ಏಕೀಕರಣದ ಪೂರ್ವದಲ್ಲಿ ಬರೆದ ಕವನ
೧
ಒಂದಿರುಳ ಕನಸಿನಲಿ
ಕನ್ನಡಮ್ಮನ ಕೇಳಿದೆನು
‘ಬೇಕು ನಿನಗೇನು ಎಂದೂ’
೨
ಪೌರ್ಣಿಮೆಯ ಚಂದ್ರನಿಗೆ
ಕಲೆಯ ತೆರದೀ ನನಗೆ
ಒಡೆದ ಕರ್ನಾಟಕದ ಕುಂದು ಎಂದೂ
೩
ಕೋಡಿಯೊಡೆದಿಹ ಕಣ್ಣೀರು
ಹೊಳೆಯಾಗಿ ಬಿಡದೆ ಸುರಿಸಿ
ಮನಬಿಚ್ಚಿ ಮೊರೆಬಿದ್ದಳೆನಗೆ
೪
ಹುಲಿಯ ಬಾಯಿಗೆ ಬಿದ್ದು
ಕೊರಗಿ ಕಿರುಚುತಲಿರುವ
ಕರುವಿನಾ ತೆರದಿ ಕೂಗಿದಳೆನಗೆ
೫
‘ಸುತ್ತೆಲ್ಲಾ ಸವಿಹಣ್ಣು
ತುಂಬಿ ತುಳುಕಿದರೇನು?
ಹೊನ್ನಿನಾ ಸಂಕಲೆಯು ಸುತ್ತಿಹುದೆಂದೂ
೬
ನನಗೊಂದೇ ವಚನವು ಬೇಕು
ಏಕೀಕರಣವು ಬೇಕು
ನಿಮ್ಮೆಲ್ಲರ ತ್ಯಾಗ ಸಾಹಸ ಬೇಕು
*****