ಒಂಽದ ಕಾಲಕ್ಕೆ ದೆವ್ವ- ಭೂತ – ಪ್ರೇತ ಅಂದ್ರ
ಅಮವಾಶಿ ಕತ್ತಲು – ಸ್ಮಶಾನ, ಓಣಿಯೊಳಗ
ಯಾರರ ಸತ್ತರ ನೆನಪಾಗತ್ತಿತ್ತು
ಬಹುಷಃ ಆಗಿನ ವಯಸ್ಸೂ
ಹಾಂಗಽಇತ್ತು
ಆದರ ಈಗ –
ಈ ವರ್ತಮಾನದ ದೆವ್ವಗೋಳು
ಜನರ ರಕ್ತಾ ಹೀರಿ ಕುಡಿದು
ಕುಕ್ಕರಿಸಿ ಇಟ್ಟು
ಎದಿ ನಡಗೋ ಹಾಂಗ ಮಾಡೋಕ್ಹತ್ತಾವ
ಹಾಡೇ ಹಗಲಽ ಖಜಾನೆ ಒಡೆಯೋದು
ಮೋಸ ಅತ್ಯಾಚಾರ ಮಾಡೋದು
ಬೂದಿ ಮುಚ್ಚಿದ ಕೆಂಡ ಅಲ್ದಽ ಇನ್ನೇನು,
ಭೂತಕಾಲದ ಭೂತಕ್ಕ ಕಾದ ಕಬ್ಬಿಣದ ಬಾರು (ಸಳಿ)
ತೋರಿಸಬಹುದು, ಆದರಽ
ಈ ವರ್ತಮಾನದ ಭವಿಷ್ಯದ ಭೂತಗಳಿಗೆ
ಸರ್ಕಸ್ಸದ ರಿಂಗ್ ಮಾಸ್ಟರನ ಬೇಽಕ ಬೇಕು
ಪಾಪ! ಅನ್ನೋ ಹಾಂಗ ಸೋಗ ಹಾಕಿ-
ತಿರುಗಬೇಡ, ಇನ್ನ ಹುಟ್ಟತ್ತಾಽರ
ಹಾದಿ ಹಾದಿಗೆ ರಿಂಗ್ ಮಾಸ್ಟರಗೋಳ
ನಿನ್ನ ಆಡಿಸ್ತಾರ, ನಿನ್ನೆದಿ ಸೀಳತಾಽರ
ತಂಪ ನೀರು ಸಿಡಿಸಿ ನಗತಾರ
ನಿನ್ನ ಜಗತ್ತಾರ
ನಿನ್ನ ಚಪ್ಪಲಿಯಿಂದ ನಿನಗಽಹೊಡೆದ
ಮಿಂಚೋ ಝರಿಯೊಳಗ ಮುಚ್ಚಿ
ಸಿಹಿ ತಿಂತಾರ
ಕಂಟೆಯೊಳಗಿಂದ ಎದ್ದ
ರಾತ್ರಿ ನೀನು ಕುಣಿದರೂ
ಗ್ಯಾಸ್‌ಲೈಟ್‌ಗೆ ಅಂಜತೀಯಪಾ
ಕೊನೆಗೆ ನಿನ್ನ ಕತ್ತಲನಽ
ಎಳಕೊಂಡು ಜಿರಿ ಜಿರಿ ಹುಳಾ ಹುಪ್ಪಡಿಗೋಳ
ಸಂಗೀತ ನಿರ್ದೇಶನದಾಗ ನೀ ಕ್ಯಾಬರೆ ಮಾಡಲೆ
ಕಪ್ಪು ಬಿಳುಪಿನ ಬೆಳಕಿಗೆ ಹೊಂದಿಕೊಳ್ಳಾಕ
ತಯಾರಾಗಕ್ಹಂತ್ತಾಂಗಽ
ಬೆಳಗಿನ ಸೂರ್ಯ ಹುಟ್ಟೇಽಬಿಡ್ತಾನ
ಆಗ ನೀನು ಕುಕ್ಕರಿಸಿ ಬೀಳತಿ
*****