ದಿಳ್ಳಿಯೊಂದರ ಒಳಗೆ, ದಿಬ್ಬವೊಂದರ ಮೇಲೆ,
ದೊಡ್ಡ ದೀವಿಗೆಯಡೆಗೆ ನಾ ಕುಳಿತಿದ್ದೆ.
ಯಾವುದೋ ಎಡೆಯಲ್ಲಿ; ಹಣತೆಯೊಂದರ ಮೇಲೆ
ಮಿಣುಗುವಾ ಜಿನುಗುದೀವಿಗೆ ಕಂಡಿದ್ದೆ
ಬೀಸುಗಾಳಿಯ ಮೇಲೆ ಈಸು ಬಾರದೆ ಸಾಗಿತ್ತು
ಇಲ್ಲಿಯೋ ಅಲ್ಲಿಯೋ ಎಂಬಂತೆ
ಮುಳುಗಿ ಮರೆಯಾಗಿ ಮೇಲೆದ್ದು ಕಂಡಿತ್ತು
ಚಿಕ್ಕ ಚುಕ್ಕೆಗೂ ಜೀವ ದಾಹವಂತೆ!
ಕಂಡಾಗ ಕಣ್ಣೊಮ್ಮೆ; ಮೂಗು ಮುನಿಸಿ ಮುರಿದಿತ್ತು!
ಹಿರಿದಕ್ಕೆ ಕಿರಿದರಾ ಮಾತೇಕೆ?
ಜಂಭ ಕೂಗಿತ್ತು, ಹೃದಯ ಕೇಕೆ ಹಾಕಿತ್ತು!
ಕಿರಿದೆಲ್ಲ ಕರಿದೆಂದು ಅನ್ನ ಬೇಕೆ ?
ದೀವಿಗೆಯ ಬೆಳಗಳಿದು; ಗುಡ್ಡದಿ ಕೆಳಗಿಳಿದು
ಹೃದಯ ಕುಸುಮವರಳಿ ಹೊರಟಿದ್ದೆ
ಹಿರಿದು ಮೆರೆವಾಗ ಕಿರಿದನ್ನು ಕಾಣಲೆಂದು
ಜೀವನವೇ ದ್ವಂದ್ವಮಯದೊಳೊಂದೆನಲು ಅರಿತಿದ್ದೆ
*****