ದಿನಕ್ಕೊಂದು ಆಟ ಮರದ ತುಂಬ ಮಿಡಿ
ಮಿಡಿತದ ಹಕ್ಕಿ ಹಾರಾಟ ಗಾಳಿ ಮಾತು
ಹೊಳೆದಾಟಿ ಬೇಲಿದಾಟಿ ಹಿಡಿದ ಚಿಟ್ಟೆ
ಕೈಗೆ ಅಂಟದ ಬಣ್ಣಗಳು ಆಚೆ ಕಾಮನ ಬಿಲ್ಲು.
ದೊಡ್ಡ ರೆಂಬೆಯ ಹಿಡಿದ ಎಳೆದ ಎಲೆ
ಬೆರಳುಗಳು ಚೀಪಿ ಚೀಪಿ ರಸಪಾಕ
ಹಕ್ಕಿ ರೆಕ್ಕೆ ತುಂಬ ಹಾರಿದ ತೇಲುಪಟ
ಜೋಕಾಲಿ ಜೀಕೀದ ಹಾಯಿ ಎದೆಯ ಹಾಡು.
ಯಾವ ಸಂಘರ್ಷಗಳಿಲ್ಲದ ಧರ್ಮದ ಗೂಡು
ಎದೆಯಿಂದ ಎದೆಗೆ ಹರಡಿದ ಪ್ರೀತಿ ಸ್ನೇಹ
ಅಂಗೈಯ ಮೃದು ಸೋಕಿದ ಕ್ಷಣಗಳು
ಚಲಿಸುವ ಸೂರ್ಯ ಹೊಳೆದಂಡೆಯಲಿ ನಿಂತುಬಿಟ್ಟ.
ಪರಿವರ್ತನೆಯ ಕನಸುಗಳ ಮೇಲೆ
ದಾಟಿ ಮನಸ್ಸು ಹೃದಯ ಒಂದಾದ ನಾದ
ಬಿಳಿ ನುಣುಪ ಮರಳು ಕಪ್ಪೇಗೂಡಿನಲಿ
ಅಂಗೈತುಂಬ ಸಂಜೇ ಮಲ್ಲಿಗೆ ರಂಗುಮದರಂಗಿ.
ಆಟ ಮುಗಿಯುವುದೇ ಇಲ್ಲ ಹೊಳೆ ಹರಿಯುತ್ತಿತ್ತು.
ಮರದ ತುಂಬ ಹೋತುಬಿದ್ದ ಮಾವಿನಹಣ್ಣುಗಳು
ಹೂವಿನಿಂದ ಹೂವಿಗೆ ಹಾರುವ ಚಿಟ್ಟೇ ಪಟ
ಮಕ್ಕಳಿಗೆ ನಂದನವನದಲಿ ಸಂಭ್ರಮದ ಹೋಳಿ.
*****