ಸಾವಿರ ವರ್ಷದ ಕನ್ನಡ ಸಾಹಿತ್ಯ

ಸಾವಿರ ವರ್ಷದ ಕನ್ನಡ ಸಾಹಿತ್ಯ

ಕನ್ನಡ ಅತ್ಯಂತ ಪ್ರಾಚೀನವೂ, ಸಮೃದ್ಧವೂ ಆದ ಸಾಹಿತ್ಯ ಇರುವ ಭಾಷೆ. ಇಪ್ಪತ್ತು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಲಭ್ಯವಾಗಿರುವ ಕರ್ನಾಟಕದ ಶಾಸನ ಪದ್ಯಗಳು ಕನ್ನಡದ ಪ್ರಾಚೀನತೆ ಮತ್ತು ಸಾಹಿತ್ಯ ಸಂಪತ್ತನ್ನು ಸೂಚಿಸುತ್ತವೆ. ಶಾಸನದ ಅನೇಕ ಪದ್ಯಗಳಲ್ಲಿ ಸಮಕಾಲೀನ ಸಾಮಾಜಿಕ ಮೌಲ್ಯ, ರಾಜಕೀಯ ಮತ್ತು ಧಾರ್ಮಿಕ ಚಿಂತನೆಗಳ ವಿವರಗಳು ವಿಪುಲವಾಗಿ ದೊರೆಯುತ್ತವೆ. ತಮಿಳಿನ ‘ಶಿಲಪ್ಪದಿಕಾರನ್’ ಆದಿಗ್ರಂಥವಾಗಿದ್ದರೆ ಕನ್ನಡದ ಅನೇಕ ಪದಗಳು, ವಾಕ್ಯಗಳು ಈ ಗ್ರಂಥದಲ್ಲಿ ಸಿಕ್ಕಿವೆ ಎಂದು ಸಂಶೋಧಕ ಗೋವಿಂದ ಪೈಯವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಾಚೀನತೆಯ ಕುರಿತು ಸಾಕ್ಷಿ ನೀಡಿದ್ದಾರೆ. ೫ನೆಯ ಶತಮಾನದ ಹಲ್ಮಿಡಿ ಶಾಸನದ ಲಿಖಿತ ಕನ್ನಡ ಮೊದಲು ಉಪಲಬ್ದಿಯಾದರೆ ಬಾದಾಮಿ (ಕ್ರಿ.ಶ. ೭೦೦)ಯ ಶಾಸನದಲ್ಲಿ ಸಿಕ್ಕುವ ತ್ರಿಪದಿ, ಷಟ್ಪದಿಯಲ್ಲಿ ಕಪ್ಪೆ ಅರಿಭಟ್ಟನ ಸ್ವಭಾವ ಚಿತ್ರಣ ಕನ್ನಡ ಸಾಹಿತ್ಯದ ಬೆಳವಣಿಗೆಯ ದಿಕ್ಕನ್ನು ಸೂಚಿಸುತ್ತದೆ. ಕನ್ನಡದ ಕಾಡಿಯೂರಿನ ಪ್ರಸಿದ್ಧ ಅಗ್ರಹಾರ ಒಂದರಲ್ಲಿ ದೊರೆತ ೧೦ನೇ ಶತಮಾನದ ಶಾಸನದಲ್ಲಿ ಒಂದು ಕಂದ ಪದ್ಯವಿದೆ. ‘ವ್ಯಾಕರಣಮರ್ಥಶಾಸ್ತ್ರಾ ನೀಕಂ ಸಾಹಿತ್ಯ ವಿದ್ಯೆಯಿತಿಹಾಸಂಮಕ್ಕೇಕಾಕ್ಷರಮಿನಿತರ್ಪಂ ಟೀಕಂ ಬರೆಯಲ್‌ ಸಮಗ್ರರಭ್ಯಾಸಿಸುವರ್’ ಅಂದರೆ ವ್ಯಾಕರಣ, ಅರ್ಥಶಾಸ್ತ್ರ, ಸಾಹಿತ್ಯವಿದ್ಯೆ, ಇತಿಹಾಸ, ಏಕಾಕ್ಷರ ಮುಂತಾದ ಎಲ್ಲವನ್ನೂ ಅವುಗಳಿಗೆ ಟೀಕೆ ಬರೆಯಲು ಸಮರ್ಥರಾಗುವ ಮಟ್ಟಿಗೆ ಅಲ್ಲಿ ಅಧ್ಯಯನ ನಡೆಯುತ್ತಿದೆ ಎಂದು ಶಾಸನ ಹೇಳುತ್ತದೆ. ಮೊದಲನೆಯ ಸಾವಿರ ವರ್ಷಗಳ ಉತ್ತರಾರ್ಧದಲ್ಲಿ ಸಾಹಿತ್ಯ ಪರಂಪರೆಯ ಅರ್ಥಪೂರ್ಣ ಆರಂಭವಾದುದನ್ನು ನಾವು ಈವರೆಗೆ ದೊರಕಿರುವ ಆಸಗ, ನಾಗವರ್ಮ ಮತ್ತು ‘ಕವಿರಾಜಮಾರ್ಗ’ದ ರಚನೆಕಾರ ಶ್ರೀವಿಜಯ ಅಥವಾ ನೃಪತುಂಗ ಮೊದಲಾದವರ ಗ್ರಂಥಗಳಿಂದ ಗಮನಿಸಬಹುದು. ಈ ಕಾಲಮಾನವನ್ನು ಪಂಪಪರ್ವ ಯುಗವೆಂದು ಇತಿಹಾಸಕಾರರು ಹೇಳಿದ್ಧಾರೆ. ‘ಕವಿರಾಜಮಾರ್ಗ’(೮೨೦) ಅನರ್ಘ್ಯ ಕೃತಿರತ್ನ. ಅದರಲ್ಲಿ ಕಾವ್ಯ ಮೀಮಾಂಸೆಯ ಲಕ್ಷಣ ಪದ್ಯಗಳು ಅನೇಕವಿದ್ದು ಚಿತ್ತಾಣ. ಬೆದಂಡೆ ಮೊದಲಾದ ಕನ್ನಡ ಕಾವ್ಯದ ದೇಸೀ ಪ್ರಕಾರದ ಪ್ರಚಲಿತ ಉದಾಹರಣೆಗಳನ್ನು ಕೊಡಲಾಗಿದೆ. ಅಲ್ಲದೆ ಅಂದಿನ ಕನ್ನಡನಾಡಿನ ವಿಸ್ತಾರ. ಕವಿಗಳ ಹೆಸರು ಕನ್ನಡಿಗರ ಯೋಗ್ಯತೆ ಇತ್ಯಾದಿಗಳನ್ನು ಹೇಳುವ ಪದ್ಯಗಳೂ, ಕವಿರಾಜಮಾರ್ಗದ ಕವಿಯ ಪ್ರತಿಭೆಯನ್ನು ಸೂಚಿಸುತ್ತದೆ.

ಕಾವೇರಿಯಿಂದಮಾ
ಗೊಂದಾವರಿವರಮಿರ್ಪನಾಡದಾ ಕನ್ನಡದೊಳ್
ಭಾವಿಸಿದ ಜನಪದಂ
ವಸುಧಾವಲಯ ವಿಲೀನ
ವಿಶದ ವಿಷಯ ವಿಶೇಷಂ
ಪದನರಿದು ನುಡಿಯಲುಂ ನುಡಿ
ದುದನರಿದು ಆರಲಯಲುಮ್ ಆರ್ಪರಾ ನಾಡವರ್ಗಳ್
ಚದುರರ್ ನಿಜದಿಂದ ಕುರಿತೋ
ದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್

ಕಾವ್ಯದಲ್ಲಿ ದಕ್ಷಿಣೋತ್ತರ ಮಾರ್ಗ, ಪಗರಣ, ಯಕ್ಕಲಗಾನ, ಯತಿ, ಪ್ರಾಸ ಮೊದಲಾದ ವೈವಿಧ್ಯಗಳನ್ನು ವಿವರಿಸುವ ಪದ್ಯಗಳು ‘ಕವಿರಾಜಮಾರ್ಗ’ದ ವಿಶಿಷ್ಠ ಕೊಡುಗೆಯಾಗಿದೆ.

‘ಕವಿರಾಜ ಮಾರ್ಗ’ದ ನಂತರ ಆದರೆ ಪಂಪನಿಗಿಂತ ಮೊದಲ ಒಂದು ವಿಶಿಷ್ಟ ಕೃತಿ ‘ವಡ್ಡಾರಾಧನೆ’, ಶಿವಕೋಟಾಚಾರ್ಯ ಇದರ ಕರ್ತೃ ಎಂದು ‘ಕವಿಚರಿತೆ’ಯಲ್ಲಿ ಹೇಳಿದೆ. ‘ವಡ್ಡಾರಾಧನೆ’ ೧೯ ಜೈನ ಯತಿಗಳ ಕತೆ. ಇವುಗಳನ್ನು ನೀತಿ ಕತೆಗಳೆಂದು ಗಣಿಸಿದರೂ ಈ ಗ್ರಂಥದ ಸಾಹಿತ್ಯಕ ಮಹತ್ವ ಅನನ್ಯವಾಗಿದೆ. ಕನ್ನಡದಲ್ಲಿ ಕಥನ ಶೈಲಿಯ ಬೆಳವಣಿಗೆಯನ್ನು ಈ ಕಥೆಗಳಲ್ಲಿ ಗುರುತಿಸಬಹುದಾಗಿದೆ. ಒಂದೊಂದು ಕಥೆಯೂ ಸ್ವತಂತ್ರವಾಗಿದ್ದು ಸಮಕಾಲೀನ ಮತ್ತು ಹಳೆಗನ್ನಡ ಭಾಷೆಯ ಪರಿಚಯವನ್ನು ಮಾಡಿಕೊಡುತ್ತದೆ. ‘ವಡ್ಡಾರಾಧನೆ’ ತನ್ನ ಕಾಲದ ಸಾಮಾಜಿಕ ವಿಚಾರ, ರಾಜ್ಯಾಡಳಿತ, ವಿದ್ಯಾಭ್ಯಾಸ ಪದ್ಧತಿ ಇತ್ಯಾದಿ ವಿವರಗಳನ್ನು ಕೊಡುವುದರ ಜೊತೆಗೆ ಕರ್ನಾಟಕಕ್ಕೆ ಜೈನಧರ್ಮ ಬಂದುದರ ಬಗೆಗೂ ಬೆಳಕು ಚೆಲ್ಲುತ್ತದೆ.

ರತ್ನತ್ರಯರು-ಪಂಪ, ಪೊನ್ನ. ರನ್ನ : ಪಂಪಭಾರತ, ಗದಾಯುದ್ಧ : ಕನ್ನಡ ಸಾಹಿತ್ಯದ ಭವ್ಯವೂ, ಉಜ್ಜಲವೂ ಆದ ಸಹಸ್ರಮಾನ ಮಹಾಕವಿ (೯೪೦) ಪಂಪನಿಂದ ಆರಂಭವಾಗುತ್ತದೆ. ಪಂಪ ವೆಂಗಿಮಂಡಲದವನು. ಅವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆಯೆಂದು ಅವನ ಪದ್ಯಗಳಿಂದ ತಿಳಿಯುತ್ತದೆ. ರಾಷ್ಟ್ರಕೂಟ ಚಕ್ರವರ್ತಿಯ ಪ್ರಮುಖ ಸಾಮಂತ ಅರಸನಾದ ಅರಿಕೇಸರಿಯ ಶೌರ್ಯ, ವ್ಯಕ್ತಿತ್ವಗಳನ್ನು ಮೆಚ್ಚಿ ಪಂಪ ‘ಕಲಿಯೋ ಸತ್ಕವಿಯೋ ಕವಿತಾಗುಣಾರ್ಣವಂ’ ಆದನು. ಅಂದರೆ ಕಲಿಯೂ ಕವಿಯೂ ಆಗಿ ರಾಜನ ಗೆಳೆತನದ ಋಣವನ್ನು ತೀರಿಸಿದನು.

ಪಂಪನು ರಚಿಸಿದ ಮಹಾಕಾವ್ಯಗಳು ಎರಡು. ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಅಥವಾ ಪಂಪಭಾರತ. ಈ ಎರಡು ಗ್ರಂಥಗಳನ್ನವನು ‘ಒಂದರುತಿಂಗಳೊಳೊಂದು ಮೂರು ತಿಂಗಳೊಳೆ ಸಮಾಪ್ತಿಗೊಳಿಸಿದನ್’, ಕಾವ್ಯದಿಂದ ಏನನ್ನು ಆಸೆ ಗೈಯ್ಯಬೇಕೆಂದು ಪಂಪ ಹೇಳಿದ್ದಾನೆ.

ಕವಿತೆಯೊಳಾಸೆಗೆಯ್ವ ಫಲಮಾವುದೋ ಪೂಜೆ, ನೆಗಳ್ತೆ ಲಾಭಮೆಂಬಿವೆ ವಲಂ…

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪಂಪನನ್ನು ಆದಿಕವಿ ಮತ್ತು ಆದಿ ಮಹಾಕವಿ ಎಂದು ಕರೆಯಲಾಗಿದೆ. ಅವನು ಮೊದಲು ಜೈನಪುರಾಣವನ್ನೊಳಗೊಂಡ ‘ಆದಿಪುರಾಣ’ವನ್ನು ಬರೆದುದರಿಂದ ಆದಿಕವಿಯೆಂದೂ, ಎರಡನೆಯ ಕೃತಿಯಾದ ‘ವಿಕ್ರಮಾರ್ಜುನ ವಿಜಯ’ ವು ಮಹಾಭಾರತದ ಕಥೆಯನ್ನೊಳಗೊಂಡು ಮಹಾಕಾವ್ಯದ ಲಕ್ಷಣ, ಸೂತ್ರಗಳ ಚೌಕಟ್ಟಿನಲ್ಲೆ ರಚನೆಯಾದುದರಿಂದ ಮಹಾಕವಿಯೆಂದೂ ಬಿರುದಾಂಕಿತನಾದನು. ಆದಿಪುರಾಣ ಮಾರ್ಗಕಾವ್ಯ ಅಲೌಕಿಕವಾದ ಸನ್ನಿವೇಶಗಳೊಂದಿಗೆ ಭವ್ಯ ಹಿನ್ನಲೆಯಲ್ಲಿ ರಚನೆಗೊಂಡ ಜೈನಕಾವ್ಯ. ಭರತ ಬಾಹುಬಲಿಯರ ವ್ಯಾಜ್ಯದ ಕಥೆಯು ಅತಿ ರೋಚಕವಾದ ಆದಿ ಪುರಾಣದ ಅಂಶ.

ವಿಕ್ರಮಾರ್ಜುನ ವಿಜಯದಲ್ಲಿ ಪಂಪನು ವ್ಯಾಸಭಾರತದ ಕಥೆಯನ್ನು ಚಂಪೂ ಶೈಲಿಯಲ್ಲಿ ಹೇಳಿದ್ದಾನೆ. ಗದ್ಯ ಪದ್ಯಗಳಿಂದ ಕೂಡಿದ ಚಂಪೂ ಶೈಲಿ ಕನ್ನಡದಲ್ಲೇ ಬಳಕೆಯಲ್ಲಿತ್ತೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ವ್ಯಾಪಕವಾದ ಭಾರತದ ಕಥೆಯನ್ನು ಪಂಪ ‘ಕತೆ’ ಪಿರಿದಾಡೊಡಂ ಕತೆಯ ಮೆಯ್ಗೆಡಲೀಯದೆ ಪೇಳ್ವೆ’ನೆಂದು ಹೇಳಿಕೊಂಡಿದ್ದಾನೆ. ಅವನ ನೈಣ್ಯತೆಯೂ ಇದರಲ್ಲಿ ಮೆರೆಯುತ್ತದೆ. ಅವನು ತನ್ನ ಆಶ್ರಯದಾತನೂ, ಮಿತ್ರನೂ ಆದ ಅರಿಕೇಸರಿಯನ್ನು ಕಾವ್ಯದ ನಾಯಕನನ್ನಾಗಿ ಮಾಡಿ ಮಹಾಭಾರತದ ಅರ್ಜುನನಿಗೆ ‘ತಗುಳ್ಚಿ’ (ಹೋಲಿಸಿ) ವರ್ಣಿಸಿದ್ದಾನೆ. ಪಂಪ ಉದಾತ್ತ ಕವಿ. ಆದುದರಿಂದಲೇ ಕೆಲವು ಪ್ರಮುಖ ಪಾತ್ರಗಳ ಉದಾತ್ತೀಕರಣವನ್ನು ವ್ಯಾಸ ಭಾರತದ ಇಂಗಿತವನ್ನು ಅಂತಃಕರಣದಿಂದ ತಿಳಿದುಕೊಂಡವನಂತೆ ಮಾಡಿದ್ದಾನೆ. ಕರ್ಣ ಭಾರತದ ಕಥೆಯಲ್ಲಿಯೆ ಪಂಪ ಮೆಚ್ಚಿ ನೆಚ್ಚಿಕೊಂಡ ಪಾತ್ರ ಅವನನ್ನು ವರ್ಣಿಸಿದಾಗಲೆಲ್ಲ ಮೈಯೆಲ್ಲ ಮನಸಾಗಿ ಅವನ ಪರವಾಗುತ್ತಾನೆ. ಅವನ ದೃಷ್ಟಿಯಲ್ಲಿ ಕರ್ಣ ಹೆಚ್ಚು ಆಘಾತಗಳಿಗೆ ಒಳಗಾದವನು. ಎಲ್ಲರೂ ಅವನನ್ನು ಹಂತ ಹಂತವಾಗಿ ಸುಲಿದರು. ಅವನು ಜೀವನದಲ್ಲಿ ಏಕಾಕಿಯಾದ. ಮಾನಸಿಕವಾಗಿ ಅಸ್ವಸ್ಥನಾದ. ಶೇಕ್ಸ್‌ಪಿಯರ್‌ನ ಹೆಮಲೆಟ್‌ನಂತೆ `To be or not to be’ ಎಂಬ ದ್ವಂದ್ವದಲ್ಲಿ ಸಿಕ್ಕು ಒಡೆಯನೂ ಸ್ನೇಹಿತನೂ ಆದ ದುರ್ಯೋಧನನ ಕಜ್ಜಕ್ಕಾಗಿ ಪ್ರಾಣ ತ್ಯಾಗ ಮಾಡಿದ.

ಪಂಪ ಹತ್ತನೆಯ ಶತಮಾನದ ಶ್ರೇಷ್ಠ ಕವಿ. ಅವನ ಕಾವ್ಯ ಪ್ರಪಂಚದ ಯಾವುದೇ ಭಾಷೆಯ ಮಹಾಕಾವ್ಯಕ್ಕಿಂತ ಪ್ರತಿಭೆ ಮತ್ತು ಗುಣ ಮೌಲ್ಯದಲ್ಲಿ ಶ್ರೇಷ್ಠವಾಗಿದೆ. ಇಂಗ್ಲೀಷಿನ ಇಲಿಯಡ್, ಯುಲಿಸಿಸ್. ಪೆರಡೈಸ್ ಲೋಸ್ಟ್ ಮಹಾಕಾವ್ಯಗಳ ಸಾಲಿನಲ್ಲಿ ಮಾತ್ರವಲ್ಲ ಒಂದು ಪಂಕ್ತಿ ಮೇಲೆಯೇ ನಿಲ್ಲಬಲ್ಲ ಕಾವ್ಯಗಳನ್ನು ಪಂಪ ಕನ್ನಡಕ್ಕೆ ಕೊಟ್ಟಿದ್ದಾನೆ. ಪಂಪನ ಕಾಲದ ಸಾಹಿತ್ಯವನ್ನು ಸುವರ್ಣಯುಗವೆಂದು ಪರಿಗಣಿಸಿ ಸುಮಾರು ಎರಡು ದಶಮಾನದ ಕಾಲವನ್ನು ಪಂಪಯುಗವೆಂದು ಸಾಹಿತ್ಯಕಾರರು ಪ್ರತಿಪಾದಿಸಿದ್ದಾರೆ. ಮೊದಲಿಗೆ ಬರುವ ಶಂತನು ಮತ್ತು ಸತ್ಯವತಿಯ ಪ್ರಣಯ ಕತೆ ಅತ್ಯಂಥ ರಮ್ಯವೂ. ಒಟ್ಟು ದುರಂಥದ ಮುನ್ಸೂಚನೆಯೂ ಆಗಿದೆ. ಪಂಪನ ಪ್ರತಿಭೆಗೆ ಇದೊಂದು ಅದ್ಭುತ ಉದಾಹರಣೆ.

ಕಾವ್ಯ ಹೇಗಿರಬೇಕೆಂದು ಪಂಪ ಹೇಳುವ ಪದ್ಯ :

ಬಗೆ ಪೊಸತಪ್ಪುದಾಗಿ ಮೃದು ಬಂಧದೊಳೊಂದುವುದೊಂದಿ
ದೇಸಿಯೊಳ್‌ಪುಗುವುದು ಪೊಲ್ಲಮಾರ್ಗದೊಳೆ ತಳ್ವುದು
ತಳ್ತೊಡೆ ಕಾವ್ಯ ಬಂಧಂ ಒಪ್ಪುಗುಂ…
ಕರ್ಣಪಕ್ಷಪಾತಿ ಪಂಪ-ನೆನಯದಿರಣ್ಣ ಭಾರತದೊಳಿಂ

ಪೆರರಾರುಮನೊಂದೆ ಚಿತ್ತದಿ
ನೆನೆವೊಡೆ ಕರ್ಣನಂ ನೆನೆಯ….
ಕರ್ಣನ ಪಡೆಮಾತಿನೊಪ್ಪುದಿದು
ಕರ್ಣರಸಾಯನಮಲ್ತೆ ಭಾರತಂ

ಕರ್ಣ-ಧುರ್ರ್ಯೊಧನರ ಹೊಸ ಹುಟ್ಟು ಪಡೆದಿರುವ ದೃಷ್ಟಿ ಪಂಪನ ಕಾವ್ಯದ ಹೊಸ ಚಿಂತನೆಯೇ ಆಗಿದೆ. ನಾಡೋಜ ಪಂಪ. ಕವಿತಾಗುಣಾರ್ಣವ. ಕವಿಕಾವ್ಯ ಚೂಡಾಮಣಿ ಕನ್ನಡ ಸಾಹಿತ್ಯ ಸಹಸ್ರಮಾನದ ಶ್ರೇಷ್ಠ ಕವಿ. ಅವನ ಸಮಕಾಲೀನರಾಗಿ ಬರುವ ನಂತರದ ಕವಿಗಳಲ್ಲಿ ಪೊನ್ನ (೯೬೦ ಕ್ರಿ.ಶ) ರನ್ನ (ಕ್ರಿ.ಶ. ೯೫೦) ಇವರು ಪ್ರಮುಖರು. ಪೊನ್ನನ ಸುಪ್ರಸಿದ್ಧ ಕಾವ್ಯಗಳು ‘ಭುವನೈಕ ರಾಮಾಭ್ಯುದಯ’ ಮತ್ತು ‘ಶಾಂತಿ ಪುರಾಣ’. ಭುವನೈಕ ರಾಮಾಭ್ಯುದಯ, ಜೈನ ಶ್ರವಣನಾದ ಪೊನ್ನ ಜೈನನಲ್ಲದ ಮೂರನೇ ಕೃಷ್ಣನನ್ನು ರಾಮ ಜೊತೆಯಲ್ಲಿ ಶಾಂತಿನಾಥನನ್ನೂ ಸೇರಿಸಿ ಬರೆದ ಜೈನ ಸಂಪ್ರದಾಯದ ವಿಶಿಷ್ಟ ಕಾವ್ಯ. ಪೊನ್ನ ತನ್ನನ್ನು ಪಂಪನ ಸಮಕ್ಕೆ ಸೇರಿಸಿ ತನ್ನ ಎರಡೂ ಕಾವ್ಯಗಳು ಪಂಪನ ಕಾವ್ಯಗಳಿಗಿಂತ ಕಡಿಮೆಯಿಲ್ಲ ಎಂದು ಹೇಳಿಕೊಂಡಿದ್ದಾನೆ.

ರತ್ನತ್ರಯರಲ್ಲಿ ಮೂರನೆಯ ಕವಿ ರನ್ನ. ಇವನು ರಚಿಸಿದ ಕಾವ್ಯಗಳು ‘ಸಾಹಸ ಭೀಮ ವಿಜಯ’ ಅಥವಾ ‘ಗದಾಯುದ್ಧ’ ಇದು ರನ್ನನ ಭವ್ಯ ಕೃತಿ. ಪಂಪನಿಂದ ಸ್ಫೂರ್ತಿ ಪಡೆದು ರನ್ನನು ಭಾರತದ ಕತೆಯನ್ನೆ ತನ್ನ ಕಾವ್ಯಕ್ಕೆ ವಸ್ತುವನ್ನಾಗಿಸಿದ. ಆದರೆ ಗಾತ್ರದಲ್ಲಿ ಇದು ಕಿರಿಯ ಗ್ರಂಥ. ಇಲ್ಲಿ ತನ್ನ ಆಶ್ರಯದಾತ ರಾಜ ಇರಿವಬೆಡಂಗನನ್ನು ಭೀಮನಿಗೆ ಹೋಲಿಸಿ ಭೀಮ ಪರವಾದ ನಿಲುವನ್ನು ರನ್ನ ತೋರಿಸಿದ್ದಾನೆ. ಭಾರತದ ಕತೆಯನ್ನೆಲ್ಲ ಸಿಂಹಾವಲೋಕನ ಕ್ರಮದಿಂದ ಸಂಕ್ಷಿಪ್ತಗೊಳಿಸಿ ಭೀಮ ದುರ್ಯೋಧನರ ಕೊನೆಯ ಭೀಷಣ ಗದಾಯುಧ್ಧದ ವರ್ಣನೆಗೆ ಮೀಸಲು ಗೊಳಿಸಿದ್ದಾನೆ. ಪಂಪನಂತೆಯೆ ರನ್ನ ಕಾವ್ಯದ ಪ್ರತಿನಾಯಕನಾದ ದುರ್ಯೋಧನನ್ನು ದುರಂತ ನಾಯಕನನ್ನಾಗಿ ಚಿತ್ರಿಸಿ ಕನ್ನಡ ಕಾವ್ಯಕ್ಕೆ ದುರ್ಯೋಧನನ ರೂಪದಲ್ಲಿ ಒಂದು ವಿಶಿಷ್ಟ ಪಾತ್ರವನ್ನು ಕೊಟ್ಟಿದ್ದಾನೆ. ರನ್ನನ ದುರ್ಯೋಧನ ‘ಛಲದಂಕ ಮಲ್ಲ’. ಅವನು ನೆಲಕ್ಕಾಗಿ ಯುದ್ಧ ಮಾಡದೆ ಛಲಕ್ಕಾಗಿ ಯುದ್ಧ ಮಾಡುತ್ತಾನೆ. ‘ನೆಲಕಿರಿವನೆಂದು ಬಗೆದಿರೇಂ ಛಲಕಿರಿವೆಂ’ ಎಂದು ದುರ್ಯೋಧನನ ಮಹೋನ್ನತಿಯನ್ನು ಮೆರೆಯುತ್ತಾನೆ. ರನ್ನ ತನ್ನ ಕಾವ್ಯವನ್ನು ವಿಮರ್ಶಿಸುವವರಿಗೆ ‘ಎಂಟೆರ್ದೆ’ ಬೇಕೆಂದು ಹೇಳಿದ್ದಾನೆ. ಸಾಹಿತ್ಯವನ್ನು ಪ್ರೀತಿಸುವ, ಗೌರವಿಸುವ ರಾಣಿ ಅತ್ತಿಮಬ್ಬೆಯ ಪ್ರೋತ್ಸಾಹ ಬಿರುದುಗಳನ್ನು ರನ್ನ ಪಡೆದ.

ಪಂಪಯುಗವೆನ್ನಲಾದ ಹತ್ತರಿಂದ ಹನ್ನೆರಡನೆಯ ಶತಮಾನದ ಮಧ್ಯ ಕಾಲದವರೆಗೆ ಜೈನಕವಿಗಳು ಕನ್ನಡ ಸಾಹಿತ್ಯವನ್ನು ಬೆಳಗಿಸಿದರು. ಪಂಪ, ರನ್ನ, ಪೊನ್ನ, ಚಾವುಂಡರಾಯ (ಚಾವುಂಡರಾಯ ಪುರಾಣ) ನಾಗಚಂದ್ರ (ಅಭಿನವ ಪಂಪ) ಕಂತಿ ನಯಸೇನ (ಧರ್ಮಾಮೃತ) ಸಮೃದ್ಧ ಕಾವ್ಯದ ರಚನೆಯಾಗಲು ಕಾರಣವಾದರು. ಕನ್ನಡದ ಪ್ರಾಚೀನ ಸಾಹಿತ್ಯಕ್ಕೆ ರಾಜಾಶ್ರಯ ನಿಜವಾಗಿಯೂ ಕನ್ನಡಕ್ಕೆ ಲಭಿಸಿರುವ ವರ.

ಪಂಪರಾಮಾಯಣ :

ತನ್ನನ್ನು ‘ಅಭಿನವ ಪಂಪ’ನೆಂದು ಕರೆದುಕೊಂಡು ನಾಗಚಂದ್ರ ಹನ್ನೆರಡನೆಯ ದಶಕದ ವಿಶಿಷ್ಟ ಪ್ರಕಾರದ ಕವಿ. ಮಲ್ಲಿನಾಥ ಪುರಾಣ ಮತ್ತು ‘ರಾಮಚಂದ್ರ ಚರಿತ ಪುರಾಣ’ ಇದನ್ನು ಪಂಪರಾಮಾಯಣವೆಂದೂ ಹೇಳುತ್ತಾರೆ. ನಾಗಚಂದ್ರ ಪ್ರಮುಖ ಕಾವ್ಯಗಳು ಪಂಪನಂತೆಯೆ ನಾಗಚಂದ್ರನೂ ಎರಡು ಕಾವ್ಯಗಳನ್ನು ಬರೆದ. ಒಂದು ಪುರಾಣ. ಇನ್ನೊಂದು ರಾಮಾಯಣ. ರಾಮಾಯಣವನ್ನು ಜೈನ ಸಂಪ್ರದಾಯಕ್ಕೆ ತಿರುಗಿಸಿ ರಾವಣನನ್ನು ಲೋಕೋತ್ತರ ನಾಯಕನನ್ನಾಗಿ ಚಿತ್ರಿಸಿದ್ದು ನಾಗಚಂದ್ರನ ಅಪೂರ್ವ ಪ್ರತಿಭೆ. ಈ ಕಾವ್ಯದಲ್ಲಿ ರಾವಣ ಉಲೂಪಿಯರ ಕಥನ ಸಂದರ್ಭ ಅತ್ಯಂತ ಸುಂದರ ಕಾಂಡ. ನಾಗಚಂದ್ರ ಅರ್ಥಾಂತರನ್ಯಾಸ ಅಲಂಕಾರಕ್ಕೆ ಧಣಿ. ಉಪಮೆಯೂ ಅವನಲ್ಲಿ ರಮ್ಯ ಕಲ್ಪನೆಯ ಸೊಬಗನ್ನು ಪಡೆದಿದೆ. ಇವನ ಸಮಕಾಲೀನೆಯಾಗಿ ಕಾವ್ಯ ಪ್ರತಿಭೆಯನ್ನು ತೋರಿಸಿ, ನಾಗಚಂದ್ರನಿಂದ ಮೆಚ್ಚುಗೆಯನ್ನು ಗಿಟ್ಟಿಸಿದವಳು ಕಂತಿ. ಆ ಕಾಲದ ಒಬ್ಬಳೇ ಮಹಿಳಾ ಕವಿ. ನಯಸೇನ (೧೧೦೦ ಕ್ರಿ ಶ) ಧಮಾನಮೃತ ಕಾವ್ಯದಿಂದ ಬಹಳ ಪ್ರಸಿದ್ಧನಾದ ಕವಿ. ಕಂತಿ ಹಂಪನ ಸಮಸ್ಯೆಗಳು ಕಂತಿಯ ಸುಪ್ರಸಿದ್ಧ ಕಾವ್ಯ. ‘ಪೊಸಗನ್ನಡದಿಂದ ವ್ಯಾವರ್ಣಿಸುವೆಂ ಸತ್ಕೃತಿಯನ್’ ಎನ್ನುತ್ತ ‘ಬೇಯರೆ ಪರಸ್ತ್ರೀಗಾಸೆಗೆಯ್ದಿರ್ಪವರ್’ ಎಂಬಂಥ ಅನೇಕ ‘ಧರ್ಮಾಮೃತ’ದ ನುಡಿಗಳನ್ನು ಸೂರೆ ಗೊಟ್ಟವನು.

ಅನನ್ಯ ಕಾವ್ಯಛಂದ ವಚನ ಮತ್ತು ರಗಳೆ :

ರಾಜಾಶ್ರಯ, ಚಂಪೂ ಪದ್ಧತಿ. ಜೈನಮತೀಯ ಕವಿಗಳು. ರಾಮಾಯಣ ಮಹಾಭಾರತದ ಕತೆಗಳ ವಿರಳ ವಿನ್ಯಾಸ ಮುಂತಾದವು ಪಂಪಕಾಲೀನ ಸಾಹಿತ್ಯದ ವೈಲಕ್ಷಣವಾದರೆ. ರಾಜಕೀಯ ಅಸ್ಥಿರತೆ, ಸಮಾಜಕ್ರಾಂತಿ, ರಗಳೆ, ವಚನ, ದೇಸೀ ಛಂದಸ್ಸಿನ ಪ್ರಯೋಗಗಳು ಪಂಪನ ನಂತರದ ‘ಬಸವ ಯುಗ’ ಎಂದು ಪ್ರಸಿದ್ಧವಾದ ಕಾಲದ ಸಾಹಿತ್ಯಿಕ ವೈಲಕ್ಷಣಗಳು. ವೀರಶೈವ ಧರ್ಮಕ್ರಾಂತಿಯಂತೆ ಹರಡಿ ಮತಾಂತರ ಮತ್ತು ವೀರಶೈವ ಮತದ ಸ್ಥಾಪನೆಯಲ್ಲಿ ಪರ್ಯವಸಾನಗೊಂಡಿತು. ಜೊತೆಯಲ್ಲಿ ಸಮಾಜ ಸುಧಾರಣೆಯ ಉತ್ಸಾಹದಿಂದ ವಚನ ಸಾಹಿತ್ಯವೆಂಬ ಗದ್ಯ ಪದ್ಯ ಕಾವ್ಯದ ಪ್ರಕಾರವೊಂದು ಪ್ರಚಾರಕ್ಕೆ ಬಂದಿತು. ದಾಸಿಮಯ್ಯನಿಂದ ಸರಳವಾಗಿ ಶರಣರ ಇತಿ ಮಿತಿ. ಶಿವ ಶಿವಲಿಂಗ ಜ್ಞಾನವನ್ನು ಹರಡುವ ನಿಟ್ಟಿನಲ್ಲಿ ವಚನಗಳು ಹೊರಟು, ಬಸವಣ್ಣ ಅಕ್ಕಮಹಾದೇವಿಯವರ ನುಡಿಗಳಲ್ಲಿ ಪ್ರಬುದ್ಧತೆಯನ್ನು ಪಡೆಯಿತು. ಅಲ್ಲಮಪ್ರಭು, ಸಿದ್ಧರಾಮ ಶೈವ ಸಿದ್ಧಾಂತದ ಬಿಕ್ಕಟ್ಟುಗಳನ್ನು ಬಿಡಿಸಲು ತಾತ್ವಿಕವಾಗಿ ಚಿಂತನೆ ಮಾಡಿದರು. ಅಲ್ಲಮ (ಪ್ತಭುದೇವ)ನ ಶೂನ್ಯ ಸಂಪಾದನೆ, ತಾತ್ವಿಕ ನೆಲೆಯಲ್ಲಿ ಅತ್ಯಂತ ಗಂಭೀರ ರಚನೆ.

ಹರಿಹರ ಬಸವದೇವ ರಗಳೆ. ನಂಬಿಯಣ್ಣನ ರಗಳೆ, ಅಕ್ಕಮಹಾದೇವಿ ರಗಳೆ ಮುಂತಾದ ಕೃತಿಗಳಲ್ಲಿ ಶಿವಶರಣರ ಭಕ್ತಿ ನಿಷ್ಠೆಯನ್ನು ನಿರ್ದೇಶಿಸಿ, ಶಿವಗುಣಗಾನವನ್ನು ಪರಮಧರ್ಮವೆಂದು ಸಾರಿದನು. ರಗಳೆಯ ಹಲವಾರು ಕಾವ್ಯಗಳನ್ನು ರಚಿಸಿ ರಗಳೆಯ ಕವಿಯೆಂದು ಪ್ರಸಿದ್ಧನಾದನು. ವಚನವನ್ನು ಬಸವಣ್ಣ, ಅಕ್ಕಮಹಾದೇವಿ ಮುಂತಾದವರು ಕನ್ನಡ ಛಂದಸ್ಸಿನ ಒಂದು ವಿಶಿಷ್ಟ ಪ್ರಕಾರವನ್ನಾಗಿ ಪ್ರಸಿದ್ಧಗೊಳಿಸಿದರೆ. ಹರಿಹರ ರಗಳೆ ಎಂಬ ಛಂದೋಪ್ರಯೋಗವನ್ನು ಜನಪ್ರಿಯಗೊಳಿಸಿದ. ಶೈವ ಮತ ಪ್ರಚಾರ ಮತ್ತು ಶಿವಶರಣರ ಭಕ್ತಿಯ ಕೋಡನ್ನು (Code) ನೀತಿ ಯನ್ನು ಮನದಟ್ಟು ಮಾಡುವುದು ಈ ಪ್ರಯೋಗದ ಮುಖ್ಯ ಉದ್ದೇಶವಾಗಿತ್ತು.

ಬಸವಣ್ಣ, ಶಿವ ಮತ್ತು ಲಿಂಗಗಳ ಅಭೇದವನ್ನು ತಿಳಿಸಿ, ವಚನಗಳನ್ನು ಜೀವನ ಮೌಲ್ಯ, ಭಕ್ತಿ, ನಿಷ್ಠೆ ಸಮಾಜ ಸುಧಾರಣೆ ಮೊದಲಾದ ಕ್ರಾಂತಿಯ ವಿಷಯಗಳನ್ನು ತಿಳಿಸಲಿಕ್ಕಾಗಿ ಉಪಯೋಗಿಸಿದನು. ಬಿಜ್ಜಳನ ಆಸ್ಥಾನದಲ್ಲಿ ಅರ್ಥಮಂತ್ರಿಯಾಗಿದ್ದು ಕಲ್ಯಾಣದ ಕ್ರಾಂತಿಗೆ ಕಾರಣನಾದನು. ಈ ಕಾರಸ್ಥಾನವನ್ನೆ ಆಧಾರವಾಗಿಟ್ಟುಕೊಂಡು ಅನೇಕ ಕತೆ, ಕಾದಂಬರಿ, ನಾಟಕಗಳು ಆಧುನಿಕ ಕನ್ನಡದಲ್ಲಿ ಸೃಷ್ಟಿಯಾದವು. ಅವುಗಳಲ್ಲಿ ಗಿರೀಶ ಕಾರ್ನಾಡರ ತಲೆದಂಡ ನಾಟಕ. ಪಿ.ವಿ.ನಾರಾಯಣರ ಧರ್ಮಕಾರಣ ಕಾದಂಬರಿ. ಬಸವಕಲ್ಯಾಣ. ಕ್ರಾಂತಿ ಕಲ್ಯಾಣ, ಲಂಕೇಶರ ಸಂಕ್ರಾಂತಿ ಮತ್ತು ಶಿವಪ್ರಕಾಶರ ಮಹಾಚೈತ್ಯ ಅತ್ಯಂತ ಪ್ರಭಾವಶಾಲೀ ಸೃಜನಶೀಲ ಕೃತಿ ರಚನೆಗಳು. ಬಸವಣ್ಣನ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ. ಇದೇ ಬಹಿರಂಗ ಶುದ್ಧಿ…

‘ಕಾಯಕವೇ ಕೈಲಾಸ. ಮನವೆಂಬುದು ಮರ್ಕಟವಯ್ಯ. ನೀನೂಲಿದರೆ ಕೊರಡು ಕೊನರುವುದಯ್ಯ’

– ಎಂಬ ಅಸಂಖ್ಯ ಉಕ್ತಿಗಳು ಅಂದಿನ ಜೀವನದ ಸತ್ವವಾಗಿ ಮುಂದಕ್ಕೂ ಉಳಿಯುವಂಥವು ಆಗಿವೆ. ಭಾರತೀಯ ಚಿಂತನದಲ್ಲಿ ಬಸವೇಶ್ವರನ ಸ್ಥಾನಮಾನ ವಿಶಿಷ್ಟವಾಗಿವೆ.

ಪುರುಷ ಪ್ರಧಾನ ಸಮಾಜ ಮತ್ತು ಅದರ ಕಟ್ಟಳೆಗಳನ್ನು ನಿರ್ಭಿಡೆಯಾಗಿ ವಿರೋಧಿಸಿ; ಒಂದು ಬಗೆಯ ಬಂಡನ್ನೇ ಹೂಡಿದ ಶ್ರೇಯಸ್ಸು ಅಕ್ಕಮಹಾದೇವಿಯದ್ದು. ‘ಊರ ಸೀರೆಗೆ ಅಸಗಬಡಗೊಂಬಂತೆ ಹೊನ್ನೆನ್ನದು. ಹೆಣ್ಣೆನ್ನದು ಎಂದು ನೆನೆನೆನೆದು ಕೆಟ್ಟಂತೆ, ಪುರುಷನ ಮುಂದೆ ಸ್ತ್ರೀಯೆಂಬ ಮಾಯೆ. ಸ್ತ್ರೀಯ ಮುಂದೆ ಪುರುಷನೆಂಬ ಮಾಯೆ ಅಭಿಮಾನವಾಗಿ ಕಾಡಿತ್ತು’. ಎಂಬ ಮಹಾದೇವಿ ಗಂಡನ ಭ್ರಷ್ಟತೆಯನ್ನು ತೊರೆದು ಶಿವನನ್ನೇ ಪತಿಯನ್ನಾಗಿ ಸ್ವೀಕರಿಸಿ ಶಿವ ಮತ್ತು ಶರಣರ ನಡುವೆ ‘ಸತಿಪತಿ’ ಭಾವದ ಸೇತುವೆಯನ್ನೇ ನಿರ್ಮಿಸಿದಳು. ಇವಳ ಚಳವಳಿಯಿಂದ ಪ್ರೇರಣೆ ಪಡೆದು ಆ ಸಮಯದ ದೀನ, ದಲಿತ, ನೀಚ ಕುಲದ ಸುಮಾರು ೩೬ರಷ್ಟು ಮಹಿಳೆಯರು ಪ್ರತಿಭಟನೆಯ ವಚನಗಳನ್ನುರಚಿಸಿದರು.

ವಾರ್ಧಕ ಷಟ್ಟದಿಯನ್ನು ಒಂದು ಸಂಪೂರ್ಣ ಕಾವ್ಯ ರಚನೆಗೆ ಉಪಯೋಗಿಸಿದ ಶ್ರೇಯ ರಾಘವಾಂಕನಿಗೆ ಸಲ್ಲುತ್ತದೆ. ಅವನು ‘ಹರನೆ ಸತ್ಯ, ಸತ್ಯವೆ ಹರ’ ಎಂಬ ಸಿದ್ಧಾಂತವನ್ನು ಶೈವ ಮತದ ನಿಷ್ಣುರ ನಿಯಮದ ವಿರುದ್ಧ ಪ್ರಯೋಗಿಸಿ, ಸತ್ಯಕ್ಕಾಗಿ ತನ್ನ ಸರ್ವಸ್ವವನ್ನೂ ಕಳಕೊಂಡು ಸ್ಮಶಾನದಲ್ಲಿ ಹೆಣ ಸುಡುವ ಕೆಲಸವನ್ನು ಕೈಕೊಂಡ ರಾಜಾ ಹರಿಶ್ಚಂದ್ರನ ಕರುಣ ಕಥೆಯನ್ನು ಹೇಳುವ ‘ಹರಿಶ್ಚಂದ್ರ ಕಾವ್ಯ’ ವನ್ನು ರಚಿಸಿದನು.

ಈ ಕಾಲಮಾನದಲ್ಲಿ ಒಬ್ಬನೇ ಪ್ರಸಿದ್ದ ಕವಿ ಜೈನ ಕವಿ ಜನ್ನ. ಅವನು ‘ಯಶೋಧರ ಚರಿತೆ’ಯನ್ನು ಬರೆದ. ಅಮೃತಮತಿಯ ನಿಷ್ಕೃಹ ಕಾಮ ಸಂಬಂಧ ಕುರೂಪಿ ಅಷ್ಟಾವಂಕನ ಜೊತೆಯಲ್ಲಿ. ಜೈನ ಚಿಂತನೆಗೆಯೇ ಸವಾಲಾಗಿ, ಕನ್ನಡದ ಅನನ್ಯ ಕೃತಿಯಾಗಿ ಈ ಕಾವ್ಯ ಉಳಿಯಿತು.

ಈ ಸಮಯದ ಇನ್ನೊಬ್ಬ ಜೈನ ಕವಿ ಅಂಡಯ್ಯ. ಕಾವ್ಯವನ್ನು ಶುದ್ಧ ಕನ್ನಡದಲ್ಲಿಯೇ ಬರೆಯಬೇಕೆಂದು ವಾದಿಸಿ. ‘ಕಬ್ಬಿಗರ ಕಾವ’ದ ಪ್ರಯೋಗ ಮಾಡಿದನು. ಲಾಕ್ಷಣಿಕ ಕೇಶೀರಾಜನ ‘ಶಬ್ದಮಣಿ ದರ್ಪಣ’ ಕನ್ನಡದಲ್ಲಿ ಅನುಪಮ ಗ್ರಂಥ. ಕಾವ್ಯದ ವ್ಯಾಕರಣವನ್ನು ಇಷ್ಟೊಂದು ವಿಸ್ತ್ರತ, ಚಿಕಿತ್ಸಕ ದೃಷ್ಟಿಯಿಂದ ಅಧ್ಯಯನ ಮಾಡಿ ಬರೆದ ಕೃತಿ ಕನ್ನಡ ಸಾಹಿತ್ಯ ಸಹಸ್ರಮಾನದ ಅಪರೂಪದ ಘಟನೆ. ಹಾಗೆಯೆ ನಾಗವರ್ಮನ ‘ಕಾವ್ಯಾವಲೋಕನ’.

ಗದಗಿನ ಭಾರತ ಹತ್ತು ಪರ್ವಗಳ ಒಂದು ಮೇರು ಕೃತಿ. ಕೃತಿಕಾರ ಕುಮಾರವ್ಯಾಸನ ಹೆಸರಿನಲ್ಲಿ ಇದು ಕುಮಾರವ್ಯಾಸ ಭಾರತವೆಂದೇ ಪ್ರಸಿದ್ಧವಾಗಿದೆ. ಗದಗಿನ ವೀರನಾರಾಯಣ ಅಂದರೆ ಕೃಷ್ಣನೇ ಕುಮಾರವ್ಯಾಸನ ನಾಲಗೆಯಲ್ಲಿ ನೆಲೆಸಿ ಈ ಕೃತಿಯನ್ನು ಬರೆಸಿದನೆಂದು ಅದರಿಂದಾಗಿ ಇದು ಕೃಷ್ಣ ಕಥೆ ಎಂದು ಕುಮಾರವ್ಯಾಸ ಹೇಳಿಕೊಂಡಿದ್ದಾನೆ. ಪಂಪಭಾರತದ ವರ್ಚಸ್ಸು ಕುಮಾರವ್ಯಾಸ ಭಾರತಕ್ಕೆ ಸಾಕಷ್ಟು ಆಗಿದೆ. ಕರ್ಣ, ದುರ್ರ್ಯೊಧನರ ಪಾತ್ರಗಳಲ್ಲಿ ಒಡಮೂಡಿರುವ ಮಾನವೀಯ ದೃಷ್ಟಿ ಕುಮಾರವ್ಯಾಸನ ಸ್ವತಂತ್ರ ದೃಷ್ಟಿ. ಭಾಮಿನಿ ಎಂಬ ಷಟ್ಪದಿಯಲ್ಲಿ ಇಡೀ ಕಾವ್ಯ ರಚನೆಯಾಗಿದ್ದು. ದೇಶೀ ಸೊಗಸು ಕಾವ್ಯದ ಅಳಿಯದ ಮೆರಗಾಗಿದೆ. ಇದರ ಸೌರಭ ಕರ್ನಾಟಕದಲ್ಲಿ ಹರಡಿ ಎಲ್ಲ ಸಹೃದಯರ ಮನಸ್ಸಿನಲ್ಲಿ ನೆಲೆನಿಂತಿದೆ. ಇವನ ಸಮಕಾಲೀನ ವೀರಶೈವ ಕವಿ ಚಾಮರಸನೂ ಭಾಮಿನಿ ಷಟ್ಟದಿಯಲ್ಲಿ ‘ಪ್ರಭುಲಿಂಗಲೀಲೆ’ಯನ್ನು ರಚಿಸಿದ. ಅಲ್ಲಮಪ್ರಭು ಸಾತ್ವಿಕ ಶಿವನ ರೂಪ. ಭಕ್ತಾದಿಗಳ ಅಹಂಕಾರ, ಅಭಿಮಾನಗಳನ್ನು ಹೋಗಲಾಡಿಸಿ ಶಿವಮಹಿಮೆಯ ಅರಿವನ್ನು ಸಾರುವ ಕಾವ್ಯ ಬರೆದ. ಭಾಗವತ ಸಂಪ್ರದಾಯದ ಮತ್ತೊಬ್ಬ ಕವಿ ಕುಮಾರ ವಾಲ್ಮೀಕಿ. ನಾರಣಪ್ಪನಂತೆ ಇವನೂ ಭಾಮಿನಿ ಷಟ್ಪದಿಯಲ್ಲಿ ತೊರವೆ ರಾಮಾಯಣವನ್ನು ಬರೆದ.

ಲಕ್ಷ್ಮೀಶ, ರತ್ನಾಕರವರ್ಣಿ, ಮುದ್ದಣ : ಲಕ್ಷ್ಮೀಶನ ಜೈಮಿನಿ ಭಾರತ (೧೫೫೦) ವಾರ್ಧಕ ಷಟ್ಪದಿಯಲ್ಲಿ ಉತ್ತರ ರಾಮಾಯಣದ ಕಥೆಯನ್ನು ಬಣ್ಣಿಸುವ ಕಾವ್ಯ. ಲಕ್ಷ್ಮೀಶ ಉಪಮಾಲೋಲ. ಮಹಾಭಾರತದ ವೀರಾಗ್ರಣಿಗಳನ್ನು ಸಂದರ್ಭೋಚಿತವಾಗಿ ಉತ್ತರ ರಾಮ ಕಥೆಯೊಂದಿಗೆ ಹೊಂದಿಸಿಕೊಳ್ಳುವ ಚಾತುರ್ಯ ಲಕ್ಷ್ಮೀಶನ ಹೊಸ ಪ್ರಯತ್ನ. ವೀರವೇ ಜೈಮಿನಿ ಭಾರತದ ಪ್ರಧಾನ ರಸ. ಲಕ್ಷ್ಮೀಶನ ಸಮಕಾಲೀಕನಾಗಿ ಜೈನಕವಿ ರತ್ನಾಕರವರ್ಣಿ ಸಾಂಗತ್ಯವನ್ನು ‘ಭರತೇಶ ವೈಭವ’ ಕಾವ್ಯದಲ್ಲಿ ಭವ್ಯವಾಗಿ ಮೂಡಿಸಿದ್ದಾನೆ. ಭರತೇಶ-ಬಾಹುಬಲಿಯರ ಮುಖಾಮುಖಿಯ ಪ್ರಸಂಗ ಕಾವ್ಯದ ಅತ್ಯಂತ ಆಕರ್ಷಕ ಭಾಗ. ಭರತೇಶನ ಪಾತ್ರ ರಚನೆಯಲ್ಲಿ ರತ್ನಾಕರವರ್ಣಿ ತೋರಿದ ಪ್ರತಿಭೆ ಮತು ಸಂಯಮ ಉತೃಷ್ಟವಾದುದಾಗಿದೆ.

ಕನ್ನಡ ಸಾಹಿತ್ಯದ ದೀರ್ಘ ಇತಿಹಾಸದಲ್ಲಿ ಮಹಾದೇವಿಯಕ್ಕನ ನಂತರ ಜನಪ್ರಿಯವಾದ ಹೆಸರು ಸಂಚಿಯ ಹೊನ್ನಮ್ಮನದು. ಅವಳು ಸಾಂಗತ್ಯ ಛಂದದಲ್ಲಿ ‘ಹದಿಬದೆಯ ಧರ್ಮ’ ಎಂಬ ಗ್ರಂಥವನ್ನು ರಚಿಸಿದ್ದಾಳೆ. ಅವಳು ಒಡೆಯರ ಚಿಕ್ಕದೇವ ರಾಜನ ಆಶ್ರಯದಲ್ಲಿ ರಾಣಿಯ ಸೇವಕಿಯಾಗಿದ್ದಳು. ಸ್ತ್ರೀಯ ಆತ್ಮಗೌರವವನ್ನು ಆದರಿಸಿ ವಿವರಿಸುವ ಈ ಕಾವ್ಯ ಅಪರೂಪದ ರಚನೆ ‘ಎಲ್ಲರಲಿ ಒಂದೊಂದು ನುಡಿ ಕಲಿತು ವಿದ್ಯದ ಪರ್ವತವೇ ಆದ ಸರ್ವಜ್ಞ’(೧೭೦೦) ಕನ್ನಡದ ಅಲೆಮಾರಿ ಕವಿ. ಅವನ ವಚನಗಳಲ್ಲಿ ಜೀವನಾನುಭವ ಬಗೆಬಗೆಯಾಗಿ ವ್ಯಕ್ತವಾಗುತ್ತದೆ.

ಮೈಸೂರಿನ ಒಡೆಯರ ಕಾಲದಲ್ಲಿ ಗೋವಿಂದ ವೈದ್ಯ, ತಿರುಮಲಾರ್ಯ, ಸಿಂಗರಾರ್ಯ, ಕೆಂಪು ನಾರಾಯಣ ಮೊದಲಾದ ಕವಿಗಳು ಕಾವ್ಯ ರಚನೆಯನ್ನು ಮಾಡಿದ್ದಾರೆ. ಹಳೆಗನ್ನಡ ಮತ್ತು ಹೊಸಗನ್ನಡಕ್ಕೆ ಹಾಗೂ ಹಳೆಯ ಮತ್ತು ಹೊಸ ಕಾವ್ಯ ಪರಂಪರೆಗೆ ಸೇತುವೆಯಾಗಿ. ಕೊಂಡಿಯಾಗಿ ೧೯ನೆಯ ಶತಮಾನದ ಕೊನೆಯಲ್ಲಿ ಮುದ್ದಣ (ನಂದಳಿಕೆ ಲಕ್ಷ್ಮೀನಾರಯಣಪ್ಪ) ಅದ್ಭುತ ಕಾರ್ಯ ಮಾಡಿದ. ಅದ್ಭುತ ರಾಮಾಯಣ, ರಾಮಪಟ್ಟಾಭಿಷೇಕ ಮತ್ತು ರಾಮಾಶ್ವಮೇಧ ಅವನು ತನ್ನ ಅಲ್ಪಾಯುಷ್ಯದಲ್ಲಿ ರಚಿಸಿದ ಕೃತಿಗಳು. ರಾಮಾಶ್ವಮೇಧ ಅಧಿಕ ಮೌಲಿಕವೂ ಪ್ರಯೋಗಶೀಲವೂ ಆದ ಜನಪ್ರಿಯ ಗದ್ಯಕಾವ್ಯ. ‘ಪದ್ಯಂ ವಧ್ಯಂ ಗದ್ಯಂ ಹೃದ್ಯಂ’ ಎಂಬ ಸೂತ್ರದೊಂದಿಗೆ ‘ಹೃದ್ಯಮಪ್ಪ ಗದ್ಯದೊಳೆ’ ಕಾವ್ಯವನ್ನು ಹೇಳಿದನು. ‘ಕರಿಮಣಿಯೊಳ್ ಚೆಂಬವಳಮಂ ಕೋದಂತಿರೆ’ ಅಲ್ಲಲ್ಲಿ ಸಂಸ್ಕೃತದ ಪದಗಳನ್ನು ಹಾಕಿ ಕಾವ್ಯ ರಚಿಸಬೇಕೆಂದು ಅವನು ಹೇಳಿದನು. ‘ಎಲೆಲೆ! ಕಾಲ ಪುರುಷಂಗೆ ಗುಣಮಣಂ ಇಲ್ಲಂಗಡ…’ ಎಂದು ವರ್ಷಾಕಾಲವನ್ನು ವರ್ಣಿಸಿ ಕಥಾರಂಭ ಮಾಡಿರುವುದು ಒಂದು ಅನಿರೀಕ್ಷಿತ ಪ್ರಯೋಗ. ಲಕ್ಷ್ಮೀಶನ ಸೀತಾಪರಿತ್ಯಾಗದ ಸೀತೆಯ ಕರುಣ ಕತೆಯನ್ನು ರಾಮಾಶ್ವಮೇಧದಲ್ಲಿ ಬಣ್ಣಿಸಲಾಗಿದೆ. ಮುದ್ದಣ-ಮನೋರಮೆಯರ ಸರಸ ಸಲ್ಲಾಪ ಕೃತಿಯ ಸುವರ್ಣದ ಚೌಕಟ್ಟು. ಕನ್ನಡ ಸಾಹಿತ್ಯದ ಸಂಧಿಕಾಲದಲ್ಲಿ ಶುಭ್ರವಾಗಿ ಮಿನುಗುವ ಒಂಟಿತಾರೆ ಮುದ್ದಣ.

ದಾಸವಾಙ್ಮಯ : ದಾಸ ವಾಙ್ಮಯ ಕನ್ನಡ ಸಾಹಿತ್ಯದ ಒಂದು ವಿಶೇಷ ಪ್ರಕಾರ. ಇದನ್ನು ಸಂತ ಸಾಹಿತ್ಯವೆನ್ನಲಾಗುವುದಿಲ್ಲ. ಇದು ಬ್ರಾಹ್ಮಣ ಕವಿ ಭಕ್ತರಿಂದ ರಚಿತವಾದ ಕೀರ್ತನ. ಸುಳಾದಿ. ಉಪಭೋಗ ಮತ್ತು ಹಾಡುಗಳ ಪ್ರಕಾರ. ಪುರಂದರದಾಸ, ಕನಕದಾಸ, ವ್ಯಾಸರಾಯ ಮೊದಲಾದ ಕೀರ್ತನಕಾರರು ದಾಸ ಸಾಹಿತ್ಯವನ್ನು ಬೆಳೆಸಿದರು. ಇದು ಹೆಚ್ಚಾಗಿ ಅಧ್ಯಾತ್ಮಿಕ ನೆಲೆಯಲ್ಲಿ ರಚಿತವಾಗಿದ್ದು ದೇವರು ಮತ್ತು ಭಕ್ತನ ಸಂಬಂಧವನ್ನು ಆಧ್ಯಾತ್ಮಿಕವಾಗಿ ಪರಿಕಲ್ಪಿಸುವ ಸಂಪ್ರದಾಯದಲ್ಲಿದೆ. ಇವರಲ್ಲಿ ಪುರಂದರದಾಸರು ಮತ್ತವರ ಹಾಡುಗಳು ತುಂಬ ಜನಪ್ರಿಯವಾಗಿವೆ. ಕನಕದಾಸ ಹೆಚ್ಚಿನ ಪ್ರತಿಭೆಯ ಕವಿ. ಅವನು ಹೀನಕುಲದವನಾದರೂ ಕೃಷ್ಣ ಭಕ್ತಿಯ ಪರಮಾವಧಿಯನ್ನು ಮುಟ್ಟಿದವನು. ಅವನು ರಚಿಸಿದ ನಳಚರಿತೆ, ಮೋಹನ ತರಂಗಿಣಿ, ಹರಿಭಕ್ತಿಸಾರ ಮತ್ತು ರಾಮದಾನ್ಯ ಕಾವ್ಯ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಘನತೆಯ ಕೃತಿಗಳು.

ಪ್ರಶಸ್ತಿ ಪುರಸ್ಕಾರಗಳ ಸುವರ್ಣಕಾಲ:

ಸಹಸ್ರಮಾನದ ಮೊದಲ ಶತಮಾನಗಳಲ್ಲಿ ಪಂಪಯುಗ ಕನ್ನಡ ಸಾಹಿತ್ಯದ ಸುವರ್ಣ ಕಾಲವೆಂದು ದಾಖಲೆಯಾಗಿದ್ದರೆ ಕೊನೆಯ ಶತಮಾನದ (ಅಂದರೆ ೧೯೨೦ರ ಈಚೆಗೆ ೨೦೦೦ದವರೆಗಿನ) ಕಾಲವನ್ನು ಎರಡನೆಯ ಸುವರ್ಣಯುಗವೆಂದು ದಾಖಲಿಸಬಹುದು. ೧೯೨೦ರಿಂದ ಕನ್ನಡ ಸಾಹಿತ್ಯದ ನವೋದಯವಾಯಿತು. ೧೯೪೫ರವರೆಗೆ ಸಾಹಿತ್ಯದ ಹೊಸ ಹೊಸ ಶೋಧಗಳು ಬೆಳಕಿಗೆ ಬಂದವು. ಆಂಗ್ಲ ಸಾಹಿತ್ಯದ ಪ್ರೇರಣೆಯಿಂದ ಗದ್ಯ, ಕಾವ್ಯ, ನಾಟಕ, ವಿಮರ್ಶೆಯ ಪ್ರಕಾರಗಳಲ್ಲಿ ಪ್ರಯೋಗ ನಡೆಯಿತು. ಬಿ.ಎಂ.ಶ್ರೀಯವರ ಇಂಗ್ಲೀಷ್ ಗೀತೆ, ಕಾವ್ಯರಚನೆಗೆ ಹೊಸ ಮಾರ್ಗವನ್ನು ಮೂಡಿಸಿತು. ತಿ.ನಂ.ಶ್ರೀ. ಗೋಕಾಕ, ಅನಕೃ. ಶಿವರಾಮ ಕಾರಂತ, ಬೇಂದ್ರೆ, ಮುಗುಳಿ, ಪು.ತಿ.ನ. ಮಾಸ್ತಿ ಅಯ್ಯಂಗಾರ್ ಮುಂತಾದ ಪ್ರತಿಭಾವಂತರು ಕನ್ನಡ ಸಾಹಿತ್ಯ ಮುನ್ನಡೆಯಬೇಕಾದ ಮಾರ್ಗವನ್ನು ಸೂಚಿಸಿದರು. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಸಾಹಿತ್ಯ ಪ್ರಗತಿಶೀಲವಾಯಿತು. ಕನ್ನಡವೂ ಹಿಂದುಳಿಯದೆ ಮಾರ್ಕ್ಸ್, ಲೋಹಿಯಾ, ರೋಯ, ಮಾವೊ ಮುಂತಾದ ಸಮಾಜ ಚಿಂತಕರ ವರ್ಚಸ್ಸಿಗೆ ಒಳಗಾಯಿತು. ಈ ಹಿನ್ನಲೆಯಲ್ಲಿ ಕಾವ್ಯ, ಕಾದಂಬರಿ. ಕಥೆ, ವಿಮರ್ಶೆ, ನಾಟಕಗಳು ಭರದಿಂದ ಪ್ರಕಟವಾದವು. ಅನಕೃ ಕಾದಂಬರಿ ಸಾಮ್ರಾಟರಾದರು. ಕಾರಂತ ಕಾದಂಬರಿ, ಚಿಂತನ ಕೃತಿಗಳನ್ನು ರಚಿಸಿದರು. ನಿರಂಜನ, ತರಾಸು, ಕೃಷ್ಣಮೂರ್ತಿ ಪುರಾಣಿಕ, ತ್ರಿವೇಣಿ, ಬಸವರಾಜ ಕಟ್ಟೀಮನಿ ಅನಕೃ ಶೈಲಿಯಲ್ಲಿ ಉತ್ತಮ ಕತೆ ಕಾದಂಬರಿಗಳನ್ನು ಬರೆದು ಜನಪ್ರಿಯರಾದರು. ಬೇಂದ್ರೆ ಅಡಿಗರು ಕಾವ್ಯ, ಗೋಕಾಕ, ಮುಗುಳಿ, ವಿಚಾರ ಸಾಹಿತ್ಯದೊಂದಿಗೆ ಕಾವ್ಯ, ಕತೆ, ಕಾದಂಬರಿಗಳನ್ನು ರಚಿಸಿದರು. ಕನ್ನಡ ಸಾಹಿತ್ಯ ಜನಪ್ರಿಯತೆಯನ್ನು ಪಡೆದು ಸರಿಯಾದ ಒಂದು ಸ್ವರೂಪ ಮತ್ತು ದಿಶೆಯನ್ನು ಪಡೆಯಿತು. ಸಾಮಾಜಿಕ, ಚಿಂತನೆ, ಕಳಕಳಿ, ಪ್ರಗತಿಸೀಲ ಲೇಖಕರ ಅಂತರಂಗವಾಗಿ ಪ್ರಕಟವಾಯಿತು.

ಇವರ ನಂತರ ಪುನಃ ಆಂಗ್ಲ ಸಾಹಿತ್ಯಾಭ್ಯಾಸದ ವರ್ಚಸ್ಸಿನಿಂದ ಕನ್ನಡ ಸಾಹಿತ್ಯದಲ್ಲಿ ‘ನವ್ಯ’ದ ಅಲೆಯೊಂದು ಭರದಿಂದ ಹರಿಯಿತು. ಈಗಲೂ ಕಾದಂಬರಿ, ಕತೆಗಳನ್ನು ಅನಂತಮೂರ್ತಿ, ಲಂಕೇಶ್, ಶಾಂತಿನಾಥ್ ದೇಸಾಯಿ, ಆಲನಹಳ್ಳಿ. ಚಿತ್ತಾಲ, ವ್ಯಾಸರಾಯ ಬಲ್ಲಾಳ, ತೇಜಸ್ವಿ ಮುಂತಾದವರು ಬರೆದು ಮಾನ್ಯತೆಯನ್ನು ಪಡೆದರು. ನವ್ಯ ಧೋರಣೆಯ ಕಾವ್ಯ ಶಿವರುದ್ರಪ್ಪ, ಅರವಿಂದ ನಾಡಕರ್ಣಿ, ಚಂಪಾ, ಸುಮತೀಂದ್ರ ನಾಡಿಗ ಮೊದಲಾದವರ ಕೈಯಲ್ಲಿ ಪಳಗಿತು. ಯಾವುದೇ ಪರಕೀಯ ವರ್ಚಸ್ಸಿಗೆ ಒಳಗಾಗದೆ ಬೇಂದ್ರೆ, ಕುವೆಂಪು. ಅಡಿಗ, ಕಣವಿ, ಸನದಿ, ಕಾರಂತ, ಗೋಕಾಕ, ಮಾಸ್ತಿ ಮುಂತಾದ ಗಣ್ಯರು ಸಾಹಿತ್ಯದ ಘನತೆಯನ್ನು ವೃದ್ಧಿಸುತ್ತಾ ಬಂದರು. ಭೈರಪ್ಪ, ಕಾದಂಬರಿಯನ್ನು ಭಾರತೀಯ ಇತರ ಭಾಷಿಕ ಓದುಗರವರೆಗೂ ಮುಟ್ಟಿದರು. ಕಂಬಾರ, ಗಿರೀಶ ಕಾರ್ನಾಡ, ಲಂಕೇಶ, ಸುಬ್ಬಣ್ಣ, ಶಿವಪ್ರಕಾಶ ಕನ್ನಡ ನಾಟಕವನ್ನು ಎತ್ತರಕ್ಕೆ ಏರಿಸಿ ಭಾರತೀಯ ನಾಟಕರಂಗಕ್ಕೆ ಒಂದು ಹೊಸ ಆಯಾಮವನ್ನು ತೆರೆದು ತೋರಿಸಿದರು.

ಈ ನಡುವೆ ಕೆಲವು ಕೋಮುವಾರು ಸಂವೇದನೆಗಳು ಕನ್ನಡ ಸಾಹಿತ್ಯವನ್ನು ಪ್ರವೇಶಿಸಿ ಅನುಭವಗಳ ಭಿನ್ನತೆಯನ್ನು ಎತ್ತಿ ಹಿಡಿದವು. ಅವುಗಳಲ್ಲಿ ಒಡೆದ ಸಂವೇದನೆಗಳು : ಬಂಡಾಯ- ದಲಿತ ಸಂವೇದನೆ, ಮುಸ್ಲಿಂ ಸಂವೇದನೆ, ಸ್ತ್ರೀ ಸಂವೇದನೆಗಳು ಮುಖ್ಯವಾಗಿ ವಿಚಾರವೇದಿಕೆ ಮತ್ತು ಕೆಲವು ಮಹತ್ವದ ಕೃತಿಗಳ ನಿರ್ಮಾಣಕ್ಕೆ ಕಾರಣವಾದುವು. ದಲಿತ ಬಂಡಾಯ ಸಮಾಜ ವ್ಯವಸ್ಥೆಯ ಪ್ರತಿಭಟನೆಯ ರೂಪದಲ್ಲಿ ಬರಗೂರ ರಾಮಚಂದ್ರಪ್ಪ, ದೇವನೂರ ಮಹಾದೇವ, ಜವರಯ್ಯ, ಕುಂವೀ, ವೀರಭದ್ರಪ್ಪ ಮೊದಲಾದವರ ಕೃತಿಗಳಲ್ಲಿ ವ್ಯಕ್ತವಾಯಿತು. ದೇವನೂರರ ಕುಸುಮಬಾಲೆ ಪ್ರಸಿದ್ಧಿ, ಪ್ರಶಸ್ತಿಗಳ ಶಿಖರವೇರಿದ ಕೃತಿ. ಮುಸ್ಲಿಂ ಸಂವೇದನೆಯನ್ನು ಸಾರಾ ಅಬೂಬಕರ್, ಬೊಳುವಾರ್ ಮಹಮ್ಮದ್ ಕುಂಙ, ಮಮತಾಜ್, ಕಟ್ಟಾಡಿ ಮೊದಲಾದವರು ತೀವ್ರವಾಗಿ ಬಿಡೆರಹಿತವಾಗಿ ವ್ಯಕ್ತಪಡಿಸಿ ವಿವಾದಕ್ಕೆ ಒಳಗಾದರು. ಸ್ತ್ರೀ ಸಂವೇದನೆಯನ್ನು ಬಹುವಾಗಿ ಮಹಿಳಾ ಲೇಖಿಕಿಯರು ತಪ್ಪದೆ ಬಹಿರಂಗಗೊಳಿಸಿ ತಮ್ಮ ಅಸ್ತಿತ್ವದ ಕಡೆಗೆ ಗಮನ ಸೆಳೆದರು. ಅಸ್ತಿತ್ವವಾದ ಅನಾಥ ಪ್ರಜ್ಞೆ ಮನೋವಿಜ್ಞಾನ ಮುಂತಾದ ಮನುಷ್ಯನ ಮನಸ್ಸನ್ನು ವಿಶ್ಲೇಶಿಸುವ ಕೃತಿಗಳೂ ಕನ್ನಡದಲ್ಲಿ ಸಾಕಷ್ಟು ಬಂದವು.

ಆಧುನಿಕ ಕನ್ನಡ ಸಾಹಿತ್ಯದ ಈ ಎಲ್ಲ ವಿದ್ಯಮಾನಗಳು ಘಟನೆಗಳು. ಬೆಳವಣಿಗೆಗಳು ಈ ಶತಮಾನದ ಉತ್ತರಾರ್ಧದ ಸಾಹಿತ್ಯವನ್ನು ಉತ್ತುಂಗ ಶಿಖರಕ್ಕೇರಿಸಲು ನೆರವಾದವು. ವಿಶೇಷವಾಗಿ ಯಾವುದೇ ಇತರ ಸಾಹಿತ್ಯ ಕ್ಷೇತ್ರದಲ್ಲಿ ನಡೆಯಲಾರದಷ್ಟು ಪ್ರಯೋಗ, ಸೃಜನ, ಅನ್ವೇಷಣೆಗಳು ಕನ್ನಡದಲ್ಲಿ ನಡೆದವು. ಇದರಿಂದಾಗಿ ನಮ್ಮ ಸಾಹಿತ್ಯ ಗುಣ ಮೌಲ್ಯದಲ್ಲಿ ಶ್ರೇಷ್ಠ, ಬಹುಮಾನ್ಯ ಬಹುಚರ್ಚಿತವಾಗಿ ರಾಷ್ಟ್ರದ ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯಲು ಅರ್ಹವಾಯಿತು. ಬೇಂದ್ರೆಯವರು ನಾಕು ತಂತಿ, ಮೇಘದೂತ, ಸಖೀಗೀತ, ಗರಿಕಾವ್ಯ ಕುವೆಂಪು ಅವರ ರಾಮಾಯಣದರ್ಶನ (ಮಹಾಕಾವ್ಯ) ಪಕ್ಷಿಕಾಶಿ, ಕಾನೂರ ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ವಿಮರ್ಶೆ ನಾಟಕಗಳು, ಮಾಸ್ತಿಯವರ ನೂರಾರು ಕತೆಗಳು, ಚಿಕ್ಕವೀರ ರಾಜೇಂದ್ರ, ಕಾಕನ ಕೋಟೆ ವಿಮರ್ಶೆಗಳು ಶಿವರಾಮ ಕಾರಂತರ ಮರಳಿ ಮಣ್ಣಿಗೆ, ಮೈಮನಗಳ ಸುಳಿಯಲ್ಲಿ, ಚೋಮನದುಡಿ, ಮೂಕಜ್ಜಿಯ ಕನಸು ಕಾದಂಬರಿಗಳು, ಯಕ್ಷಗಾನ ಬಯಲಾಟ ಹಾಗೂ ಚಿಂತನ ಗ್ರಂಥಗಳು. ವಿ.ಕೃ.ಗೋಕಾಕರ ‘ಭಾರತ ಸಿಂಧೂರಶ್ಮಿ’ ಸಮರಸವೇ ಜೀವನ. ದ್ಯಾವಾ ಪೃಥ್ವಿ. ನವ್ಯ ವಿಮರ್ಶೆ ಮುಂತಾದ ಕೃತಿಗಳು. ಅನಂತಮೂರ್ತಿಯವರ ಭಾರತೀಪುರ, ಸಂಸ್ಕಾರ, ಭವ, ಪ್ರಶ್ನೆ ಹಾಗೂ ವಿಮರ್ಶೆಯ ಗ್ರಂಥಗಳು. ಇದೀಗ ಗಿರೀಶ ಕಾರ್ನಾಡರ ಯಯಾತಿ. ತುಘಲಕ, ಹಯವದನ, ಅಂಜುಮಲ್ಲಿಗೆ, ತಲೆದಂಡ, ನಾಗಮಂಡಲ, ಅಗ್ನಿ ಮತ್ತು ಮಳೆ ನಾಟಕಗಳು ಹಾಗೂ ಅವರು ನಟನಾಗಿ ನಿರ್ದೇಶಕನಾಗಿ ಚಿಂತನಶೀಲನಾಗಿ ತೋರಿಸಿದ ಅಪ್ರತಿಮ ಪ್ರತಿಭೆ. ಇವುಗಳು ಈ ಹಿಂದಿನ ೫೦-೬೦ ದಶಕಗಳನ್ನು ‘ಕನ್ನಡ ಸಾಹಿತ್ಯದ ಎರಡನೆಯ ಸುವರ್ಣ ಕಾಲ’ ಎಂದು ದಾಖಲಿಸಲು ಸಾಕಾಗುವದಿಲ್ಲವೆ; ಇಷ್ಟೊಂದು ವಿಫುಲ ಸಮೃದ್ಧ ಶ್ರೀಮಂತ ಸಾಹಿತ್ಯದ ಸಹಸ್ರಮಾನವನ್ನು ಅಭಿಮಾನ ಹೆಮ್ಮೆಯಿಂದ ಆಚರಿಸುತ್ತ ಮುಂದಿರುವ ಭೈರಪ್ಪ ಸಿರಿಸಂಪಿಗೆಯ ಚಂದ್ರಶೇಖರ ಕಂಬಾರ, ಪೂರ್ಣಚಂದ್ರ ತೇಜಸ್ವಿ, ಯಶವಂತ ಚಿತ್ತಾಲ ಮತ್ತು ಎಲ್ಲ ಪ್ರಕಾರದ ಪ್ರತಿಭೆ ಇರುವ ಯುವ ಸಾಹಿತಿಗಳನ್ನು ಹೊಸ ಸಹಸ್ರಮಾನಕ್ಕೆ ಆಹ್ವಾನಿಸೋಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಳಲೀಲೆ
Next post ಆ ಕಡಲ ನೀರ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys