ಅಡುಗೆ ರಸರುಚಿ ವಾಸನೆಯ ಮೋಹ ಸವಿಗೆ
ಬಾಗದವನಾರು ಹೇಳು ?
ಕುರಿಯ ಕಾವ ಕುರುಬನೀಂ; ಧರೆಯ ಕಾವ ರಾಜಗೆ
ಪಕ್ವಾನ್ನ ನಾಕಕೆ ಅನ್ಯ ಕೀಳು
ಮೊಸರನ್ನ ಸಂಡಿಗೆ ಉಪ್ಪಿನಕಾಯ ಲೀಲಾಂಮೃತಕೆ
ಸಖ್ಯನಾಗದವನಾರು ಧೀರ ?
ರಣರಂಗ ಕಲಿಯೇನು; ಕಾಳಗದ ಹುಲಿಯೇನಿದಕೆ
ವಿಶ್ವ ಅಡುಗೆ ಶಾಲೆಗೆ ಕಿಂಕರ!
ಹಂಚಿನೆಣ್ಣೆಯ ಕೆರೆಯಲಿ ಚೆಕ್ಕಲಿಯ ಈ ಸಾಟಿ
ಕಂಡ ಬಾಯ್ಗೆಲ್ಲ ಕುಣಿದಾಟ
ಒಲೆಯ ಕೆಂಡದ ಮೇಲೆ ಹಪ್ಪಳದ ಚಲ್ಲಾಟ
ಉಂಡ ನಾಲ್ಗೆಲ್ಲ ಜಿಗಿದಾಟ
ನಯನ ಹೋಳಿಗೆ ಕಂಪು; ಮಾಡುವದು ಹೋಂಪುಳಿ
ಬಿಸಿ ಕಡಬು ತುಪ್ಪ ಸಾಕು!
ಬೆಣ್ಣೆ ಮಜ್ಜಿಗೆ ತರುವ ಕಡಗೋಲಿನಬ್ಬರ ಕೇಳಿ
ಬಾಯಿ ನೀರಾಗಲೇ ಬೇಕು
ದಪ್ಪ ಚಪಾತಿಯ ಮೇಲೆ ಕಡಲೆಯುಸುಳೆಯ ಮೇಲ್ಮೆ
ಮೊಸರು ಸುರಿಯಬೇಕು
ಸರ್ವ ರಸಾನ್ನಗಳ ಕೂಟ; ಕೈ ಬಾಯಿಗೆಲ್ಲ ಒಲ್ಮೆ
ರುಚಿಯೂಟ ನೋಡಬೇಕು
*****