ವರ್ಷಕ್ಕೊಮ್ಮೆ ಬರುವ ಕುಲಾಯಿಯವರು
ಆಗ ತಾನೆ ಮುಂಗಾರು ಮುಗಿದು ಹಸಿಯಾದ
ಅಂಗಳದಲ್ಲಿ ಠಾಣೆ ಹೂಡುತ್ತಾರೆ.
ಮನೆಯೊಳಗಿಂದ ಹೊರ ಬರುತ್ತವೆ
ಕಿಲುಬು ಹಿಡಿದ ತಾಮ್ರದ ಪಾತ್ರೆಗಳು.
ನಾವು ನೋಡುತ್ತಿರುವಂತೆಯೆ ಒಬ್ಬ
ನೆಲ ಅಗೆದು ಕುಲುಮೆ ತಯಾರಿಸುತ್ತಾನೆ
ಇನ್ನೊಬ್ಬ ಕಿಲುಬು ಹೆರೆಯತೊಡಗುತ್ತಾನೆ.
ತುದಿಗಾಲಲ್ಲಿ ಕುಳಿತು ಕಾಯುತ್ತೇವೆ ನಾವು
ಯಾವಾಗ ಪಾತ್ರೆಗಳು ಕುಲುಮೆಯ ಮೇಲೆ
ಬಂದಾವು ಯಾವಾಗ ತಿದಿಯೊತ್ತಿ ಬೆಂಕಿಯ
ಕೆಂಡಗಳು ಹೊಳೆದಾವು ಯಾವಾಗ
ತವರದ ನೀರಗುಳ್ಳೆಗಳು ಎದ್ದಾವು
ಎಂದು, ಕುಲಾಯಿಯವರಿಗೆ ಮಾತ್ರ
ಯಾವ ತರಾತುರಿಯೂ ಇಲ್ಲ. ಅವರು ಆಗಾಗ
ತಮ್ಮ ಕುಂಡೆಗಳನ್ನು ತುರಿಸುತ್ತಲೇ ಇರುವರು.
*****