ನಾಯಿಗಳಿದ್ದಾವೆ! ಎಚ್ಚರಿಕೆ! ಎಂದು
ಯಾಕೆ ಬೆದರಿಸುತ್ತೀರಿ, ಫಲಕದ ಹಿಂದೆ ನಿಂದು?
ನಾವು ಬರೇ ಈ ಬೀದಿಯಲ್ಲಷ್ಟೆ ಹೋಗುತ್ತೇವೆ
ಮೌನ ಅಸಹ್ಯವಾದಾಗ ಮಾತಾಡುತ್ತೇವೆ
ಅಳದಿರುವುದಕ್ಕಾಗಿ ಒಮ್ಮೊಮ್ಮೆ ನಗುತ್ತೇವೆ
ನಾಯಿಗಳನ್ನು ಛೂ ಬಿಟ್ಟು ಬೆದರಿಸುತ್ತೀರಿ ನೀವು
ನಾಯಿಗಳಿದ್ದಾವೆ ಸ್ವಾಮಿ ಗೊತ್ತು ನಮಗೆ
ನಿಮ್ಮ ನಾಯಿಗಳಿದ್ದಾವೆ ಕಾರುಗಳಿದ್ದಾವೆ
ಪೋಷ್ ಹೊಟೇಲುಗಳಿವೆ ಕ್ಯಾಬರೆಸ್ವರ್ಗದ ದೇವರು ನೀವು
ಈಚೆಗೆ ಬೀದಿಗಳಲ್ಲಿ ನಾವೂ ಇದ್ದೇವೆ ಅಸ್ಪೃಶ್ಯ ವರ್ಗದ ಜನರು
ಅಪರಿಚಿತರಂತೆ ನೋಡುವುದೇಕೆ, ಸ್ವಾಮಿ?
ನಮಗೆ ಬಹು ಹಳೆಕಾಲದ ಪರಿಚಯವುಂಟು ಮರೆತಿರ?
ಹಿಂದೆ ಬ್ಯಾಬಿಲೋನಿನಲ್ಲಿ ನಿಮ್ಮ ಗಾಣ
ಎಳೆದವರು ನಾವು
ಮಾರುಕಟ್ಟೆಗಳಲ್ಲಿ ನಮ್ಮನ್ನು ಹರಾಜಿಗೆ
ಮಾರಿದವರು ನೀವು
ನಿಮ್ಮ ಊಳಿಗದ ಗೂನು ಈ ಬೆನ್ನ ಮೇಲುಂಟು
ನಮ್ಮ ಮಕ್ಕಳಿಗೂ ಇದರ ಹೆದರಿಕೆಯುಂಟು
ಸಂಧಾನಗಕ್ಕಾಗಿ ನೀವು ಬಂದದ್ದೇನೋ ಖರೆ
ಆದರೆ ಹೇಗೆ ಮಾತಾಡಿದರೂ
ನಮ್ಮ ಭಾಷೆ ನಿಮಗೆ ಅರ್ಥವಾಗುವುದಿಲ್ಲ
ಹಾಗೆಂದು ನಿಮ್ಮ ಅಂಬೋಣ
ಎನು ಮಾಡೋಣ, ಹೇಳಿ
ನೀವು ಪ್ರಯತ್ನಿಸದೇನೆ, ನಿಮಗಿಷ್ಟವಿಲ್ಲದೇನೆ
ಅರ್ಥವಾದೀತು ಎಂದಾದರೂ ಒಮ್ಮೆ
ಇಷ್ಟಕ್ಕೆಲ್ಲಾ ಯಾಕೆ ಹೀಗೆ ಹಿಸ್ಟೀರಿಯಾ ಬಡಿದವರಂತೆ ಕೂಗುತ್ತೀರಿ?
ಸಾಹಿತ್ಯ ಸಂಸ್ಕಾರ ಸಂಪತ್ತು ಅಧಿಕಾರ ಎಲ್ಲವೂ ನಿಮ್ಮದೇ ಸ್ವತ್ತು
ಎಂದ ಮೇಲೆ ಯಾಕೆ ಹೀಗೆ ಕೂಗಾಡುತ್ತೀರಿ?
ಕ್ರಾಂತಿಗಳು ಬಂದಿವೆ ನಿಜ
ಬಂದು ಹೊರಟುಹೋಗಿವೆ
ಅವು ಹೊರಟುಹೋದ್ದರಿಂದಲೇ ನಿಮ್ಮ ಪೀಳಿಗೆ ಬೆಳೆದಿದೆ
ಬೆಳೆಯುತ್ತಲೇ ಇದೆ
ಎಂದ ಮೇಲೆ ಸುಮ್ಮನೆ ಯಾಕೆ ಹೀಗೆ ಒದ್ದಾಡುತ್ತೀರಿ?
ಯಾಕೆಂದರೆ, ಚರಿತ್ರೆ ಆವರ್ತಿಸುವುದಿಲ್ಲ
ವರ್ತಮಾನ ಹೀಗೇ ನಿಂತಿರುವುದಿಲ್ಲ
ಏನೋ ಸಂಭವಿಸಲಿದೆ-ಎಂದೆ?
ಇದು ನಮಗೆ ಗೊತ್ತು
ನಮಗೆ ಗೊತ್ತೆಂದು ತಿಳಿದದ್ದರಿಂದಲೆ
ನಮ್ಮ ಕಂಡಾಗ ನಿಮ್ಮ ಮುಖಕ್ಕೊಂದು ಅಪೂರ್ವ
ಪ್ರೇತಕಳೆ ಬರುತ್ತದೆ: ಇದು ಸಹಜ
*****