾಲ್ಕು ಮೂರನೆಯ ಕಾಲ ಮತ್ತು ನಾಲ್ಕರಿಂದ ಆರು ನಾಲ್ಕನೆಯ ಕಾಲವೆಂದು ಪರಿಗಣಿತವಾಗಿದೆ. ತಾಳ ಅಥವಾ ಲಯ ಕಾಲಕ್ಕನುಗುಣವಾಗಿ ವೇಗವನ್ನು ಪಡಕೊಳ್ಳುತ್ತದೆ.ಅದಕ್ಕನುಗುಣವಾಗಿ ಹೆಜ್ಜೆ, ನೃತ್ಯ ಎಲ್ಲದರ ವೇಗೋತ್ಕರ್ಷವಾಗುತ್ತದೆ.

5.2 ಪೂರ್ವರಂಗದ ನೃತ್ಯ ಕ್ರಮ

ಪೂರ್ವರಂಗದ ನೃತ್ಯ ಕ್ರಮಗಳನ್ನು ತೆಂಕುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರ ಮಾತುಗಳಲ್ಲಿ ತಿಳಿದುಕೊಳ್ಳೋಣ:[ ಯಕ್ಷಗಾನ ಮಕರಂದ, ಪುಟ 352-353]

ಬಾಲಗೋಪಾಲರ ನೃತ್ಯ ಕ್ರಮದಲ್ಲಿ ಒಂಬತ್ತು ಅಂಶಗಳನ್ನು ನೆನಪಿನಲ್ಲಿಡಬೇಕು :

1. ‘ಹರೇ ರಮಣಾ ಗೋವಿಂದಾ…… ‘ ಇದು ಏಕತಾಳದ ಪದ್ಯ. ಇದಕ್ಕೆ ತಿರುಗುವ ಚಲನೆಯ ನೃತ್ಯ. ಇಲ್ಲಿ ಬರುವ ಮುಕ್ತಾಯವು ‘ತಕತಾಂ ದಿದ್ದಾಂ ದದಿಗಿಣತೊ’ ಎಂಬುದು. ಇದು ಏಕತಾಳದ ವೀರರಸದ ಪದ್ಯಗಳಲ್ಲಿ ಬಳಸುವ ಮುಕ್ತಾಯ ಎಂಬುದನ್ನು ಗಮನಿಸಬಹುದು.

2. ‘ಹೇ ಗೋಪಾಲಕ ಹೇ ಕೃಪಾ ಜಲನಿಧೇ…….. ‘ ಮತ್ತು ದಶಾವತಾರಗಳಿಗೆ ಸಂಬಂಧಿಸಿದ ಶ್ಲೋಕಗಳಿಗೆ ರಂಗದ ತುದಿಯಲ್ಲಿ ನಿಂತು ಮುದ್ರೆಗಳನ್ನು ತೋರಿಸುವುದು ಇದು ಮುದ್ರೆಗಳ ಅಭ್ಯಾಸಕ್ಕಾಗಿ ಇರುವಂತಹದು.

3. ‘ಹರಿನಾರಾಯಣ ಗೋವಿಂದಾ…….. ‘ ಈ ಪದ್ಯಕ್ಕೆ ಬಾಲಗೋಪಾಲರು ಒಬ್ಬನು ಬಲಕ್ಕೂ, ಒಬ್ಬನು ಎಡಕ್ಕೂ ಸುತ್ತುವರಿದು ಕುಣಿಯುವುದು. ಇದಾದ ಬಳಿಕ ಕೇಶವ ಮಾಧವ ಮಧುಸೂಧನ ಎಂಬ ಚರಣವನ್ನು ತ್ವರಿತಗತಿಯಲ್ಲಿ ಹೇಳಿ ಒಟ್ಟಿಗೆ ಬಾರಿಸಿದಾಗ ತ್ವರಿತಗತಿಗೆ ಸಂಬಂಧಿಸಿದ ನೃತ್ಯ. ಇಲ್ಲೂ ಇದು ಕಲಿಕೆಗಾಗಿ ಅಳವಡಿಸಿದ ವೈವಿಧ್ಯ ಎಂಬುದು ತಿಳಿಯುತ್ತದೆ.

4. ‘ಅನವರತವು ಪಾಲಿಸೆನ್ನನು’ಈ ಪದ್ಯ ಕೋರೆ ತಾಳದಲ್ಲಿ ತಿತ್ತಿತೈದಿ ಆರಂಭ ಮತ್ತು ಏಕತಾಳದಲ್ಲಿ ಮುಕ್ತಾಯ. ಈ ಮುಕ್ತಾಯಕ್ಕೆ ಬಲದ ಮಂಡಿಯೂರಿ ಕುಳಿತುಕೊಳ್ಳು ವುದು. ಇದು ಮೂರು ಬಾರಿ ಆದಮೇಲೆ ಎಡಭಾಗಕ್ಕೊಮ್ಮೆ, ಬಲಭಾಗಕ್ಕೊಮ್ಮೆ ಎರಡೆರಡು ಆವರ್ತ, ಹಸ್ತಾಭಿನಯ ಪ್ರದರ್ಶನ. ಮೂರನೇ ಬಾರಿ ಮುಕ್ತಾಯಕ್ಕೆ ಏಳುವುದು.

5. ಇದಾದೊಡನೆ ‘ಕುತ್ತಿಕಾಲು ಹೆಜ್ಜೆ’ ಆರಂಭಿಸಿ ಕುಣಿಯುತ್ತಾ ಹಿಂದೆ ಹಿಂದೆ ಬರುವುದು. ಅಲ್ಲಿಗೆ ಮುಕ್ತಾಯ ಬಾರಿಸಿದೊಡನೆ ಇಬ್ಬರೂ ಬದಿಗೆ ಬಾಗಿದ ಭಂಗಿಯಲ್ಲಿ, ಅರ್ಧಚಂದ್ರಾಕೃತಿಯ ‘ಜಾರುಕುಪ್ಪೆ’ ಹೆಜ್ಜೆಗಳನ್ನು ಆರಂಭಿಸಿ ನರ್ತಿಸಬೇಕು.

6. ಇದಾದ ಬಳಿಕ ನಮಸ್ಕಾರ ‘ನಾಲ್ಕನೆ’ ಹೆಜ್ಜೆ ಆರಂಭ. ತತ್ತೋಂಗ ಧಿಕುತಕ ತೈತಾ ತರಿಕಿಟ ಧಿನ ಎಂಬ ನುಡಿಕಾರಕ್ಕನುಸರಿಸಿ ಕುಣಿತ. ಇದರ ಕೊನೆಗೆ ಮೂರು ಬಾರಿ ಮುಕ್ತಾಯ.

7. ಮುಂದೆ ‘ಅನವರತವು ಪಾಲಿಸೆನ್ನನು’ ಎಂಬ ಪದ್ಯವನ್ನು ಒಂದನೇ ಕಾಲ ದಿಂದಾರಂಭಿಸಿ, ನಾಲ್ಕನೇ ಕಾಲದವರೆಗೆ ವೇಗವನ್ನು ಮುಂದುವರಿಸಿ ಮುಕ್ತಾಯ ಕೊಡುವುದು.

8. ‘ಗಿರಿಜೆ ಶ್ರೀ ಮಹಾಲಕ್ಷ್ಮಿ’ ಎಂಬ ಪದ್ಯಕ್ಕೆ ಧಿಂಗಿಣ ‘ಗಿರ್ಕಿ’ ಕುಣಿದು ನಂತರ ಉರುಳಿಕೆಗೆ ‘ತಿರುಗುವುದು’.

9. ‘ವರಕ್ರರೋಡ ನಗರದಿ’ ಸ್ಥರವಾಸು ಎಂಬ ಪದ್ಯಕ್ಕೆ ದಿದ್ದೊಂ ಧೋಂಕಿಟ ಕಿಟ ಧೀಂಕಿಟೕ ಧಾಂಧಾಂ ದಿಗುತಕ ಧಾಂಧಾಂ ತೈೕ ತೈತ ತಕತ ತೈತ ತಕತ ಇತ್ಯಾದಿ ನುಡಿತಗಳಲ್ಲಿ ವಿವಿಧ ಹೆಜ್ಜೆಗಳಿವೆ.

ಕೋಷ್ಟಕ 5.2 : ಸ್ತ್ರೀವೇಷ ಕುಣಿತದ ಆರು ಹಂತಗಳು

ಪೂರ್ವರಂಗ ಸ್ತ್ರೀವೇಷ ಕುಣಿತದ ಆರು ಹಂತಗಳನ್ನು ಕೋಳ್ಯೂರರು ಗುರುತಿಸಿದ್ದಾರೆ :

* ‘ಕಾಮಿನಿ ಕರೆದು ತಾರೆ ಶ್ರೀ ಮಂಜುನಾಥ’ ಎಂಬ ಆದಿತಾಳದ ಪದ್ಯದಲ್ಲಿ ಒಟ್ಟಿಗೆ ಮೂರು ಮುಕ್ತಾಯಗಳು.

* ಮುಂದೆ ರಂಗದ ತುದಿಯಲ್ಲಿ ಮಂಡಿಯೂರಿ ಕುಳಿತು ಎಡಕೊಮ್ಮೆ, ಬಲಕ್ಕೊಮ್ಮೆ ಹಸ್ತ ಭಾವಗಳನ್ನು ನೀಡುವುದು.

* ಅಲ್ಲಿಂದ ಎದ್ದು ‘ಕುತ್ತಿಕಾಲು ಹೆಜ್ಜೆ’ಯಲ್ಲಿ ಕುಣಿಯುತ್ತಾ ಹಿಂದೆ ಹಿಂದೆ ಬರುವುದು.

* ಅನಂತರ ಬದಿಗೆ ಬಾಗಿ ‘ಜಾರುಗುಪ್ಪೆ’ಯನ್ನು ಅರ್ಧಚಂದ್ರಾಕೃತಿಯಲ್ಲಿ ಕುಣಿಯುವುದು.

* ಅದಾಗಿ ನಮಸ್ಕಾರ ಹೆಜ್ಜೆಯ ಕುಣಿತ.

* ಅನಂತರ ತ್ವರಿತ ಗತಿಯ ನೃತ್ಯವಾದ ಮೇಲೆ ಹಾಸ್ಯಗಾರನ ಪ್ರವೇಶ.

‘ಈ ರೀತಿಯಲ್ಲಿ ಪೂರ್ವರಂಗದಲ್ಲಿ ಯಕ್ಷಗಾನ ನೃತ್ಯದ ಚಲನೆ ಮತ್ತು ಮೂಲ ಸೂತ್ರಗಳು ಒಳಗೊಂಡಿರುವುದು ವಿದಿತವಾಗುತ್ತದೆ. ಈ ಹೆಜ್ಜೆಗಳು ಕರಗತವಾದಾಗ ನಾಟ್ಯಾಭ್ಯಾಸದ ಮೊದಲ ಹಂತವು ಮುಗಿಯಿತೆನ್ನಬಹುದು. ಭಾಷೆಗೆ ವ್ಯಾಕರಣವಿದ್ದಂತೆ ನೃತ್ಯಕ್ಕೆ ಈ ಮೂಲಭೂತ ಪದಗತಿಗಳು. ನೃತ್ಯವನ್ನು ಬಳಸಿ ಕಲಾಸೃಷ್ಟಿ ಮಾಡಿದಾಗ ನಾಟ್ಯವು ಪರಿಪೂರ್ಣವೆನಿಸುತ್ತದೆ.’ [ಯಕ್ಷಗಾನ ಮಕರಂದ, ಪುಟ 354]

ನೃತ್ಯದ ಯಶಸ್ಸು ಕೈ ಮತ್ತು ಕಣ್ಣುಗಳ ಸಮರ್ಪಕ ಬಳಕೆಯಲ್ಲಿದೆ. ಸಭಾಲಕ್ಷಣ ಹೀಗೆ ಹೇಳುತ್ತದೆ:

ಯಥಾ ಹಸ್ತಾಸ್ತಥಾ ದೃಷ್ಟಿಃ | ಯಥಾ ದೃಷ್ಟಿಸ್ತಥಾ ಮನಃ ||

ಯಥಾ ಮನಸ್ತಥಾ ಭಾವ | ಇತ್ಯೇತನ್ನಾಟ್ಯ ಲಕಣಂ ||

[ಯಕ್ಷಗಾನ ಪ್ರಾಥಮಿಕ ಪಾಠಗಳು 1998 ಪುಟ 22]

ಹೇಗೆ ಹಸ್ತವೊ ಹಾಗೆ ದೃಷ್ಟಿ, ಹೇಗೆ ದೃಷ್ಟಿಯೊ ಹಾಗೆ ಮನಸ್ಸು, ಹೇಗೆ ಮನಸ್ಸು ಹಾಗೆ ಭಾವ . ಇದು ನಾಟ್ಯ ಲಕಣವೆಂದು ಶಾಸ್ತ್ರಕಾರ ಹೇಳಿದ್ದಾನೆ. ಇದು ಪೂರ್ವರಂಗಕ್ಕೆ ಮಾತ್ರವಲ್ಲದೆ ಕಥಾ ಸಂದರ್ಭದ ನೃತ್ಯಕ್ಕೂ ಸಲ್ಲುವ ಮಾತು.

5.3 ಪ್ರಸಂಗ ಉತ್ತರರಂಗದಿ ನೃತ್ಯ

ಪೂರ್ವರಂಗದಲ್ಲಿನ ತಾಳಗಳು ಮತ್ತು ಹೆಜ್ಜೆಗಳು ಯಥಾವತ್ತಾಗಿ ಪ್ರಸಂಗ ಪ್ರದರ್ಶನದಲ್ಲಿ ಅನ್ವಯವಾಗುತ್ತವೆ. ಪ್ರವೇಶ, ನಿರ್ಗಮನ, ಜಲಕೇಳಿ, ಬೇಟೆ, ಯುದ್ಧ ಇತ್ಯಾದಿ ಸಂದರ್ಭಗಳ ನೃತ್ಯ ಮಾತ್ರ ವಿಭಿನ್ನವಾಗಿರುತ್ತವೆ.

1. ಒಡ್ಡೋಲಗ ಮತ್ತು ಪ್ರವೇಶ ನೃತ್ಯ : ವೇಷಗಳ ಪ್ರವೇಶ ನೃತ್ಯ ಯಕ್ಷಗಾನವನ್ನು ಒಂದು ಗಂಡು ಕಲೆಯನ್ನಾಗಿಸಿದೆ. ಪ್ರವೇಶ ನೃತ್ಯವನ್ನು ಧೀಂಗಿಣ ನೃತ್ಯವೆಂದು ಕರೆಯ ಲಾಗುತ್ತದೆ. ಕೆಲವು ವಿಶಿಷ್ಟ ವೇಷಗಳಿಗೆ ಭಿನ್ನ ಪ್ರವೇಶ ಸಂಪ್ರದಾಯಗಳಿರುತ್ತವೆ. ಅವು ಒಡ್ಡೋಲಗ ನೃತ್ಯ ವ್ಯಾಪ್ತಿಯಲ್ಲಿ ಬರುತ್ತವೆ. ಉದಾತ ಕಿರೀಟ ವೇಷದ ಒಡ್ಡೋಲಗ, ಬಣ್ಣದ ವೇಷದ ಒಡ್ಡೋಲಗ, ಪುಂಡು ವೇಷದ ಒಡ್ಡೋಲಗ, ಕಿರಾತನ ಒಡ್ಡೋಲಗ ಇತ್ಯಾದಿ.

ಬಣ್ಣದ ವೇಷದ ಒಡ್ಡೋಲಗದಲ್ಲಿ ತೆರೆ ಪೊರಪ್ಪಾಡ್‌ ಒಂದು ಪ್ರಮುಖ ಅಂಗ. ಪೊರಪ್ಪಾಡು ಎಂದರೆ ಹೊರಡುವಿಕೆ ಎಂದರ್ಥ. ತೆರೆಸಹಿತ ಅಥವಾ ತೆರೆಯನ್ನು ಬಳಸಿ ವೇಷ ಪ್ರವೇಶದ ಹಂತಗಳನ್ನು ಪ್ರದರ್ಶಿಸುವುದೇ ತೆರೆ ಪೊರಪ್ಪಾಡು. ಯಕ್ಷಗಾನದ ಆದ್ಯ ಕಲಾವಿದರು ಮಲೆಯಾಳೀ ಮೂಲದ ಕನ್ನಡಿಗರಾದುದರಿಂದ ಈ ಪದ ಬಳಕೆಯಲ್ಲಿ ಬಂದಿರಬೇಕು. ಇದು ಬಣ್ಣದ ವೇಷದ ಪ್ರವೇಶ ನೃತ್ಯದ ಪೂರ್ವಾಂಗವಾಗಿರುತ್ತದೆ. ದೇವೇಂದ್ರ, ಶ್ರೀರಾಮ, ಶತ್ರುಘನ, ದಶರಥ, ಪಾಂಡವರು ಇವರ ಒಡ್ಡೋಲಗದಲ್ಲಿ ಸಭಾಕಲಾಸು ಎಂಬ ನೃತ್ಯ ವಿರುತ್ತದೆ. ಇತರ ರಾಜವೇಷಗಳು, ಪುಂಡು ವೇಷಗಳು ಮತ್ತು ವೀರಸ್ತ್ರೀಯರು ಧೀಂಗಿಣ ನೃತ್ಯದಲ್ಲೇ ಪ್ರವೇಶ ಮಾಡುತ್ತಾರೆ. ಹನುಮಂತನ ಪೊರಪ್ಪಾಡು ಒಂದು ವಿಶಿಷ್ಟ ಪರಿಕಲ್ಪನೆ ಯಾಗಿದ್ದು ಅದರಲ್ಲಿ ಕಪಿಚೇಷ್ಟೆಗಳೊಡನೆ ದಶಾವತರವನ್ನು ಅಭಿನಯದಲ್ಲಿ ತೋರಿಸಲಾಗು ತ್ತದೆ. ಕೃಷ್ಣನ ಒಡ್ಡೋಲಗದಲ್ಲಿ ಕೃಷ್ಣನೊಡನೆ ಅವನ ಅಷ್ಟಮಹಿಷಿಯರಿರುತ್ತಾರೆ. ಅದು ತುಂಬಾ ರಸವತ್ತಾದ ಒಂದು ನೃತ್ಯ ಭಾಗವಾಗಿದೆ. ನರಸಿಂಹ, ವೀರಭದ್ರ, ಭಸ್ಮಾಸುರ ಮುಂತಾದ ವೇಷಗಳು ರಡ್ಡೀಂಗಣ ಕಿಟ ಧೀಂಗಿಣ ಎಂಬ ಚೆಂಡೆ ಪೆಟ್ಟಿಗೆ ಮೊಣಕಾಲುಗಳಲ್ಲಿ ರಂಗಕ್ಕೆ ತೆವಳಿಕೊಂಡು ಬಂದು ಪ್ರವೇಶ ಮಾಡುತ್ತವೆ. ಮಹಿಷಾಸುರ, ಮಧುಕೈಟಭ, ವರಾಹ, ಭೀಮದುಶ್ಶಾಸನ, ಚಂಡಮುಂಡ ಇತ್ಯಾದಿ ಪಾತ್ರಗಳು ದೊಂದಿಗೆ ರಾಳದ ಪುಡಿ ಎರಚುತ್ತಾ ಸಭಾಮಧ್ಯದಿಂದ ಪ್ರವೇಶ ಮಾಡುವುದಿದೆ.

2. ವಿಶಿಷ್ಟ ನೃತ್ಯಗಳು : ಈ ಸಾಲಲ್ಲಿ ಪ್ರಯಾಣ, ನಿರ್ಗಮನ, ಬೇಟೆ, ನಮೂನೆವಾರು ಕುಣಿತ ಇತ್ಯಾದಿಗಳು ಬರುತ್ತವೆ. ಪ್ರಯಾಣ ಮತ್ತು ನಿರ್ಗಮನಗಳಿಗೆ ‘ತೈತ ತಕತ’ ಎಂಬ ನಡೆ ಇದೆ. ನಮೂನೆವಾರು ಕುಣಿತಕ್ಕೆ ಪದ್ಯವು ಭೈರವಿ ಅಷ್ಟತಾಳದಲ್ಲಿರಬೇಕು. ಪದವನ್ನು ಏಕತಾಳದಲ್ಲಿ ಎತ್ತಿಕೊಂಡು ಮೂರು ಮುಕ್ತಾಯ ಕುಣಿಸಿ ಆಮೇಲೆ ಭೈರವಿ ಅಷ್ಟದಲ್ಲಿ ನಮೂನೆವಾರು ಕುಣಿತಕ್ಕೆ ಭಾಗವತರು ಆಸ್ಪದ ಕೊಡುತ್ತಾರೆ. ಪುಂಡುವೇಷಗಳಲ್ಲದೆ ಇತರ ವೇಷಗಳ ನಮೂನೆವಾರು ಕುಣಿಯುವ ರೂಢಿ ಇಲ್ಲ. ಬಣ್ಣದ ವೇಷಗಳು ಮಟ್ಟೆತಾಳದಲ್ಲಿ ರಂಗದ ನಾಲ್ಕು ಮೂಲೆಗಳಿಗೆ ಚಲಿಸುವ ನೃತ್ಯಗತಿಯೊಂದಿದೆ. ಅದನ್ನು ಇತರ ವೇಷಗಳು ಮಾಡುವುದಿಲ್ಲ.

3. ನೇತ್ರ ಚಲನೆ : ನೇತ್ರಗಳ ಸರಿಯಾದ ಚಲನೆಯಿಂದ ನೃತ್ಯದ ಸೌಂದರ್ಯ ಹೆಚ್ಚುತ್ತದೆ. ತೆಂಕುತಿಟ್ಟಿನ ಮೇರು ಕಲಾವಿದ ಸೂರಿಕುಮೇರಿ ಗೋವಿಂದ ಭಟ್ಟರು ಎಂಟು ರೀತಿಯ ನೇತ್ರ ಚಲನೆಗಳನ್ನು ದಾಖಲಿಸಿದ್ದಾರೆ: [ಯಕ್ಷೋಪಾಸನೆ, 2008, ಪುಟ 183-184]

* ಸಮ : ಕಣ್ಣು ರೆಪ್ಪೆಯನ್ನಾಡಿಸದೆ ದೇವತೆಗಳಂತೆ ನೇರವಾಗಿ ನೋಡುವುದು. ನಾಟ್ಯಾರಂಭ, ಆಶ್ಚರ್ಯಮೊದಲಾದಲ್ಲಿ ಉಪಯೋಗ.

* ಆಲೋಲಿತ : ಸಮದೃಷ್ಟಿಯನ್ನು ಸುತ್ತಲೂ ಚಕ್ರಾಕಾರವಾಗಿ ತಿರುಗಿಸುತ್ತಾ ಸೇಟವಾಗಿ ನೋಡುವುದು. ನಿರೀಕಣೆ, ಚಕ್ರ, ತಿರುಗುವುದು, ಕ್ರೋಧ, ರೌದ್ರಾದಿ ಗಳಲ್ಲಿ ಉಪಯೋಗ.

* ಸಾಚಿ : ಸ್ವಸ್ಥಾನದಿಂದ ಕಣ್ಣಂಚಿನವರೆಗೂ ನಿಧಾನವಾಗಿ ಚಲಿಸುವಂತೆ ನೋಡುವುದು. ಅಭಿಪ್ರಾಯ, ಸೂಚನೆ, ತುದಿ, ಇಷ್ಟ ಮೊದಲಾದಲ್ಲಿ ಉಪಯೋಗ.

* ಪ್ರಲೋಕಿತ : ಒಂದಂಚಿನಿಂದ ಮತ್ತೊಂದು ಅಂಚಿನವರೆಗೂ ಚಲಿಸುವುದು. ಸನ್ನೆ, ಎಚ್ಚರಿಕೆ ಮೊದಲಾದಲ್ಲಿ ಉಪಯೋಗ.

* ನಿಮೀಲಿತ : ಅರೆಗಣ್ಣು ಮುಚ್ಚಿರುವುದು, ರೆಪ್ಪೆಗಳು ಬಾಗಿರುವುದು. ಋಷಿಗಳು, ಧ್ಯಾನ, ಜಪ, ತಪ, ಸೂಕ್ಮ ಮೊದಲಾದಲ್ಲಿ ಉಪಯೋಗ.

* ಉಲ್ಲೋಕಿತ : ಮೇಲೆ ನೋಡುವಂತಹ ನೋಟ. ಗೋಪುರ, ಧ್ವಜದ ತುದಿ, ಬೆಳದಿಂಗಳು, ಆಕಾಶಗಮನ, ದೇವತೆಗಳು, ಖೇಚರರು ಮೊದಲಾದಲ್ಲಿ ಉಪಯೋಗ.

* ಅನುವೃತ್ತ : ಸ್ವಸ್ಥಾನದಿಂದ ಮೇಲೆ ಕೆಳಗೆ ವೇಗವಾಗಿ ಚಲಿಸುವ ದೃಷ್ಟಿ. ಸಿಟ್ಟು, ದ್ವೇಷ, ಎಚ್ಚರಿಕೆ, ಪ್ರಶಾನರ್ಥ ಮೊದಲಾದಲ್ಲಿ ಉಪಯೋಗ.

* ಅವಲೋಕಿತ : ಕೆಳಗೆ ನೋಡುವುದು. ನೆರಳು, ವಿಚಾರ, ಪಠಣ, ನಾಚಿಕೆ, ತಾಳ್ಮೆ, ವಿನಯ, ಮೊದಲಾದಲ್ಲಿ ಉಪಯೋಗ.

ಕೋಷ್ಟಕ 5.3 : ನೃತ್ಯದ ನಾಲ್ಕು ಭಂಗಿಗಳು

ನೃತ್ಯದಲ್ಲಿ ನಾಲ್ಕು ರೀತಿಯ ಭಂಗಿಗಳು ಬಳಕೆಯಲ್ಲಿವೆ.

* ಸಮಭಂಗಿತ ನೇರವಾಗಿ ನಿಲ್ಲುವುದು. ಅಂಗಾಂಗಗಳು ಸಮತ್ವದಲ್ಲಿ ನಿರ್ವಹಿಸ ಲ್ಪಡುವಂತಹದ್ದು. ತಲೆಯಿಂದ ಕಾಲಿನವರೆಗೆ ಅಂದರೆ ಪಾದದ ತನಕ ಸಮರೇಖೆಯಲ್ಲಿ ನಿಲ್ಲಬೇಕು.

* ಅಭಂಗಿತ ಸಮದಿಂದ ಭಾಗಿಸಲ್ಪಟ್ಟ ಭಂಗಿ. ಸಮದಿಂದ ವ್ಯತ್ಯಸ್ತವಾದುದು. ನೇರವಾದ ರೇಖೆಯು ಬಗ್ಗಿ ಇಬ್ಭಾಗವನ್ನು ಸೂಚಿಸುವಂತಹದು.

* ತ್ರಿಭಂಗಿತ ದೇಹದ ತ್ರಿಕೋನಾಕಾರವನ್ನು ಸೂಚಿಸುವಿಕೆ. ನಿಂತ ನಿಲುವಿನಲ್ಲಿ ಮೂರು ಮೂಲೆಯನ್ನು ತೋರಿಸುವಂತಹದ್ದು.

* ಅತಿಭಂಗಿತ ತ್ರಿಕೋನದಿಂದ ಹೊರತಾದುದು. ಅಭಂಗಿ, ಸಮಭಂಗಿ, ತ್ರಿಭಂಗಿ ಗಳನ್ನು ಮೀರಿ ವಿವಿಧ ಕೋನಾಂತರಗಳನ್ನು ತೋರಿಸುವಂತದು. [ಯಕ್ಷೋಪಾಸನೆ, ಪುಟ 184]

ಈ ನಾಲ್ಕು ಭಂಗಿಗಳಲ್ಲಿ ನೃತ್ತಾಂಗ ದೇವತಾ, ಮಾನವಿಕ, ಪ್ರಾಕೃತಿಕ ಸಂಕೇತಗಳನ್ನು ತೋರಿಸಬಹುದು. ನೃತ್ತಾಂಗವು ನೃತ್ಯದ ಚಲನೆಯನ್ನು ತೋರುವ ಕರಣವಾಗಿದೆ. ಅಂಗಹಾರ, ಮಾತೃಕಾದಿಗಳಲ್ಲಿ ಬರುವ ಯಾವುದೇ ನಿರ್ದಿಷ್ಟ ಅರ್ಥವಿಲ್ಲದ ತಾಳ, ಲಯ, ಪ್ರಯೋಗಾರ್ಥವಿರುವ ಸುಂದರ ಹಸ್ತವಿನ್ಯಾಸಾದಿ ಭೇದಗಳ ಭಂಗಿಯೇ ನೃತ್ತಾಂಗ. ದೇವತಾ ಎಂದರೆ ವಿವಿಧ ದೇವತೆಗಳ ಭಂಗಿಗಳು ಅಥವಾ ಸಂಕೇತಗಳು. ಮಾನವಿಕವು ಮಾನವ ಸಹಜ ಸ್ವಭಾವವನುನ ನಿರೂಪಿಸಿದರೆ ಪ್ರಾಕೃತಿಕವು ಪ್ರಕೃತಿ ಸಹಜ ವ್ಯವಹಾರಗಳ ಸಂಕೇತವಾಗಿರುತ್ತದೆ.

ಹಸ್ತ ಮುದ್ರೆಗಳು : ಭಾವಾಭಿನಯಕ್ಕೆ ಅನುಕೂಲವಾಗುವಂತೆ ವಿವಿಧ ಅರ್ಥಗಳನ್ನು ಸೂಚಿಸುವ ಕೈ ಬೆರಳುಗಳ ಮಡಚುವಿಕೆಯನ್ನು ‘ಹಸ್ತಮುದ್ರೆ’ಗಳೆಂದು ಕರೆಯುತ್ತಾರೆ. ನಾಟ್ಯಕಲೆಯ ವೈಶಿಷ್ಟ್ಯವು ಅದರ ಭಾವಾಭಿನಯದಲ್ಲಿದೆ. ಆ ಅಭಿನಯ ಕ್ರಿಯೆಯು ಹಸ್ತಮುದ್ರೆಗಳಲ್ಲಿದೆ. ಹಸ್ತ ಭೇದಗಳು, ಹಸ್ತ ಲಕ್ಷಣಗಳು, ನೃತ್ತ ಹಸ್ತಗಳು ವಿಶೇಷ ಮುದ್ರೆಗಳಾಗಿವೆ. ಹಸ್ತಮುದ್ರೆಗಳನ್ನು ಒಂದೇ ಕೈಯಿಂದ ತೋರಿಸಿದರೆ ಅವು ಅಸಂಯುತ ಹಸ್ತಮುದ್ರೆ ಎನಿಸುತ್ತವೆ. ಅಂತಹ 24 ಹಸ್ತಮುದ್ರೆಗಳನ್ನು ಭರತಮುನಿ ಉಲ್ಲೇಖಿಸಿದ್ದಾನೆ. ಎರಡೂ ಕೈಗಳಿಂದ ತೋರಿಸುವ ಹಸ್ತಮುದ್ರೆಗಳಿಗೆ ಸಂಯುತ ಹಸ್ತಮುದ್ರೆ ಎಂದು ಹೆಸರು. ಭರತಮುನಿಯ ಪ್ರಕಾರ ಅಂತಹ 13 ಹಸ್ತಮುದ್ರೆಗಳಿವೆ. [ಯಕ್ಷೋಪಾಸನೆ, ಪುಟ 185]

5.4 ವಾಚಿಕಾಭಿನಯ ಅರ್ಥಗಾರಿಕೆ.

ಯಕ್ಷಗಾನದ ಪದಗಳ ಭಾವಾನುವಾದವೇ ವಾಚಿಕಾಭಿನಯ. ಅದಕ್ಕೆ ಮಾತುಗಾರಿಕೆ, ಅರ್ಥಗಾರಿಕೆ ಎಂಬಿತ್ಯಾದಿ ಹೆಸರುಗಳಿವೆ. ಯಕ್ಷಗಾನವು ಮೂಲತಃ ಕಥಕ್ಕಳಿಯಂತೆ ಮೂಕ ನೃತ್ಯವಾಗಿರಬೇಕು. ಆ ಬಳಿಕ ಪದ್ಯದ ಸಾಲುಗಳನ್ನೇ ರಾಗ ಇಲ್ಲದೆ ಹೇಳುವ ಪರಿಪಾಠ ಬಳಕಿಗೆ ಬಂತು. ಅನಂತರ ನಿಧಾನವಾಗಿ ಮಾತಿಗೆ ಮಹತ್ವ ಪ್ರಾಪ್ತವಾಯಿತು. ಹರಿದಾಸರು ವಿದ್ವಾಂಸರು ಯಕ್ಷಗಾನಕ್ಕೆ ಪ್ರವೇಶಿಸಿದ ಬಳಿಕ ಅರ್ಥಗಾರಿಕೆ ಹೊಸ ಮೆರುಗನ್ನು ಪಡೆಯಿತು. ಕಾಲಕ್ರಮೇಣ ವಾಚಿಕಾಭಿನಯವೇ ಒಂದು ಪ್ರತ್ಯೇಕ ಶಾಖೆಯಾಗಿ ತಾಳಮದ್ದಳೆಯ ರೂಪ ಪಡಕೊಂಡಿತು. ಮುಮ್ಮೇಳ ಕಲಾವಿದರು ಸಾದಾ ಉಡುಪಿನಲ್ಲಿ ಎದುರು ಬದುರಾಗಿ ಕುಳಿತು ಕೇವಲ ಮಾತಿನಿಂದ ಒಂದು ಪ್ರಸಂಗವನ್ನು ಪ್ರಸ್ತುತಿ ಪಡಿಸುವುದಕ್ಕೆ ತಾಳಮದ್ದಳೆಯೆಂದು ಹೆಸರು. ತಾಳಮದ್ದಳೆಗೆ ರಂಗಸ್ಥಳ, ವೇಷಭೂಷಣ ಬೇಕಾಗಿಲ್ಲವಾದರೂ ಹಿಮ್ಮೇಳದವರು ಬೇಕೇಬೇಕು.

ನೃತ್ಯಕ್ಕಿಂತಲೂ ಅರ್ಥವೇ ಮುಖ್ಯವೆಂಬ ಭಾವನೆಯನ್ನು ಅನೇಕ ಅರ್ಥಧಾರಿಗಳು ಮೂಡಿಸಿದರು. ಅರ್ಥಧಾರಿಗಳಲ್ಲಿ ಅನರ್ಥಧಾರಿಗಳಾದ ಕೆಲವರು ಕೆಲವು ಸಮಸ್ಯೆಗಳನ್ನು ನಿರ್ಮಿಸಿದರು. ಅಂಥವರಿಂದಾಗಿ ಕೆಲವು ಯಕ್ಷಗಾನ ತಾಳಮದ್ದಳೆಗಳು ವೈದಿಕ ಧರ್ಮಗೋಷ್ಠಿ ಗಳಾಗಿ ಮನುಧರ್ಮ ಶಾಸ್ತ್ರದ ವೈಭವೀಕರಣಕ್ಕೆ ಬಳಕೆಯಾದವು. ವರ್ಷಾನುಗಟ್ಟಲೆ ಪರಿಶ್ರಮದಿಂದ ನಾಟ್ಯಗಾರಿಕೆ, ಮತ್ತು ಬಣ್ಣಗಾರಿಕೆಗಳನ್ನು ಕರಗತ ಮಾಡಿಕೊಂಡ ಕಲಾವಿದರುಗಳಿಗಿಂತ ನಾಲಿಗೆಯೇ ಬಂಡವಾಳವಾದ ಮಾತಿನ ಮಲ್ಲರು ವಿಜೃಂಭಿಸತೊಡಗಿದರು. ಪರಿಣಾಮವಾಗಿ ‘ತಾಳ ತಪ್ಪುವ ತಾಳಮದ್ದಳೆ’ ಎಂಬ ಪ್ರತಿಕ್ರಿಯೆ ಪ್ರೇಕಕರಿಂದ ಬರತೊಡಗಿತು. ಮಾತುಗಾರಿಕೆ ಹೇಗಿರಬೇಕು ಮತ್ತು ಎಷ್ಟಿರಬೇಕು ಎಂಬ ಅಲಿಖಿತ ನಿಯಮಾವಳಿಗಳು ರೂಪುಗೊಂಡವು.

ವಾಚಿಕಾಭಿನಯವನ್ನು ಬಯಲಾಟದ ಅರ್ಥಗಾರಿಕೆ ಮತ್ತು ತಾಳಮದ್ದಳೆಯ ಅರ್ಥಗಾರಿಕೆ ಎಂದು ಪ್ರತ್ಯೇಕಿಸಿಯೇ ವಿಶ್ಲೇಷಣೆ ನಡೆಸಬೇಕಾಗುತ್ತದೆ. ಬಯಲಾಟದಲ್ಲಿ ವೇಷಭೂಷಣ, ನೃತ್ಯಇವುಗಳ ಬಳಿಕ ಅರ್ಥಗಾರಿಕೆಯ ಸ್ಥಾನ. ಮಾತು ಕಡಿಮೆಯಿದ್ದು ನೃತ್ಯ ಮತ್ತು ಅಭಿನಯದ ಮೂಲಕ ರಸಾಭಿವ್ಯಕ್ತಿ ಮಾಡುವುದೇ ಬಯಲಾಟದ ಉದ್ದೇಶ. ಆದರೆ ತಾಳಮದ್ದಲೆಯಲ್ಲಿ ವೇಷಭೂಷಣ, ನೃತ್ಯಗಳಿಲ್ಲ. ಆದುದರಿಂದ ಮಾತುಗಳಿಂದಲೇ ರಸಾಭಿವ್ಯಕ್ತಿ ಮಾಡಬೇಕಾಗುತ್ತದೆ. ಯಕ್ಷಗಾನದ ಮಾತು ಸಿದ್ಧರೂಪದ ಸಂಭಾಷಣೆಯಲ್ಲ. ಅದೊಂದು ಆಶು ಸಾಹಿತ್ಯ. ಅದು ಪ್ರಸಂಗವನ್ನು ಆಧರಿಸಿ ಹುಟ್ಟುತ್ತದೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬೆಳೆಯುತ್ತದೆ.

ಕೋಷ್ಟಕ 5.4 : ಉತ್ತಮ ಅರ್ಥಧಾರಿಯ ಲಕ್ಷಣಗಳು

ಯಕ್ಷಗಾನ ಅರ್ಥಧಾರಿಯಾಗಿ ಬೆಳವಣಿಗೆ ಹೊಂದಬೇಕಾದರೆ ಆತನಲ್ಲಿ ಈ ಕೆಳಗಿನ ಗುಣ ಸ್ವಭಾವಗಳಿರಬೇಕೆಂದು ಪೆರ್ಲ ಕೃಷ್ಣಭಟ್ಟರು ಅಭಿಪ್ರಾಯ ಪಡುತ್ತಾರೆ:

* ಯಕ್ಷಗಾನದ ಮೂಲಸ್ವರೂಪ, ಉದ್ದೇಶ ಮತ್ತು ಅಭಿವ್ಯಕ್ತಿಯ ವಿಧಾನದ ಸಮಗ್ರಜ್ಞಾನ.

* ವಾಲ್ಮೀಕಿ ರಾಮಾಯಣ, ವ್ಯಾಸಭಾರತ, ಭಾಗವತ, ಭಗವದ್ಗೀತೆ, ತೊರವೆ ರಾಮಾಯಣ, ಕುಮಾರವ್ಯಾಸ ಭಾರತ ಮತ್ತು ಜೆಮಿನಿ ಭಾರತ ಕಥೆಗಳ ವಿಸ್ತೃತ ಜ್ಞಾನ.

* ಭಾಷಾಶುದ್ಧಿ ಮತ್ತು ಭಾಷೆಯ ಮೇಲೆ ಪ್ರಭುತ್ವ.

* ರಂಜಕ ಶೈಲಿಯ ವೈಚಾರಿಕ ವಾಕ್‌ ಸಾಮಥ್ರ್ಯ.

* ಪ್ರತಿಭೆ ಮತ್ತು ಪ್ರತ್ಯುತ್ಪನ್ನಮತಿತ್ವ.

* ರಸಪ್ರಜ್ಞೆ, ಕಂಠಶುದ್ಧಿ ಮತ್ತು ಶ್ರುತಿ ಬದ್ಧತೆ.

* ಪ್ರಸಂಗಜ್ಞಾನ, ಪ್ರಯೋಗ ಜ್ಞಾನ ಮತ್ತು ಸಾಧನೆ.

* ಪಾತ್ರದ ಒಳಕ್ಕಿಳಿದು ಮೂಲಸತ್ತ್ವವನ್ನು ಅರಿತು ಪಾತ್ರಕ್ಕೆ ವಿಭಿನ್ನ ಆಯಾಮ ಗಳನ್ನು ನೀಡುವಲ್ಲಿ ಸೃಜನಶೀಲತೆ.

[ಸಹಸ್ರ ಚಂದ್ರ, 1999, ಪುಟ 106107]

ಯಶಸ್ವೀ ಅರ್ಥಧಾರಿ ಅನಿಸುವುದು ಸುಲಭದ ಕೆಲಸವೇನೂ ಅಲ್ಲ. ಸಾಕಷ್ಟು ಪುರಾಣ ಜ್ಞಾನ, ಶ್ರುತಿಗೆ ಕೂಡುವ ಪರಿಣಾಮಕಾರೀ ಕಂಠ, ಭಾಷೆಯ ಮೇಲೆ ಹಿಡಿತ, ಪ್ರತಿಭೆ, ಸಂವಾದ ಚಾತುರ್ಯ, ಸನ್ನಿವೇಶಗಳನ್ನು ಸೃಷ್ಟಿಸುವ ಶಕ್ತಿ, ರಚನಾ ಕೌಶಲ, ವ್ಯಂಗ್ಯ ದೃಷ್ಟಿ, ಭಾವಪರವಶನಾಗುವ ಭಾವಜೀವಿತ್ವ, ಒಳ್ಳೆಯ ಕಲ್ಪನಾಶಕ್ತಿ, ವಾದ ಸಾಮರ್ಥ್ಯ ಇವೆಲ್ಲ ಸಪ್ರಮಾಣ ಎರಕವಾಗಿ ಇದ್ದರೆ ಅವನು ಒಳ್ಳೆಯ ಅರ್ಥಗಾರ. ಅವನು ಏಕಕಾಲದಲ್ಲಿ ಕವಿ, ಮಾತುಗಾರ, ನಾಟಕಕಾರ, ವಿದ್ವಾಂಸ, ನಟ ಎಲ್ಲವೂ ಆಗಬೇಕು.[ ಜಾಗರ, 1984 ಪುಟ 100]

ಯಕ್ಷಗಾನ ಅರ್ಥಧಾರಿಗೆ ವರ್ತಮಾನವನ್ನು ಯಕ್ಷಗಾನ ಚೌಕಟ್ಟಿನಲ್ಲಿ ಪ್ರಸ್ತುತ ಪಡಿಸುವ ವಿಶೇಷ ಪ್ರತಿಭೆ ಇರಬೇಕು. ಆಗ ಯಕ್ಷಗಾನಕ್ಕೆ ಸಾರ್ವಕಾಲಿಕತೆ ಲಭ್ಯವಾಗುತ್ತದೆ. ಆತನಿಗೆ ಪೌರಾಣಿಕ ಪಾತ್ರಗಳನ್ನು ವರ್ತಮಾನಕ್ಕೆ ಪ್ರಸ್ತುತವಾಗುವಂತೆ ಪ್ರಸ್ತುತಿ ಪಡಿಸುವ ಪ್ರತಿಭೆಯೂ ಬೇಕು. ಪುರಾಣ ವಸ್ತುಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನಿರ್ವಚಿಸಿದ ಪ್ರತಿಭಾವಂತ ಅರ್ಥಧಾರಿಗಳ ಅರ್ಥವನ್ನು ಕೇಳಿ ಕೊನೆಯ ಪಕ್ಷ ಸಿ.ಡಿ. ಕೇಳಿ  ಯಯಾತಿ, ಯುಗಾಂತ, ಹಯವದನ, ಪರ್ವ, ಕೃಷ್ಣಾವತಾರ, ಪುಂಸ್ತ್ರೀ, ಮತ್ಸ್ಯಗಂಧಿಯಂತಹ ಕೃತಿಗಳನ್ನು ಓದಿ ಅರ್ಥಧಾರಿಗಳು ಪಾತ್ರಗಳ ಅಂತದೃಷ್ಟಿಯನ್ನು ಮತ್ತು ಮನಸ್ಥಿತಿಯನ್ನು ಚಿತ್ರಿಸುವ ಸಾಮರ್ಥ್ಯ ಹೊಂದಬೇಕು. ಆಗ ಅರ್ಥಗಾರಿಕೆಗೆ ಅರ್ಥ ಬರುತ್ತದೆ.

ಅಭ್ಯಾಸದ ಪ್ರಶೆನಗಳು

1 ಯಕ್ಷಗಾನದಲ್ಲಿ ಬಳಕೆಯಾಗುವ ತಾಳಗಳು ಯಾವುವು?

2 ಯಕ್ಷಗಾನದ ಅಪೂರ್ವ ತಾಳಗಳು ಯಾವುವು?

3 ಯಕ್ಷಗಾನದಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ತಾಳಗಳು ಯಾವುವು?

4 ಹೆಜ್ಜೆ ಎಂದರೇನು? ಹೆಜ್ಜೆಗಳಲ್ಲಿ ಎಷ್ಟು ವಿಧಗಳಿವೆ?

5 ಯಕ್ಷಗಾನದಲ್ಲಿ ಅತ್ಯಂತ ಮಹತ್ವದ ಹೆಜ್ಜೆ ಯಾವುದು?

6 ತಾಳ ಮತ್ತು ಹೆಜ್ಜೆಗಳ ಮಹತ್ತ್ವವೇನು ?

7 ಪೂರ್ವರಂಗದ ನೃತ್ಯ ಕ್ರಮವನ್ನು ತಿಳಿಸಿ.

8 ಬಾಲಗೋಪಾಲರ ನೃತ್ಯ ಕ್ರಮವನ್ನು ತಿಳಿಸಿ.

9 ಸ್ತ್ರೀವೇಷದ ನೃತ್ಯ ಕ್ರಮವನ್ನು ತಿಳಿಸಿ.

10 ಪ್ರಸಂಗ ನೃತ್ಯಕ್ರಮವನ್ನು ವಿಶ್ಲೇಷಿಸಿ.

11 ನೇತ್ರ ಚಲನೆಯ ಎಂಟು ವಿಧಗಳು ಯಾವುವು?

12 ದೇಹಭಂಗಿಗಳ ವಿಧಗಳು ಯಾವುವು?

13 ವಾಚಿಕಾಭಿನಯವೆಂದರೇನು ?

14 ಅರ್ಥಧಾರಿ ಹೊಂದಿರಬೇಕಾದ ಗುಣ ಸ್ವಭಾವಗಳು ಯಾವುವು?

15 ಉತ್ತಮ ಅರ್ಥಧಾರಿಯ ಲಕಣಗಳಾವುವು?

ಕಠಿಣ ಪದಗಳು

ಒಡ್ಡೋಲಗ ನೃತ್ಯ = ಪ್ರವೇಶ ಸಂದರ್ಭದ ನೃತ್ಯ

ಕುತ್ತಿಕಾಲು ಹೆಜ್ಜೆ = ನಿಂತಲ್ಲೇ ಹಿಮ್ಮಡಿಗಳನ್ನು ಮೇಲೆತ್ತಿ ಕೆಳಗಿಟ್ಟು ನರ್ತಿಸುವುದು ಅಥವಾ ಮುಮ್ಮಡಿ ಮಾತ್ರ ಬಳಸಿ ನೃತ್ಯ ಮಾಡುವುದು.

ಜಾರುಗುಪ್ಪೆ ಹೆಜ್ಜೆ = ಕಾಲುಗಳನ್ನು ಜಾರಿಸುತ್ತಾ ಪಕ್ಕಕ್ಕೆ ಹಾರುವ ಒಂದು ನೃತ್ಯ. ಶೃಂಗಾರ ಮತ್ತು ಹಾಸ್ಯ ಸನಿನವೇಶಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ.

ತೆರೆ ಪೊರಪ್ಪಾಡು = ತೆರೆಯನ್ನು ಬಳಸಿ ಮಾಡುವ ಪ್ರವೇಶ ನೃತ್ಯ.

ಪ್ರತ್ಯುತ್ಪನ್ನನ ಮತಿತ್ವ = ಪ್ರಶ್ನೆಗೆ ತಕಣ ಉತ್ತರ, ವಾದಕ್ಕೆ ತಕಣ ಪ್ರತಿವಾದ ಹೂಡುವ ಸಾಮರ್ಥ್ಯ.

ಮುದ್ರೆ = ಮುಖದಲ್ಲಿ ಬಿಡಿಸುವ ಆಕೃತಿ.

ಶ್ರುತಿ ಬದ್ಧತೆ = ಹಿಮ್ಮೇಳಕ್ಕೆ ಹೊಂದುವ ಸ್ವರದ ವಾಚಿಕಾಭಿನಯ.

ಸೃಜನಶೀಲತೆ = ಹೊಸತನ್ನು ಹುಟ್ಟು ಹಾಕುವ ಸಾಮರ್ಥ್ಯ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಣುಲಿಪಿ ಅಕ್ಷರಗಳ ಗ್ರಂಥಗಳು ಮೈಕ್ರೋಲೇಟರ್ಸ್ ಬುಕ್ಸ್ (Micro Letters Books)
Next post ಡಾ. ಲೋಹಿಯಾ ೯೦: ಒಂದು ನೆನಪು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys