ಸ್ವಪ್ನರಾಜ್ಯದ ಭಾವದೋಜೆಯ
ನಡುವೆ ನಡೆದೆನು ತೆಪ್ಪಗೆ,
ಮನೋಭೂಮಿಯನುತ್ತು ಅಗಿಯಿತು
ತೇಜಪೂರಿತ ಘಟನೆಯು!
ಮೆತ್ತಗಾಸಿದ ತಲ್ಪತಳವೇ
ನನ್ನ ಯಾತ್ರೆಯ ಭೂಮಿಯು!!
ಮೇಲೆ ಭಾನುವು ಬಿಳಿಯ ಮುಗಿಲು
ಕೆಳಗೆ ಕೊರಕಲು ದಾರಿಯು;
ಹಾದು ನಡೆದೆನು ಏಳುಬೀಳುತ
ಏರಿದೆನು ಗಿರಿ ಮೇಲಕೆ!
ಬೆಟ್ಟತಪ್ಪಲು ಜಾರುಕಲ್ಗಳು
ಬೀಳುವೆನೊ ಎಂಬೆದರಿಕೆ!!
ಅಮರಲೋಕದ ಹೂವುತೋಟದ
ನೆನಪು ಸುಳಿಯಿತು ಮನದಲಿ
ಮಂದಮಾರುತ ಎತ್ತಿತಂದಾ
ಅಮರ ಗಾನವ ಕೇಳಿದೆ,
ಕೇಳಪೋದೆನು-ಶೂನ್ಯಲೋಕವು
ಗಾಳಿ, ಗಿರಿದುದಿ, ಮರಗಳೆ!
ಐಂದ್ರಜಾಲಿಕ ದೃಶ್ಯದಂತೆಯೆ
ಬೆಟ್ಟಗವಿಯಿಂ ಪಕ್ಕನೆ
ಇಂಪುಗಾನದ ದನಿಯ ಅಲೆಯೊಳು
ತನ್ನ ರೂಪನು ಸೇರಿಸಿ
ಬಂದಳೊರ್ವಳು ಇಂದುವದನೆಯು
ಇಂದು ರೂಪವ ಹಳಿಯಿಸಿ.
ಸುಳಿದಳೀಚೆಗೆ ಬೆಟ್ಟದುದಿಯಲಿ
ನಿಂತ ನಾನು ನನ್ನನು!
ಮರೆತು ನೋಡಿದೆ ವಿಶ್ವನಿರ್ಮಿತ
ಮಾಯೆ ರೂಪವ ನೆನೆದೆನೊ;
ರೂಪ ನೋಡುತ ನೀಲ ಬಾನಿನ
ಸ್ವಚ್ಚ ಶೀಲವ ಹಳಿದೆನೊ!
ಹೆರಳ ಕುರುಳು ಮುಡಿಯ ಮುಗುಳು
ಕಾಂತಿ ಬೀರುವ ಕಂಗಳು
ಬಾಲೆ ಸದ್ಗುಣೆ ಹಂಸಯಾನೆಯು
ಜಾಣೆ ನೋಟಕೆ-ಕೆನ್ನೆಯು
ಒಂಟಿಸರವನು ರತ್ನಮಾಲೆಯ
ಕಟ್ಟಿ ನೂಪುರ ರನ್ನೆಯು!
ನೋಡಿ ಹಿಗ್ಗಿದೆ ವನವು ಗಾಳಿಯು
ಹಿಗ್ಗಿತೆನ್ನೊಡೆ ಬೀಸುತ
ದೂರ ಸರಿದುವು ಸುತ್ತು ಸೇರಿದ
ಹಕ್ಕಿಮಿಗಗಳು ಭ್ರಮರವು;
ಒಬ್ಬನಾದೆನು ಮುಂದೆ ಸರಿದೆನು
ಪೋದ ಧೈರ್ಯವ ಕರೆದೆನು!
ಹೂವು ಎಲೆಗಳು ಎಲ್ಲಿ ಅಣಿಕಿಪು-
ವೆಂದು ನಾಚುಗೆಪಟ್ಟನೊ!
ಗಿರಿಯ ಮೇಲ್ಗಡೆ ಚೆನ್ನಕಾಣುವ
ಮುಗಿಲು ನಗುವುದೊ ಎಂದು ನಾ
ಭಾವಿಸುತ್ತಲಿ, ‘ಯಾರ ನೋಡುವಿ’
ಎಂದು ಕೇಳಿದೆನವಳನು.
‘ಯಾರ ಇಲ್ಲವು ಹಣ್ಣು ಹೂಗಳ-
ನಾಯ್ದು ಪೋಗಲು ಬಂದೆನೊ!
ಕಂಡು ಸೋತೆನು ಮನವು ಬಿಮ್ಮನೆ
ಎನ್ನ ನಿಲಿಸಿತು-ಇಲ್ಲಿಯೆ’
ಎಂದು ಹೇಳಲು, ‘ರಮಣಿ ಹೆದರದಿ
ರೆ’ಂದು ಪಕ್ಕದಲಿರಿತೆನೊ!
ಸರಸವಾಟದಲೊತ್ತು ಕಳೆಯುತ
ಮಾತುಮಾತಲಿ ಮುಳುಗುತ;
ನೋಟ ಬಿಂಬಾಧರವ ಹೊಕ್ಕಿತು,
ಕಣ್ಣು ಕಣ್ಣನು ನುಂಗಿತು!
ದೃಷ್ಠಿಹೊರಳಿತು-ತನುವು ಕೊಂಕಿತು;
ಕೈಯು ಎದೆಯಲಿ ನುಸುಳಿತು!!
ಮುದ್ದು ಮಾತಿನ ಮುದ್ರೆ ಕೆನ್ನೆಲಿ,
ಅಭಯ ಸೂಚನೆ ಬಾಯಲಿ-
ಜಾಣೆ ನಾಚುತಲಂಜಿ ಅಪ್ಪಿತು,
ಬಿಗಿದ ಅಪ್ಪಗೆ ಸುಖದಲಿ
ಇರಲು-ಪಾಪೀ ನಿದ್ದೆವಂಚನೆ
ಮಾಡಿ ಕೆಡಿಸಿತು ಸುಖವನು!!!
*****