ಹೌದು ಗೆಳೆಯಾ ಇದು
ಅಡುಗೆ ಮನೆ ಸಾಹಿತ್ಯವೇ!
ಒಗ್ಗರಣೆಯ ಸಾಸಿವೆ ಸಿಡಿದಾಗ
ಮನವೂ ಸಿಡಿದು ಸಾವಿರ ಹೋಳಾಗಿ
ಒಲೆಯ ಮೇಲೆ ಹುಳಿ ಕುದಿವಾಗ
ಎದೆಯೂ ಕುದ್ದು ಕುದ್ದು ಹದವಾಗಿ
ಚಾಕು ಈಳಿಗೆ ಮಣೆಗಳು ತರಕಾರಿ ಹೆಚ್ಚುವಾಗ
ಭಾವನೆಗಳ ಹದವಾಗಿ ಕತ್ತರಿಸಿ ಪದವಾಗಿ
ಉಪ್ಪು ಹುಳಿ ಕಾರಗಳ ಬೆರೆಸಿ ಸಮವಾಗಿ
ಮನದಲ್ಲೇ ಗೀಚಿದ ನಾಲ್ಕು ಸಾಲಿಗೆ
ಉಪ್ಪೊ ಹುಳಿಯೋ ಕಾರವೋ
ಹೆಚ್ಚು ಕಡಿಮೆಯಾಗಿ
ಮುಸುರೆ ತಿಕ್ಕುವಾಗಲೋ
ನೆಲ ಸಾರಿಸುವಾಗಲೋ
ಮೂಡಿದ ಎಂತದೋ ಸ್ಪೂರ್ತಿ
ಎಲ್ಲಾ ಮುಗಿಸಿಟ್ಟು
ಕೈ ಒರೆಸಿ ಬರುವಾಗ
ಮಟಾ ಮಂಗಮಾಯವಾಗಿ
ಮತ್ತೊಮ್ಮೆ ಒಂದೊಂದೇ ಪದ
ನೆನಪಿಸಿ ತಿಣುಕುವಾಗ
ಹಾಲುಕ್ಕಿ, ಮಗು ಬಿಕ್ಕಿ ಎಲ್ಲಾ
ಅಯೋಮಯವಾಗಿ
ಬರೆಯಲಾಗದೇ ಉಳಿದ ಅವ್ಯಕ್ತಗಳು
ಸದಾ ಬೆಂಬಿಡದ
ಅಡುಗೆ ಮನೆ ಕೆಲಸದಂತಾಗಿ.
ಕುದ್ದು ಸಿಡಿದು ಕತ್ತರಿಸಿ ಬಿದ್ದುಕೊಂಡಿದ್ದ
ಭಾವಗಳು ಆದಿ ಇಲ್ಲದೇ ಅಂತ್ಯವಿಲ್ಲದೇ
ಇಷ್ಟಿಷ್ಟೇ ಎಲ್ಲೆಲ್ಲೋ
ಹಾಲಿನ ಲೆಕ್ಕದ ಪುಸ್ತಕದಲ್ಲೋ
ಕ್ಯಾಲೆಂಡರಿನ ಅಂಕಿಯ ಪಕ್ಕದಲ್ಲೋ
ಸಾಮಾನಿನ ಪಟ್ಟಿಯ ಹಿಂದೆಲ್ಲೋ
ವ್ಯಕ್ತವಾದರೂ ಅನಾಥವಾಗಿ
ಉಪ್ಪು ಹುಳಿ ಕಾರಗಳ
ಹದಬೆರೆತ ಖಾದ್ಯವೆಂದು
ಎದೆ ತಟ್ಟಿ ಹೇಳಲಾಗದ
ಅಲ್ಲಿಷ್ಟು, ಇಲ್ಲಿಷ್ಟು ಭಾವೋನ್ಮಾದ
ಹರಿದು ಬಿದ್ದು
ಕಲಸುಮೇಲೋಗರವಾದ ಇದು
ಹೌದು ಗೆಳೆಯ
ಅಡುಗೆ ಮನೆ ಸೇರಿದ ಮನದ ಸಾಹಿತ್ಯವೇ.
*****