ಅಯ್ಯ ನಾ ಹುಟ್ಟುವಾಗ
ಬಟ್ಟಬಯಲೆ ಗಟ್ಟಿಯಾಯಿತ್ತು.
ಆ ಬಟ್ಟಬಯಲು ಗಟ್ಟಿಯಾದ
ಬಳಿಯಲ್ಲಿ ನಾ ಜನನವಾದೆ.
ಜನನವಾದವರಿಗೆ ಮರಣ ತಪ್ಪದು.
ಅದೇನು ಕಾರಣವೆಂದರೆ,
ಮರವೆಗೆ ಮುಂದು ಮಾಡಿತ್ತು.
ಕರ್ಮಕ್ಕೆ ಗುರಿ ಮಾಡಿತ್ತು.
ಕತ್ತಲೆಯಲ್ಲಿ ಮುಳುಗಿಸಿತ್ತು.
ಕಣ್ಣುಗಾಣದ ಅಂಧಕರಂತೆ,
ತಿರುಗುವದ ನೋಡಿ ನಾ ಹೆದರಿಕೊಂಡು,
ಎಚ್ಚತ್ತು ಚಿತ್ತವ ಸುಯಿಧಾನವ ಮಾಡಿ,
ನಿಶ್ಚಿಂತವಾಗಿ ನಿಜವ ನೆಮ್ಮಿ, ಅರುಹ ಕಂಡೆ.
ಅರುಹಿಂದ ಆಚಾರವ ಕಂಡೆ.
ಆಚಾರವಿಡಿದು ಗುರುವ ಕಂಡೆ.
ಗುರುವಿಡಿದು ಲಿಂಗವ ಕಂಡೆ.
ಲಿಂಗವಿಡಿದು ಜಂಗಮವ ಕಂಡೆ.
ಜಂಗಮವಿಡಿದು ಪಾದೋದಕ ಪ್ರಸಾದವ ಕಂಡೆ.
ಆ ಪಾದೋದಕ ಪ್ರಸಾದವಿಡಿದು ಮಹಾಶರಣ ಕಂಡೆ.
ಆ ಮಹಾ ಶರಣ ಪಾದವಿಡಿದು ಎನ್ನ ಕಾರಗುಣವಳಿಯಿತ್ತು.
ಕರಣ ಗುಣ ಸುಟ್ಟವು.
ಲಿಂಗಗುಣ ನಿಂದಿತ್ತು.
ಭಾವಬಯಲಾಯಿತ್ತು. ಬಯಕೆ ಸವೆಯಿತ್ತು.
ಮಹಾದೇವನಾದ ಶರಣನ ಪಾದವಿಡಿದು ನಿಜಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ