“ಆಕಾಶ” ನೀಲಿ ಇದ್ದಾಗೆಲ್ಲ
ನಮ ರಕ್ತ ಕೆಂಪು, ಕಂಪಾಗಿ
ಕವಲೊಡೆಯುತ್ತದೆ.
ಅದಕ್ಕೆ ಮೋಡ ತುಂಬುತ್ತ
ಗಟ್ಟಿಯಾಗುತ್ತಿದ್ದರೆ
ನಮ್ಮ ರಕ್ತ ಕಲಬೆರಕೆಯಾಗುತ್ತದೆ
“ಬ್ರಹ್ಮಾಂಡ” ತೇಜ ಪುಂಜವಾಗಿದ್ದರೆ
ನಮ್ಮ ಮಿದುಳು, ನರತಂತುಗಳು
ಚಿಗಿಯುತ್ತವೆ
ಅವುಗಳಿಗೆ ಗ್ರಹಣ ಬಡಿದರೆ
ನಮಗೆ ಕೋಮ ಹಿಡಿಯುತ್ತದೆ
“ನೀರು” ಪವಿತ್ರ
“ಗಾಳಿ” ಶುದ್ಧವಿದ್ದರೆ
ಗಂಗೆ ಯಮುನೆಯರಾಗಿ
ಹೃದಯ ವೈಶಾಲ್ಯತೆ ಹೊಂದಿ
ಮಾನವೀಯ ಮೌಲ್ಯಗಳೊಂದಿಗೆ
ಮೆರೆಯುತ್ತೇವೆ
ಅವೇ ಮದ್ಯವಾಗಿ
ವಿಷ ವರ್ತುಲಗಳಾದರೆ
ನಮಗೆ ಮಸಣ ಕರೆಯುತ್ತದೆ
“ಶಾಂತಿಯೇ ಸ್ವರ್ಗ
ಅಶಾಂತಿಯೇ ನರಕ” ದ
ಮೌಲ್ಯ ಮಾಪನದೊಳಗೆ
ಹಿಗ್ಗಿ ಕುಗ್ಗಿ ಸುಸ್ತಾಗಿ
ಎಲ್ಲಿ
ಗೊದ ಮೊಟ್ಟೆಗಳಾಗಿಯೇ
ಉಳಿಯುತ್ತೇವೆಯೋ? ಏನೋ?
ಎಂಬ ಹೆದರಿಕೆ!!
*****