ಯಾರಿಹರು ಬನ್ನಿರೋ; ದೀಪವೊಂದನು ತನ್ನಿರೋ
ಕಡಿಯಿತೊಂದೇನೋ ಈ ಕತ್ತಲಲ್ಲಿ
ತಾಳಲಾರೆನು; ಎಲ್ಲಿ ಹೋಗಿರುವಿರೋ?
ನಾ ಮಾಡಬಲ್ಲೆನೇನು ಕಾವಳಲ್ಲಿ !
ಅವ್ವ ಬರಲಿಲ್ಲ, ಅಕ್ಕ ಇಲ್ಲಿಲ್ಲ, ಮತ್ತಾರ ಸುಳಿವಿಲ್ಲ
ನಮ್ಮಮ್ಮ ಹೋದವಳು ಬರಲೇ ಇಲ್ಲ
ಯಾರು ಕಾಣುವದಿಲ್ಲ; ನೋವು ಕೇಳದಲ್ಲ !
ನಾನೇ ಒಬ್ಬವನು; ಕತ್ತಲು ಜಗವೆಲ್ಲ !
ನೋವು ಏರತ್ತಿದೆ, ಅರಿವು ಹಾರುತ್ತಿದೆ; ಮಾಡಲೇನು?
ಬಾಯತುಂಬೇನು? ಬುರುಗು; ಉಗುಳಲ್ಲ !
ಹಾವೇನು? ಅಯ್ಯೋ ತಿಳಿಯಲಿಲ್ಲೆನಗೆ ಹಾವಿನೀ ವಾಸ!
ಹಾ! ಉಸಿರಿದ್ದ ಅಜ್ಜ; ಮರೆತೆನಲ್ಲ !
ಸರಿಯುತಿದೆ, ಆ ಶಬ್ದ ಸರಸರನೆ ಓಡುತ್ತಿದೆ ಆಚೆಗೆ
ಅಕೋ ! ಕತ್ತಲೆಯೊಳು ಕರಿಯ ಹಾವು !!
ಕಡಿದಾಗ ಅರಿದೆ, ಮೊದಲೇ ಹೊಳೆಯಲಿಲ್ಲವೆನಗೆ
ಅರಿವ ನಾ ಮರೆತು ಬಂದಿತೀ ನೋವು
*****